Advertisement

ಕೆಲವರಿಗೆ ನಮ್ಮ ನಾಯಕತ್ವ ಹಳೆಯದೆನಿಸಿತು

11:08 AM Jan 04, 2018 | |

ಹಿರಿಯ ಕಲಾವಿದ ಅಶೋಕ್‌ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ಚಲನಚಿತ್ರ ಕಾರ್ಮಿಕರ ಒಕ್ಕೂಟ. ಈ ಒಕ್ಕೂಟದ ಅಧ್ಯಕ್ಷರಾಗಿ ಸುಮಾರು ಮೂರು ದಶಕಗಳ ಕಾಲ ಕೆಲಸ ಮಾಡಿದವರು ಅಶೋಕ್‌. ಕಾರ್ಮಿಕರಿಗಾಗಿ ಹಲವು ಹೋರಾಟ ಮಾಡಿ, ಅನೇಕ ಆರೋಪಗಳನ್ನು ಎದುರಿಸಿ, ಕಾರ್ಮಿಕರಿಗೆ ಸರಿಯಾದ ಕೂಲಿ ಸಿಗಬೇಕು ಅಂತ ಪ್ರತಿಭಟನೆಗಿಳಿದವರು.

Advertisement

ಎಲ್ಲವೂ ಚೆನ್ನಾಗಿತ್ತು ಎನ್ನುವಷ್ಟರಲ್ಲೇ ಅದೊಂದು ದಿನ ಅಶೋಕ್‌, ಅಧ್ಯಕ್ಷಗಾದಿಯಿಂದ ಕೆಳೆಗೆ ಇಳಿದಿದ್ದಾರೆ. ಸದ್ಯಕ್ಕೆ ಮೀಸೆ ಕೃಷ್ಣ ಅವರು ಹಂಗಾಮಿ ಅಧ್ಯಕ್ಷರಾಗಿದ್ದು, ಮುಂದಿನ ತಿಂಗಳು ಒಕ್ಕೂಟಕ್ಕೆ ಚುನಾವಣೆ ನಡೆಯಲಿವೆ. ಇಷ್ಟಕ್ಕೂ ಮೂರು ದಶಕದ ಕಾರ್ಮಿಕರ ನಂಟಿನ ಗಂಟು ಬಿಚ್ಚಿಟ್ಟು ಅಶೋಕ್‌ ಅವರು ಹೊರಬಂದಿದ್ದೇಕೆ? ಈ ಪ್ರಶ್ನೆ ಸಹಜ. ಯಾಕೆ, ಏನು ಇತ್ಯಾದಿ ಕುರಿತು “ಉದಯವಾಣಿ’ಯ ಚಿಟ್‌ಚಾಟ್‌ನಲ್ಲಿ ಮಾತನಾಡಿದ್ದಾರೆ.

* ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಹೊರಬಂದಿದ್ದೇಕೆ?
ಒಕ್ಕೂಟದ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಸಿಸಿಐ (ಕಾಂಪಿಟೇಷನ್‌ ಕಮಿಷನ್‌ ಆಫ್ ಇಂಡಿಯಾ)ನ ಕಾನೂನಿಗೆ ಎದುರಾಗುವಂತಿಲ್ಲ. ಡಬ್ಬಿಂಗ್‌ ಚಿತ್ರಗಳನ್ನು ತಡೆಯುವಂತಿಲ್ಲ. ಜಿಎಸ್‌ಟಿ ಬಂದ ಬಳಿಕ ಶೇ. 100 ಪರ್ಸೆಂಟ್‌ ಟ್ಯಾಕ್ಸ್‌ ಫ್ರೀ ಇಲ್ಲದಂತಾಯಿತು. ಇಲ್ಲೇ ನಿರ್ಮಾಣ ಮಾಡಬೇಕೆಂದು ನಿರ್ಬಂಧ ಹೇರುವಂತಿಲ್ಲ. ಹಲವು ಬದಲಾವಣೆಗಳು ಬಂದವು. ಈ ವಿರುದ್ಧ ಪ್ರತಿಭಟನೆ ಮಾಡಲು ಆಗುತ್ತಿಲ್ಲ. ನಮ್ಮದು ಪ್ರಜಾಸತ್ತಾತ್ಮಕ ಹೋರಾಟ. ಅದರಲ್ಲೂ ಶಾಂತ ರೀತಿಯಲ್ಲೇ ಬಗೆಹರಿಸುತ್ತ ಬಂದವರು. ಕೆಲವರಿಗೆ ನಮ್ಮ ನಾಯಕತ್ವ ಹಳೆಯದೆನಿಸಿತು. ನೀವಿನ್ನೂ ಹಳೇ ಹೋರಾಟದ ಹಾದಿಯಲ್ಲೇ ಇದ್ದೀರಿ ಎಂದರು. ಸರಿ, ನಾವು ಹೋಗ್ತಿàವಿ, ನೀವೇ ಒಕ್ಕೂಟ ವ್ಯವಸ್ಥೆ ಸರಿಪಡಿಸರ್ರಪ್ಪಾ ಅಂತ ಹೊರಬಂದೆ. ನಾನೊಬ್ಬನೇ ಅಲ್ಲ, ರವೀಂದ್ರನಾಥ್‌ ಕೂಡ ನನ್ನೊಂದಿಗೆ ಹೊರಬಂದಿದ್ದಾರೆ. ಇದಿಷ್ಟೇ ಕಾರಣ ಹೊರತು, ಬೇರೇನೂ ಇಲ್ಲ.

* ಒಕ್ಕೂಟದಲ್ಲಿ ನಿಮ್ಮ ಬಗ್ಗೆ ಕೆಲವು ಆರೋಪಗಳಿದ್ದವು, ಅದಕ್ಕೇನಾದ್ರೂ ಬೇಸತ್ತು ಹೊರಬರಬೇಕಾಯಿತೇ?
ಜವಾಬ್ದಾರಿ ಸ್ಥಾನದಲ್ಲಿದ್ದರೆ, ಆರೋಪ ಸಾಮಾನ್ಯ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ. ಮೂರು ದಶಕಗಳ ಕಾಲ ಒಳ್ಳೆಯ ಕೆಲಸ ಮಾಡಿದ್ದೇನೆ. ಕಾರ್ಮಿಕರ ನೋವಿಗೆ ಸ್ಪಂದಿಸಿದ್ದೇನೆ. ಆ ಖುಷಿ ಇದೆ. ಅದೇ ಖುಷಿಯಲ್ಲೇ ನಾನು ಹೊರಬಂದಿದ್ದೇನಷ್ಟೇ.

* ಇಷ್ಟು ವರ್ಷಗಳು ಒಕ್ಕೂಟದ ಅಧ್ಯಕ್ಷರಾಗಿದ್ದ ನಿಮ್ಮ ಕೊಡುಗೆ ಏನು?
ಚಿತ್ರರಂಗದ ಆರಂಭದಲ್ಲಿ ಈ ರೀತಿಯ ಸಂಘಟನೆಗಳಿರಲಿಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡುವ ಎಲ್ಲಾ ವೃತ್ತಿಯವರಿಗೊಂದು ವೇದಿಕೆ ರೂಪಿಸಬೇಕು ಎಂಬ ಯೋಚನೆ ಬಂತು. ಆ ಯೋಚನೆಯೇ ಕಾರ್ಮಿಕರ ಸಂಘ. ಆ ಮೂಲಕ ಕಾರ್ಮಿಕರ ಹಕ್ಕುಗಳಿಗೆ ನಾನು ಹೋರಾಟ ಮಾಡುತ್ತ ಬಂದೆ. ಕೆಲವು ದಶಕಗಳ ಹಿಂದೆ ಕಾರ್ಮಿಕರಿಗೆ ಸರಿಯಾದ ಕೂಲಿ ಸಿಗುತ್ತಿರಲಿಲ್ಲ. ಆಗ ಮದರಾಸಿನಲ್ಲೇ ಚಿತ್ರೀಕರಣ ನಡೆಯುತ್ತಿತ್ತು. ಕಾರ್ಮಿಕರಿಗೆ ಕೆಲಸ ಕಡಿಮೆ ಇತ್ತು. ಕನ್ನಡ ಚಿತ್ರಗಳಿಗೆ ಸಹಾಯಧನ ಕೊಡಬೇಕಾದರೆ, ರಾಜ್ಯದಲ್ಲೇ ಚಿತ್ರೀಕರಣ ಆಗಬೇಕು ಎಂಬುದಾಗಿತ್ತು. ಸಹಾಯಧನ ಕೊಡಬೇಕು ಅಂತ ಕಬ್ಬನ್‌ ಪಾರ್ಕ್‌ನಲ್ಲಿ ಉಪಹಾಸ ಸತ್ಯಾಗ್ರಹ ಮಾಡಿದೆವು. ಕೊನೆಗೆ ನಿರ್ಮಾಪಕರ, ಕಾರ್ಮಿಕರ ಕಷ್ಟ ಕಂಡು ಸರ್ಕಾರ ನಮ್ಮ ಬೇಡಿಕೆಗೆ ಒಪ್ಪಿತು. ಆಗ ಸಹಾಯಧನ, ಶೇ. 100 ರಷ್ಟು ಟ್ಯಾಕ್ಸ್‌ ಫ್ರೀ ಆಯ್ತು. ಆಗ ವರ್ಷಕ್ಕೆ ಐದಾರು ಕನ್ನಡ ಚಿತ್ರಗಳು ತಯಾರಾಗುತ್ತಿದ್ದವು. ನಮ್ಮ ಹೋರಾಟ ಜೋರಾದಾಗ, ಎಲ್ಲರೂ ಜತೆಯಾದರು. ಶಂಕರ್‌ನಾಗ್‌ ಸಂಕೇತ್‌ ಸ್ಟುಡಿಯೋ ಮಾಡಿ ಇಲ್ಲೇ ಕನ್ನಡ ಚಿತ್ರಗಳ ಕೆಲಸ ಕಾರ್ಯಗಳು ನಡೆದವು. ರಾಜಕುಮಾರ್‌ ಬಂದರು. ಸಾಥ್‌ಕೊಟ್ಟರು. ಕನ್ನಡ ಸಿನಿಮಾ ತಯಾರಿ ಇಲ್ಲೇ ನಡೆಯುತ್ತಾ ಬಂತು. ಕನ್ನಡ ಚಿತ್ರರಂಗ ಬಲವಾಗಿ ಬೇರೂರಿತು. ಇಲ್ಲಿ ನಾನೊಬ್ಬನೇ ಹೋರಾಡಿಲ್ಲ. ಇಡೀ ಕಾರ್ಮಿಕ ವಲಯ ಕೈ ಜೋಡಿಸಿತು. ಚಿತ್ರರಂಗ ಸಹಕರಿಸಿತು.

Advertisement

* ನಿಮ್ಮ ಅವಧಿಯಲ್ಲಿ ಏನೆಲ್ಲಾ ಆಯ್ತು?
ಒಕ್ಕೂಟದಡಿ ಕೆಲಸ ಮಾಡುವ ಕಾರ್ಮಿಕರಿಗೆ ಮೂರು ದಿನಕ್ಕೊಮ್ಮೆ ಸಂಬಳ ಕೊಡಬೇಕು ಎಂಬ ನಿಯಮ ಬಂತು. ಕೊನೆಗೆ ದಿನಕ್ಕೂ ಕೊಡುವಂತಾಯ್ತು. ಒಕ್ಕೂಟದವರಿಗೆ ಸೆಂಟ್ರಲ್‌ ವೆಲ್‌ಫೇರ್‌ ಫ‌ಂಡ್‌ನಿಂದ ಉಚಿತ ಆರೋಗ್ಯ ವ್ಯವಸ್ಥೆ ಜಾರಿಯಾಯಿತು. ಹೃದಯ ಸಂಬಂಧ ಖಾಯಿಲೆ, ಕಿಡ್ನಿ ಚಿಕಿತ್ಸೆಗೆ 2 ಲಕ್ಷ ರೂಪಾಯಿಗಳ ನೆರವು ಬರುವಂತಾಯ್ತು. ಕಾರ್ಮಿಕರ ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಶಿಕ್ಷಣ ಸಲುವಾಗಿ ಸ್ಕಾಲರ್‌ಶಿಪ್‌ ವ್ಯವಸ್ಥೆ ಬಂತು. ಇವುಗಳೊಂದಿಗೆ ಕಾರ್ಮಿಕರ ಪರ ಇನ್ನು ಅನೇಕ ಯೋಜನೆಗಳು ಜಾರಿಗೆ ಬಂದವು. 

* ಹೋರಾಟದಲ್ಲಿ ಇನ್ನೂ ಕೈಗೂಡದ ಕೆಲಸ ಯಾವುದು?
ನಾನು ಕಾರ್ಮಿಕರ ಪರ ಇದ್ದವನು. ಕಾರ್ಮಿಕರಿಗೆ ನಿವೇಶನ ಕೊಡಿಸಬೇಕು ಎಂಬುದು ನನ್ನ ದೊಡ್ಡ ಕನಸಾಗಿತ್ತು. ಆ ಕುರಿತು ರೂಪುರೇಷೆ ನಡೆಯುತ್ತಿತ್ತು. ಆದರೆ, ಸ್ಥಾನದಿಂದ ಹೊರಬಂದೆ. ನನ್ನ ಅವಧಿಯಲ್ಲಿ ಅದೊಂದು ಆಗಿಲ್ಲ ಅನ್ನೋ ಕೊರಗಿದೆ. 

* ಕೆಲ ನಿರ್ಮಾಪಕರೇ ಇನ್ನೊಂದು ಒಕ್ಕೂಟ ಮಾಡಿದ್ದೇಕೆ?
ಕಾರ್ಮಿಕರಿಗೆ ವೇತನ ತಾರತಮ್ಯ ಇತ್ತು. ಮೂರು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಬೇಕು. ಆದರೆ, ನಿರ್ಮಾಪಕರು ಆ ಬಗ್ಗೆ ಗಮನಿಸಲಿಲ್ಲ. ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲಿಲ್ಲ. ಒಕ್ಕೂಟದಿಂದ ದನಿ ಎತ್ತಿದೆವು. ನಮ್ಮ ಒಕ್ಕೂಟದ ವಿರುದ್ಧ ಕೆಲ ನಿರ್ಮಾಪಕರು ಇನ್ನೊಂದು ಒಕ್ಕೂಟ ರೂಪಿಸಿದರು. ಕೊನೆಗೆ ಸಾ.ರಾ.ಗೋವಿಂದು ನೇತೃತ್ವದಲ್ಲಿ ವೇತನ ಪರಿಷ್ಕರಣೆಯಾಯ್ತು. ನಮ್ಮ ಹಕ್ಕು ಕೇಳಿದ್ದಕ್ಕೆ, ಪರ್ಯಾಯವಾಗಿ ಹೊಸ ಒಕ್ಕೂಟವಾಯ್ತು. ಆದರೂ, ನಮ್ಮವರಿಗೆ ಕೆಲಸ ಕಡಿಮೆಯಾಗಲಿಲ್ಲ. ಕೂಲಿಗೂ ತೊಂದರೆಯಾಗಲಿಲ್ಲ.

* ಯಾವತ್ತಾದರೂ ಒಕ್ಕೂಟ ಜವಾಬ್ದಾರಿ ಸಾಕೆನಿಸಿದ್ದುಂಟಾ?
ಹಾಗಂತ ಎಂದೂ ಅನಿಸಿಲ್ಲ. ಯಾರೂ ನನ್ನ ಬಗ್ಗೆ ವಿರೋಧ ಮಾಡಲಿಲ್ಲ. ನಂಜುಂಡಸ್ವಾಮಿ, ಚಂಪಾ, ಪಾಪು ಮುಂತಾದವರ ಒಡನಾಟದಲ್ಲಿದ್ದವನು. ಗೋಕಾಕ್‌ನಂತಹ ಚಳವಳಿ ಹಿನ್ನೆಲೆಯಲ್ಲೂ ಕೆಲಸ ಮಾಡಿಕೊಂಡು ಬಂದವನು. ಹೋರಾಟ ಮಾಡುತ್ತಿದ್ದ ನನಗೆ, ಎಷ್ಟೇ ಕಷ್ಟ ಎದುರಾದರೂ, ಒಕ್ಕೂಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ಛಲವಿತ್ತು. ಹಾಗಾಗಿ ಎಂದಿಗೂ ಸಾಕು ಎನಿಸುವ ಸಮಯ ಬರಲಿಲ್ಲ.

* ಇನ್ನಷ್ಟು ಕಾಲ ಇರಬೇಕೆನಿಸಿತ್ತಾ?
ಸಾಕು, 30 ವರ್ಷ ಯಶಸ್ವಿಯಾಗಿ ಒಕ್ಕೂಟದ ಕೆಲಸ ಮಾಡಿದ ತೃಪ್ತಿ ಇದೆ. ಹಳೆಯ ನಾಯಕತ್ವವಾಗಿದ್ದರಿಂದ ಹೊಸತು ಬೇಕು ಅಂತ ಕೆಲವರಿಗೆ ಅನಿಸಿದ್ದುಂಟು. ನಾವು ಶಾಂತಿಯುತ ಹೋರಾಟ ಮಾಡುತ್ತಾ ಬಂದವರು, ನಮ್ಮ ಶಾಂತಿಯುತ ಹೋರಾಟ ಕೆಲವರಿಗೆ ಬೇಕಿರಲಿಲ್ಲ. ಹಾಗಾಗಿ, ನಿಮ್ಮಲ್ಲೇ ಯಾರಾದ್ರೂ ಮುಂದೆ ಬನ್ನಿ ಅಂತ ಹೇಳಿ ಹೊರಬಂದೆ. ಬದಲಾವಣೆ ಜಗದ ನಿಯಮ. ಬದಲಾವಣೆ ಆಗುತ್ತಿರಬೇಕು. ಅದೀಗ ನಡೆದಿದೆಯಷ್ಟೇ.

* ನಿಮ್ಮ ಒಕ್ಕೂಟದವರಿಗೆ ನೀವು ಹೇಳುವ ಮಾತು?
ಒಗ್ಗಟ್ಟಿನಿಂದ ಕೆಲಸ ಮಾಡಿ. ಹೋರಾಟ ಮುಂದುವರೆಸಿ, ಕಾರ್ಮಿಕರ ಯೋಗಕ್ಷೇಮಕ್ಕೆ ಮೊದಲ ಆದ್ಯತೆ ಕೊಡಿ. ಹಕ್ಕುಗಳನ್ನು ಕಳೆದುಕೊಳ್ಳಬೇಡಿ.

* ಹಾಗಾದರೆ, ಮುಂದಾ?
ನಾನು ಕಲಾವಿದ, ಬಣ್ಣ ಹಚ್ಚುವ ಆಸೆ ಹೋಗುವುದಿಲ್ಲ. ಕಿರುತೆರೆಯಲ್ಲಿ ಧಾರಾವಾಹಿಯೊಂದನ್ನು ನಿರ್ಮಾಣ ಮಾಡಬೇಕೆಂಬ ಯೋಚನೆ ಇದೆ. ಆ ಪ್ರಯತ್ನ ನಡೆಯುತ್ತಿದೆ. ಈಗಷ್ಟೇ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next