Advertisement

ಲೋಕೋಪಯೋಗಿ ರಸ್ತೆ  ಕಾಮಗಾರಿಗೆ ಮರ ತೆಗೆಯಲು ವಿಘ್ನ?

12:17 PM Apr 13, 2018 | |

ನಗರ: ಕೌಡಿಚ್ಚಾರು – ಪಾಣಾಜೆ ಲೋಕೋಪಯೋಗಿ ರಸ್ತೆಯಲ್ಲಿ ರಸ್ತೆ ಅಗಲಗೊಳಿಸುವ ಕಾಮಗಾರಿ ನಡೆಯುತ್ತಿದೆ. ಆದರೆ ಇಲಾಖೆಗಳ ಮಧ್ಯೆ ಹೊಯ್ದಾಟದಿಂದ ಕಾಮಗಾರಿ ನಿಧಾನಗತಿಯಲ್ಲಿ ಮತ್ತು ಬಿಡಿ ಬಿಡಿಯಾಗಿ ನಡೆಯುತ್ತಿದ್ದು, ಸಾರ್ವಜನಿಕರಿಗೆ ಸಂಕಷ್ಟವನ್ನು ತಂದೊಡ್ಡಿದೆ.

Advertisement

ಕೌಡಿಚ್ಚಾರು -ಪಾಣಾಜೆ ರಸ್ತೆಯ ಅಗಲಗೊಳಿಸುವ ಕಾಮಗಾರಿಯನ್ನು ವಿವಿಧ ಯೋಜನೆಗಳ ಅನುದಾನದಲ್ಲಿ ನಡೆಸಲು ಅಂಗೀಕಾರಗೊಂಡಿದೆ. ಈ ಮಧ್ಯೆ 3.8 ಕಿ.ಮೀ.ನಿಂದ 7.3 ಕಿ.ಮೀ. ರಸ್ತೆಯ ಅಗಲಗೊಳಿಸಲು ಟೆಂಡರ್‌ ನಡೆದು ಮುಡುಪಿನಡ್ಕ -ಪೆರಿಗೇರಿ ಮಧ್ಯೆ ಕಾಮಗಾರಿಯನ್ನು ಆರಂಭಿಸಲಾಗಿದೆ. ಪಾಪೆಮ ಜಲು ಹಾಗೂ ಕೌಡಿಚಾರ್‌ ಮಧ್ಯೆ 1 ಕಿ.ಮೀ. ಅಭಿವೃದ್ಧಿಗೆ ಟೆಂಡರ್‌ ಕರೆಯಲಾಗಿದ್ದರೂ ಚುನಾವಣೆ ನೀತಿ ಸಂಹಿತೆಯ ಕಾರಣದಿಂದ ಕೆಲಸ ಆರಂಭಿಸಿಲ್ಲ.

ನೀತಿ ಸಂಹಿತೆ ಜಾರಿಗೂ ತಿಂಗಳ ಮೊದಲು ಆರಂಭಿಸಲಾದ ಕಾಮಗಾರಿಯ ಆರಂಭಿಕ ಹಂತದಲ್ಲಿ ಹಳೆಯ ಮೋರಿಗಳನ್ನು ತೆಗೆದು ಹೊಸದಾಗಿ ಅಳವಡಿಸಲಾಗಿದ್ದು, ತಿರುವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಜೆಸಿಬಿ ಯಂತ್ರದ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ತೆಗೆಯಲಾಗಿದೆ. ಈ ಪ್ರಕ್ರಿಯೆ ನಡೆಯುತ್ತಿದೆಯೇ ವಿನಃ ಅಭಿವೃದ್ಧಿ ಕಾಮಗಾರಿಗಳು ಮುಗಿಯುವುದು ವಿಳಂಬವಾಗಿವೆ.

ಸಮಸ್ಯೆ ಏನು?
ರಸ್ತೆ ಅಗಲಗೊಳಿಸುವ ಸಂದರ್ಭದಲ್ಲಿ ವಿದ್ಯುತ್‌ ಕಂಬ ಹಾಗೂ ಮರಗಳು ತೆರವುಗೊಳಿಸಬೇಕಾಗುತ್ತದೆ. ಆದರೆ ಗುತ್ತಿಗೆದಾರರು ಕಾಮಗಾರಿ ನಡೆಸುವ ಸಂದರ್ಭದಲ್ಲಿ ಎರಡೂ ಇಲಾಖೆಗಳಿಗೆ ಮನವಿ ಅರ್ಜಿ ಸಲ್ಲಿಸಿದ್ದು, ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಆದರೆ ಅರಣ್ಯ ಇಲಾಖೆಗೆ ಸಲ್ಲಿಸಿದ ಮನವಿ ಪತ್ರಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಅನುಮತಿ ನೀಡಲು ಸತಾಯಿಸುತ್ತಿರುವುದರಿಂದ ಸಮಸ್ಯೆಯಾಗಿದೆ ಎಂಬ ಆರೋಪಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಕಾಮಗಾರಿಯನ್ನು ಆರಂಭಿಸಿ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಹಾಕಿರುವುದು ಹಾಗೂ ಅಲ್ಲಲ್ಲಿ ಜಲ್ಲಿ ಹಾಕಿರುವುದರಿಂದ ವಾಹನಗಳ ಸಂಚಾರಕ್ಕೆ ನಿತ್ಯ ನರಕವಾಗಿದೆ. ಎರಡು ವಾಹನಗಳು ಪರಸ್ಪರ ಎದುಬದುರಾಗಿ ಸಂಚರಿಸಲೂ ಸಾಧ್ಯವಾಗುತ್ತಿಲ್ಲ. ನಿರಂತರ ಅಪಘಾತಗಳೂ ನಡೆಯುತ್ತಿವೆ. ಪ್ರಸ್ತುತ ಚರಂಡಿ ವ್ಯವಸ್ಥೆಯೂ ಇಲ್ಲದಿರುವುದರಿಂದ ಮಳೆ ಬಂದಾಗ ರಸ್ತೆ ಸಂಪೂರ್ಣ ಕೆಸರುಮಯವಾಗಿ ಮನೆಗಳಿಗೂ ಕೆಸರು ನೀರು ನುಗ್ಗುತ್ತಿದೆ.

Advertisement

ಕುಡಿಯುವ ನೀರಿಗೂ ಸಮಸ್ಯೆ
ರಸ್ತೆ ಕಾಮಗಾರಿ ನಡೆಯುತ್ತಿರುವ ಈ ವ್ಯಾಪ್ತಿಯಲ್ಲಿ ಗ್ರಾ.ಪಂ.ನ ಸಾರ್ವಜನಿಕ ಕುಡಿಯುವ ನೀರು ಸರಬರಾಜು ಪೈಪ್‌ಗ್ಳನ್ನು ತೆಗೆಯಲಾಗಿದೆ. ಬಿರು ಬೇಸಿಗೆಯಲ್ಲಿ ನೀರಿನ ವ್ಯವಸ್ಥೆಯನ್ನು ಕಡಿತ ಮಾಡಿರುವುದರಿಂದ ಇರುವುದರಿಂದ ನೂರಾರು ಮಂದಿ ನೀರಿನ ಫಲಾನುಭವಿಗಳು ಸಂಕಷ್ಟ ಪಡುವಂತಾಗಿದೆ. ದೂರದ ಖಾಸಗಿ ಬಾವಿಗಳಿಂದ ನಿತ್ಯ ನೀರು ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಸಮಸ್ಯೆ ಸರಿಪಡಿಸಲು ಸೂಚನೆ
ನೀತಿ ಸಂಹಿತೆಗೂ ಮೊದಲು ಆರಂಭಿಸಿರುವುದರಿಂದ ಕಾಮಗಾರಿ ನಡೆಯಬೇಕು. ಕಾಮಗಾರಿಯ ವಿಳಂಬ, ಅರಣ್ಯ ಇಲಾಖೆಯ ಅನುಮತಿಯ ಕುರಿತು ಮಾಹಿತಿ ಇಲ್ಲ. ಅರಣ್ಯ ಇಲಾಖೆಗೂ ನಿಗದಿತ ಹಣವನ್ನು ಕಟ್ಟಬೇಕಾಗುತ್ತದೆ. ಈ ಕುರಿತು ಕೂಡಲೇ ವಿಚಾರಿಸಿ ಸಾರ್ವಜನಿಕರಿಗೆ ತೊಂದರೆಯಾಗಿರುವ ಮತ್ತು ನೀರಿನ ಕುರಿತು ಸಮಸ್ಯೆಯಾಗಿರುವುದನ್ನು ಸರಿಪಡಿಸಲು ತಿಳಿಸಲಾಗುವುದು.
– ಎಚ್‌.ಕೆ. ಕೃಷ್ಣಮೂರ್ತಿ
ಸಹಾಯಕ ಕಮಿಷನರ್‌, ಪುತ್ತೂರು

ಅರಣ್ಯ ಇಲಾಖೆ ಅಡ್ಡಿಪಡಿಸಿಲ್ಲ
ಮರಗಳನ್ನು ತೆರವುಗೊಳಿಸಲು ಸಲ್ಲಿಸಿದ ಅರ್ಜಿಗೆ ಮೇಲಧಿಕಾರಿಗಳ ಮೂಲಕ ಅನುಮತಿ ಬಂದಿದೆ. ಇಲಾಖೆಯ ಕಾನೂನಿನಂತೆ ಅಲ್ಲಿನ 30 ಮರಗಳನ್ನು ತೆಗೆಯಲು 1.16 ಲಕ್ಷ ರೂ. ಹಣವನ್ನು ಅವರು ಪಾವತಿಸಬೇಕು. ಅರಣ್ಯ ಇಲಾಖೆ ಯಾವುದೇ ರೀತಿಯ ಅಡ್ಡಿಯನ್ನೂ ಮಾಡಿಲ್ಲ.
 – ವಿ.ಪಿ. ಕಾರ್ಯಪ್ಪ, ವಲಯ ಅರಣ್ಯಾಧಿಕಾರಿ, ಪುತ್ತೂರು

ವಾರದೊಳಗೆ ಪೂರ್ಣ
ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮಾಡಲಾಗುತ್ತಿದೆ. ಆದರೆ ಅರಣ್ಯ ಇಲಾಖೆಯಿಂದ ಮರಗಳನ್ನು ತೆಗೆಯಲು ಅನುಮತಿ ಸಿಗದಿರುವುದರಿಂದ ಅಂತಹ ಭಾಗಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮರ ತೆರವುಗೊಳಿಸಬೇಕಾದ ಕಡೆಗಳನ್ನು ಹೊರತುಪಡಿಸಿ ಒಂದು ವಾರದಲ್ಲಿ ಕಾಮಗಾರಿ ಪೂರ್ತಿಗೊಳಿಸಲಿದ್ದೇವೆ.
– ಸಂದೀಪ್‌,
ಗುತ್ತಿಗೆದಾರ

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next