ಬೆಂಗಳೂರು: ಹೆತ್ತವರಿಂದ ತ್ಯಜಿಸಲ್ಪಟ್ಟ ಅನಾಥ ಮಗುವಿಗೆ ಸುರಕ್ಷಿತ ಆಶ್ರಯ ಒದಗಿಸುವ, ಆ ಮೂಲಕ ಶಿಶು ಮರಣ ಪ್ರಮಾಣ ಕುಗ್ಗಿಸುವ ಉದ್ದೇಶದೊಂದಿಗೆ ಸ್ವಯಂಸೇವಾ ಸಂಸ್ಥೆಯೊಂದು ಮಮತಾ ಕಾ ಜೋಲಾ (ಮಮತೆಯ ತೊಟ್ಟಿಲು) ಎಂಬ ವಿನೂತನ ಯೋಜನೆ ಜಾರಿಗೊಳಿಸಿದೆ.
ಅಸಹಜತೆ ಅಥವಾ ಇಷ್ಟವಿಲ್ಲದ ಕಾರಣಕ್ಕೆ ಜನಿಸಿದ ಮಗುವನ್ನು ಮಹಿಳೆಯರು ಕಸದ ತೊಟ್ಟಿ, ಖಾಲಿ ಜಾಗ ಅಥವಾ ಇತರ ಅನಾರೋಗ್ಯಕರ ಸ್ಥಳಗಳಲ್ಲಿ ಎಸೆದು ಹೋಗುತ್ತಾರೆ. ಇಂಥ ಸಂದರ್ಭದಲ್ಲಿ ಮಗು ಮೃತಪಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಶಿಶುಗಳ ರಕ್ಷಣೆಗೆ ವಿಶ್ರಾಂತಿ ಎನ್‌ಜಿಒ “ಮಮತೆಯ ತೊಟ್ಟಿಲು’ ಪರಿಚಯಿಸಿದೆ.
ಭಾರತೀಯ ದಂಡ ಸಂಹಿತೆ 317ರ ಪ್ರಕಾರ ಮಗುವನ್ನು ಹೀಗೆ ಎಸೆದು ಅಥವಾ ಬಿಟ್ಟು ಹೋಗುವುದು ಶಿಕ್ಷಾರ್ಹ ಅಪರಾಧ. ಪೋಷಕರಿಂದ ದೂರವಾಗುವ ಮಕ್ಕಳು ಮುಂದೆ ಏನಾದರು ಎಂಬ ಮಾಹಿತಿಯೇ ಇರುವುದಿಲ್ಲ. ಯಾವುದೇ ಮಗುವಿನ ಬದುಕು ಬರಡಾಗಬಾರದು ಎಂಬ ಆಶಯದೊಂದಿಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಹೇಗಿದೆ ಯೋಜನೆ?: ಸಂಸ್ಥೆಯ ಕೇಂದ್ರಗಳು, ಪಿಎಚ್‌ಸಿ, ಆಸ್ಪತ್ರೆ ಸೇರಿ ವಿವಿಧ ಸ್ಥಳಗಳಲ್ಲಿ ತೊಟ್ಟಿಲು ಇರಿಸಲಾಗುತ್ತದೆ. ಅನಾಥ, ಪರಿತ್ಯಕ್ತ ಮಗುವನ್ನು ತಾಯಂದಿರು ಎಲ್ಲಿಯೋ ಎಸೆಯುವ ಬದಲು ಈ ತೊಟ್ಟಿಲಲ್ಲಿ ಇರಿಸಿ ಹೋಗಬಹುದು. ಈ ತೊಟ್ಟಿಲು ಗಾಳಿ, ಬೆಳಕಿನ ಜತೆ ಸುರಕ್ಷಿತ ವ್ಯವಸ್ಥೆ ಹೊಂದಿರುತ್ತದೆ. ತೊಟ್ಟಿಲಿಗೆ ಮಗುವನ್ನು ಹಾಕಿದ 30 ಸೆಕೆಂಡ್ ಒಳಗಾಗಿ ವಿಶ್ರಾಂತಿ ಎನ್‌ಜಿಒ ಸಿಬಂದಿಗೆ ಮಾಹಿತಿ ಲಭಿಸಲಿದೆ. ಇದಾದ 5 ನಿಮಿಷದಲ್ಲಿ ಮಗುವನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ. ಮಗುವನ್ನು ಇರಿಸಿದವರ ಮಾಹಿತಿ ಗೌಪ್ಯವಾಗಿರುತ್ತದೆ.
ಎರಡು ಕಡೆ ಪ್ರಯೋಗ: ಪ್ರಸ್ತುತ ಮಾಲೂರು ತಾಲೂಕಿನ ಯಶವಂತಪುರ ಹಾಗೂ ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ತೊಟ್ಟಿಲು ಇರಿಸಲಾಗಿದೆ. ಭಾರತದಲ್ಲೇ ಮೊದಲ ಬಾರಿ ಇಂಥ ಯೋಜನೆಯೊಂದನ್ನು ಜಾರಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಎನ್‌ಜಿಒ ಸಂಸ್ಥಾಪಕಿ ಸರಸಾ ವಾಸುದೇವನ್ ತಿಳಿಸಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ತಡೆ: ಪ್ರತಿ ದಿನ ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದು ನವಜಾತ ಶಿಶು ಹೆತ್ತವರಿಂದ ದೂರವಾಗಿ ಅನಾಥವಾಗುತ್ತದೆ. ಅನಾರೋಗ್ಯಕರ ಸ್ಥಳಗಳಲ್ಲಿ ಎಸೆಯುವ ಬದಲು ಶಿಶುಗಳನ್ನು ತೊಟ್ಟಿಲಿಗೆ ಹಾಕಿದರೆ ರಕ್ಷಿಸಬಹುದು. ಮುಖ್ಯವಾಗಿ ಹೆಣ್ಣು ಭೂಣ ಹತ್ಯೆ ತಡೆಗೆ ನೆರವಾಗುವುದು ಸಂಸ್ಥೆಯ ಆಶಯ.
ಮಮತೆಯ ತೊಟ್ಟಿಲು ಮೂಲಕ ರಕ್ಷಿಸುವ ಮಗುವಿಗೆ ಶಿಕ್ಷಣ ಸೇರಿ ಎಲ್ಲ ಸೌಕರ್ಯ ನೀಡಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪೂರಕ ವ್ಯವಸ್ಥೆ ಮಾಡುತ್ತೇವೆ. ಮುಂದೆ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶವಿದೆ.
-ಸರಸಾ ವಾಸುದೇವನ್, ವಿಶ್ರಾಂತಿ ಸಂಸ್ಥಾಪಕಿ
* ರಾಜೇಶ್ ಪಟ್ಟಿ