Advertisement

ಸಮರಸದ ಜೀವನ ನಡೆಸಿದ್ದ ರಾಣಿ 2ನೇ ಎಲಿಜಬೆತ್‌

11:19 PM Sep 09, 2022 | Team Udayavani |

ಬರೋಬ್ಬರಿ ಎಪ್ಪತ್ತು ವರ್ಷಗಳ ಕಾಲ ಬ್ರಿಟನ್‌ನ ರಾಣಿಯಾಗಿದ್ದ 2ನೇ ಎಲಿಜಬೆತ್‌ರ ಜೀವನವೇ ಒಂದು ಅತ್ಯದ್ಭುತ ರಸಗಾಥೆ ಎಂದರೆ ತಪ್ಪಾಗಲಾಗರದು. ಅವರ ಜೀವನ ಯಾತ್ರೆ ಗುರುವಾರ ಮುಕ್ತಾಯಗೊಂಡಿದೆ.
ರಾಜ ಆರನೇ ಜಾರ್ಜ್‌ ಮತ್ತು ರಾಣಿ ಎಲಿಜಬೆತ್‌ ಅವರ ಮೊದಲ ಮಗಳಾಗಿ 1926ರ ಎ. 21ರಂದು ರಾಣಿ ಎರಡನೇ ಎಲಿಜಬೆತ್‌ ಜನಿಸಿದ್ದರು. ಅವರ ಪೂರ್ಣ ಹೆಸರು ಎಲಿಜಬೆತ್‌ ಅಲೆಕ್ಸಾಂಡರ್‌ ಮೇರಿ.

Advertisement

8ನೇ ಕಿಂಗ್‌ ಎಡ್ವರ್ಡ್‌ ನಿಧನದ ಅನಂತರ ರಾಣಿ 2ನೇ ಎಲಿಜಬೆತ್‌ ಅವರ ತಂದೆ ಡ್ನೂಕ್‌ ಆಫ್ ಯಾರ್ಕ್‌ ಆಗಿದ್ದ 6ನೇ ಜಾರ್ಜ್‌ ರಾಜನಾಗಿ ಗದ್ದುಗೆಗೆ ಏರಿದರು. ರಾಣಿ 2ನೇ ಎಲಿಜಬೆತ್‌ ಮನೆಯಲ್ಲೇ ಶಿಕ್ಷಣ ಪಡೆದರು.

ಕ್ರಮಬದ್ಧವಾಗಿ ಬೆಳೆದ ಇವರು ಚಿಕ್ಕ ವಯಸ್ಸಿನಿಂದಲೇ ಎಲ್ಲರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು. ಎರಡನೇ ಎಲಿಜಬೆತ್‌ ಅವರು ತಮ್ಮ ಭಾವೀ ಪತಿ ಗ್ರೀಸ್‌ ಮತ್ತು ಡೆನ್ಮಾರ್ಕ್‌ನ ರಾಜಕುಮಾರ ಫಿಲಿಪ್‌ ಅವರನ್ನು ಪ್ರಥಮ ಬಾರಿಗೆ 1934ರಲ್ಲಿ ಹಾಗೂ ಮತ್ತೂಮ್ಮೆ 1937ರಲ್ಲಿ ಭೇಟಿಯಾಗಿದ್ದರು. ಅನಂತರ 1939ರಲ್ಲಿ ತಮ್ಮ 13ನೇ ವರ್ಷದಲ್ಲಿ ಫಿಲಿಪ್‌ ಅವರೊಂದಿಗೆ ಪ್ರೇಮಾಂಕುರವಾಗಿ ಪರಸ್ಪರ ಪ್ರೇಮಪತ್ರಗಳನ್ನು ಹಂಚಿಕೊಳ್ಳತೊಡಗಿದರು. 1947ರ ಜು. 9ರಂದು ಅಧಿಕೃತವಾಗಿ ಇವರಿಬ್ಬರ ನಿಶ್ಚಿ ತಾರ್ಥವನ್ನು ಘೋಷಿಸಲಾಯಿತು. ತಮ್ಮ 21ನೇ ವಯಸ್ಸಿನಲ್ಲಿ ಎರಡನೇ ಎಲಿಜಬೆತ್‌ ರಾಜಕುಮಾರ್‌ ಫಿಲಿಪ್‌ ಅವರೊಂದಿಗೆ 1947ರ ನ. 20ರಂದು ವೆಸ್ಟ್‌ ಮಿನಸ್ಟರ್‌ ಅಬೆಯಲ್ಲಿ ವಿವಾಹವಾದರು. 1948ರ ನ. 14ರಂದು ಮೊದಲ ಮಗು ರಾಜಕುಮಾರ ಚಾರ್ಲ್ಸ್‌ಗೆ ಜನ್ಮ ನೀಡಿದರು. 1950ರ ಆ. 15ರಂದು ರಾಜಕುಮಾರಿ ಅನ್ನಿಗೆ ಜನ್ಮ ನೀಡಿದರು.

1951ರಲ್ಲಿ ರಾಜ ಆರನೇ ಜಾರ್ಜ್‌ ಅವರ ಆರೋಗ್ಯ ಕ್ಷೀಣಿಸತೊಡಗಿತು. 1952ರಂದು ಅವರು ನಿಧನ ಹೊಂದಿದರು. 1952ರ ಫೆ. 6ರಂದು ಬ್ರಿಟನ್‌ ಹಾಗೂ ಇತರ 14 ಸಾರ್ವಭೌಮ ದೇಶಗಳಿಗೆ ರಾಣಿಯಾಗಿ ಎರಡನೇ ಎಲಿಜಬೆತ್‌ ಅಧಿಕಾರದ ಗದ್ದುಗೆಗೆ ಏರಿದರು. ಬ್ರಿಟನ್‌ ಜತೆಗೆ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಜಮೈಕಾ, ಬಾರ್ಬಡೋಸ್‌, ಬಹಾಮಾಸ್‌, ಗ್ರೆನಡಾ, ಪಪುವಾ ನ್ಯೂ ಗಿನಿ, ಸೊಲೊಮನ್‌ ದ್ವೀಪಗಳು, ಟುವಾಲು, ಸೇಂಟ್‌ ಲೂಸಿಯಾ, ಸೇಂಟ್‌ ವಿನ್ಸೆಂಟ್‌ , ಆಂಟಿಗುವಾ ಮತ್ತು ಬಾಬುಡಾ, ಬೆಲೀಜ್‌ ಮತ್ತು ಸೇಂಟ್‌ ಕಿಟ್ಸ್‌ ಹಾಗೂ ನೆವಿಸ್‌ ದೇಶಗಳಿಗೂ ಕೂಡ ಎರಡನೇ ಎಲಿಜಬೆತ್‌ ರಾಣಿಯಾಗಿದ್ದಾರೆ.

ಸಂತಸ-ಸಂಕಟ: ಸಾಂಸಾರಿಕವಾಗಿ ಹೇಳುವುದಿದ್ದರೆ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಅವರು ಸಂತೋಷ ಮತ್ತು ಸಂಕಟವನ್ನೂ ಅನುಭವಿಸಿದ್ದರು. ಫಿಲಿಪ್‌ ಅವರ ಜತೆಗಿನ ದಾಂಪತ್ಯ ಜೀವನದಲ್ಲಿ ನಾಲ್ವರು ಮಕ್ಕಳು, ಆ ಬಳಿಕ ಎಂಟು ಮೊಮ್ಮಕ್ಕಳು, 12 ಮರಿ ಮೊಮ್ಮಕ್ಕಳನ್ನು ಹೊಂದಿದ್ದಾರೆ. 2007ರಲ್ಲಿ ಫಿಲಿಪ್‌ ಮತ್ತು ರಾಣಿ 2ನೇ ಎಲಿಜಬೆತ್‌ ಅವರು ದಾಂಪತ್ಯ ಜೀವನ ಪ್ರವೇಶಿಸಿ 60 ವರ್ಷ ಪೂರೈಸಿದ ಸಂಭ್ರಮಾಚರಣೆ ಮಾಡಿದ್ದರು. ಇಂಥ ಸಂತೋಷದ ಆಚರಣೆ ಮಾಡಿದ್ದು 2ನೇ ಎಲಿಜಬೆತ್‌ ಮತ್ತು ಫಿಲಿಪ್‌ ಮಾತ್ರ ಎನ್ನುವುದು ಗಮನಾರ್ಹ.

Advertisement

2011 ಮತ್ತು 2018ರಲ್ಲಿ ಚಾರ್ಲ್ ಅವರ ಮಕ್ಕಳಾದ ವಿಲಿಯಂ ಮತ್ತು ಹ್ಯಾರಿ ಅವರ ವಿವಾಹ ರಾಣಿಯ ಜೀವನದಲ್ಲಿ ಸಂತೋಷ ತಂದಿತ್ತು. 2015ರಲ್ಲಿ ಬ್ರಿಟನ್‌ ರಾಜಮನೆತನದಲ್ಲಿ ಅತೀ ದೀರ್ಘಾವಧಿಗೆ ರಾಣಿಯಾದ ಹೆಗ್ಗಳಿಕೆಯನ್ನೂ ಅವರು ಪಡೆದುಕೊಂಡಿದ್ದರು.

1992ರಲ್ಲಿ ರಾಣಿಯ ಮಕ್ಕಳಾದ ಚಾರ್ಲ್ಸ್‌ ಮತ್ತು ಆ್ಯಂಡ್ರೂ ತಮ್ಮ ಪತ್ನಿಯರಿಂದ ವಿಚ್ಛೇದನ ಪಡೆದಿದ್ದರು. ಜತೆಗೆ ಪುತ್ರಿ ಅನ್ನಿ ಕೂಡ ಪತಿಯಿಂದ ವಿಚ್ಛೇದನ ಪಡೆದ ಸಂದರ್ಭ ಅವರಿಗೆ ತೀವ್ರ ಸಂಕಟವನ್ನು ತಂದೊಡ್ಡಿದ್ದ ದಿನಗಳಾಗಿದ್ದವು. ಸಂಕಷ್ಟದ ದಿನಗಳನ್ನು ಅನುಭವಿಸಿಯೇ ರಾಣಿ ಲ್ಯಾಟಿನ್‌ ಭಾಷೆಯ “ಆ್ಯನಸ್‌ ಹಾರಿಬಿಲ್ಸ್‌’ ಎಂಬ ಗಾದೆ ಮಾತನ್ನು ಉದ್ಗರಿಸಿದ್ದರಂತೆ. ಈ ಗಾದೆ ಮಾತಿನ ಅರ್ಥ “ಅದ್ಭುತ ವರ್ಷ’.

ಇದರ ಜತೆಗೆ ರಾಜಕುಮಾರಿ ಡಯಾನಾಳ ದಾಂಪತ್ಯ ದಲ್ಲಿ ಉಂಟಾಗಿದ್ದ ಅಹಿತಕರ ಘಟನೆ ಕೂಡ ರಾಣಿಯನ್ನು ದುಃಖಕ್ಕೆ ತಳ್ಳಿತ್ತು. ಡಯಾನಾ ಅವರು ರಾಜಮನೆತನ ಅನುಸರಿಸುವ ಜೀವನ ಕ್ರಮ ಮತ್ತು ತನ್ನ ದಾಂಪತ್ಯ ಜೀವನದ ಬಗ್ಗೆ ಮಾಧ್ಯಮಗಳಿಗೆ ಬಹಿರಂಗವಾಗಿ ಹಲವು ಸಂದರ್ಶನಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಮತ್ತು 1997ರಲ್ಲಿ ಡಯಾನಾ ಅಪಘಾತದಲ್ಲಿ ಮೃತಪಟ್ಟದ್ದು ಕೂಡ ರಾಣಿಗೆ ಆಘಾತವನ್ನು ಉಂಟು ಮಾಡಿತ್ತು.
ಇತ್ತೀಚೆಗಿನ ವರ್ಷಗಳಲ್ಲಿ ಉಂಟಾಗಿದ್ದ ಪ್ರಿನ್ಸ್‌ ಹ್ಯಾರಿ ಮತ್ತು ಮೇಘನ್‌ ವಿಚಾರ, ಚಾರ್ಲ್ಸ್‌ ಅವರ ವಿವಾಹ, ಕ್ಯಾಮೆಲಾ ಪಾರ್ಕರ್‌ ಬೌಲ್ಸ್‌ ಅವರ ದಾಂಪತ್ಯ ಜೀವನ ಕೂಡ ಅವರಿಗೆ ಬೇಸರ ತಂದಿತ್ತು.

ಬೆಂಗಳೂರಿಗೂ ಬಂದಿದ್ದರು
1961ರಲ್ಲಿ ರಾಣಿ 2ನೇ ಎಲಿಜಬೆತ್‌ ಭಾರತ ಮತ್ತು ಪಾಕಿಸ್ಥಾನ ಪ್ರವಾಸ ಕೈಗೊಂಡಿದ್ದರು. ಭಾರತವು ಬ್ರಿಟಿಷ್‌ ಆಳ್ವಿಕೆಯಿಂದ ಸ್ವತಂತ್ರವಾದ ಅನಂತರ ಬ್ರಿಟನ್‌ನಲ್ಲಿ ಪಟ್ಟಕ್ಕೆ ಬಂದ ಮೊದಲ ರಾಣಿ ಆಕೆಯಾದ್ದರಿಂದ ಆ ಭೇಟಿ ಬಹಳ ಮಹತ್ವ ಪಡೆದಿತ್ತು. ಆಗ ರಾಣಿ ಬೆಂಗಳೂರಿಗೂ ಬಂದಿದ್ದರು. ಮೈಸೂರು ಸಂಸ್ಥಾ ನದ ಗವ ರ್ನರ್‌ ಆಗಿ ದ್ದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಅವರು ರಾಣಿಯನ್ನು ಬೆಂಗಳೂರಿನಲ್ಲಿ ಸ್ವಾಗತಿಸಿದ್ದರು. ಬೈಬಲ್‌ ಸೊಸೈಟಿ ಆಫ್ ಇಂಡಿಯಾದ 150ನೇ ವಾರ್ಷಿಕೋತ್ಸವದ ಸಲುವಾಗಿ ಅವರು ಬೆಂಗಳೂರಿಗೆ ಬಂದಿದ್ದರು. ಬೈಬಲ್‌ನ ಹಿಂದಿ ಅವತರಣಿಕೆಯನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ತೆರೆದ ಜೀಪಿನಲ್ಲಿ ಕುಳಿತು ಮೆರವಣಿಗೆ ಸಾಗಿದ ರಾಣಿ ಅನಂತರ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದರು. ತಮ್ಮ ಭೇಟಿಯ ನೆನಪಿಗಾಗಿ ಸಸಿಯೊಂದನ್ನು ನೆಟ್ಟಿದ್ದರು. ಅದೇ ವೇಳೆ ನೆರೆದಿದ್ದ ಜನಸ್ತೋಮದ ನಡುವಿನಿಂದ ಮಹಿಳೆಯೊಬ್ಬಳು ಮುಂದೆ ಬಂದು ರಾಣಿಗೆ ಮಾವಿನ ಹಣ್ಣನ್ನು ಅರ್ಪಿಸಿದ್ದಳು.

1961ರಲ್ಲಿ ಎಲಿಜಬೆತ್‌ ಮೊದಲ ಬಾರಿಗೆ ಭಾರತಕ್ಕೆ ಬಂದಾಗ ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿತ್ತು. ಕೋಲ್ಕತ್ತಾದ ಬೀದಿ ಬೀದಿಗಳಲ್ಲಿ 35 ಲಕ್ಷಕ್ಕೂ ಹೆಚ್ಚು ಜನರು ರಾಣಿಯನ್ನು ನೋಡಲು ನೆರೆದಿದ್ದರು.
1982ರಲ್ಲಿ ಇಂದಿರಾ ಗಾಂಧಿ ಪ್ರಧಾನಿ ಯಾಗಿದ್ದಾಗ ರಾಣಿ ಎಲಿಜಬೆತ್‌ ದಿಲ್ಲಿಗೆ ಭೇಟಿ ನೀಡಿದ್ದರು. ಸಮಯವನ್ನು ಕರಾರುವಾಕ್‌ ಆಗಿ ಪಾಲಿಸುತ್ತಿದ್ದ ರಾಣಿಯನ್ನು ಹೊತ್ತ ವಿಮಾನ ಐದು ನಿಮಿಷ ತಡವಾಗಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂದು ಇಳಿದಿತ್ತು. ಇಂದಿರಾ ಗಾಂಧಿಯವರ ಜೋತಿಷಿಗಳು ಯಾವ ಸಮಯ ಶುಭಕರವೆಂದು ಹೇಳಿದ್ದರೋ ಆ ಸಮಯವನ್ನು ರಾಣಿ ಪಾಲಿಸಿದ್ದರು.

ಭಾರತ ಮತ್ತು ಪಾಕಿಸ್ಥಾನದ 50ನೇ ಸ್ವಾತಂತ್ರೊéàತ್ಸವದ ಪ್ರಯುಕ್ತ 1997ರಲ್ಲಿ ರಾಣಿ ಉಭಯ ದೇಶಗಳಿಗೆ ಭೇಟಿ ನೀಡಿದ್ದರು. ಆಗ ಚೆನ್ನೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭರತನಾಟ್ಯ ವೀಕ್ಷಿಸಿದ್ದರು ಹಾಗೂ ಜಲಿಯನ್‌ ವಾಲಾಬಾಗ್‌ಗೆ ಭೇಟಿ ನೀಡಿದ್ದರು.

ರಹಸ್ಯ ಸಂದೇಶಗಳು
ಎಲ್ಲರೂ ಪರ್ಸ್‌ (ಕೈ ಚೀಲ) ಅನ್ನು ಹಣ ಇಟ್ಟುಕೊಳ್ಳಲು ಬಳಸಿದರೆ, ರಾಣಿ ಅದನ್ನು ಸಂವಹನ ಸಾಧನವಾಗಿ, ಅಂದರೆ ಸಹಾಯಕರಿಗೆ ರಹಸ್ಯ ಸಂದೇಶಗಳನ್ನು ಕಳುಹಿಸಲು ಬಳಸುತ್ತಿ ದ್ದರಂತೆ. ಅತಿಥಿಗಳ ಜತೆ ಊಟಕ್ಕೆ ಕುಳಿತಿದ್ದಾಗ ರಾಣಿ ಡಿನ್ನರ್‌ ಟೇಬಲ್‌ ಮೇಲೆ ತಮ್ಮ ಕೈಚೀಲ ಇರಿಸಿದರೆಂದರೆ, ಮುಂದಿನ ಐದು ನಿಮಿಷಗಳಲ್ಲಿ ಊಟ ಮುಗಿಯಬೇಕೆಂದು ಅವರು ಬಯಸುತ್ತಿದ್ದಾರೆ ಎಂದು ಅರ್ಥ. ಒಂದು ವೇಳೆ ಚೀಲವನ್ನು ನೆಲದ ಮೇಲೆ ಇರಿಸಿದರೆ, ಪ್ರಸ್ತುತ ನಡೆಯುತ್ತಿರುವ ಸಂಭಾಷಣೆಯನ್ನು ಮುಂದುವರಿಸಲು ಅವರಿಗೆ ಇಷ್ಟವಿಲ್ಲ ಎಂದು ಸಹಾಯಕರಿಗೆ ಅರ್ಥವಾಗಿ ಬಿಡುತ್ತಿತ್ತು.

ಕೆಚ್ಚೆದೆಯ ಧೀರೆ
ರಾಣಿ ಎಲಿಜಬೆತ್‌ ಎರಡನೇ ವಿಶ್ವ ಯುದ್ಧದಲ್ಲಿ ಪಾಲ್ಗೊಂಡಿದ್ದ ವಿಷಯ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಆಗ ಹದಿನಾಲ್ಕು ವರ್ಷದವರಾಗಿದ್ದ ರಾಣಿಗೆ ಸೈನ್ಯಕ್ಕೆ ಸೇರಲು ತಂದೆಯಿಂದ ಅನುಮತಿ ಸಿಗಲಿಲ್ಲ. ಆದರೂ ಯಾವುದಾದ ರೊಂದು ಬಗೆಯಲ್ಲಿ ತಂದೆಯ ಸೈನ್ಯಕ್ಕೆ ಸಹಾಯ ಮಾಡಬೇಕು ಎಂದು ಅವರು ನಿರ್ಧರಿಸಿದ್ದರು. ಅದೇ ರೀತಿ ಸ್ಥಳೀಯ ರೇಡಿಯೋದಲ್ಲಿ ಘೋಷಣೆಗಳನ್ನು ಕೂಗುತ್ತ ಲಂಡನ್‌ನ ಪ್ರಜೆಗಳಲ್ಲಿ ಧೈರ್ಯ ತುಂಬಿದ್ದರು. ಆ ವಿಷಮ ಸಮಯದಲ್ಲಿ ಎಲ್ಲರೂ ಧೈರ್ಯ ಹಾಗೂ ಸಮಚಿತ್ತದಿಂದ ಇರಬೇಕೆಂದು ಜನತೆಗೆ, ವಿಶೇಷವಾಗಿ ಮಕ್ಕಳಿಗೆ ಆಕೆ ಕರೆ ನೀಡಿದ್ದರು. ಮುಂದೆ ಅವರು ಮಹಿಳಾ ಸಹಾಯಕ ಪ್ರಾದೇಶಿಕ ಸೇವೆಗೆ ಸೇರಿದರು. ಅಲ್ಲಿ ಟ್ರಕ್‌ ಚಾಲನೆ ಮತ್ತು ಮೆಕ್ಯಾನಿಕ್‌ ಆಗಿ ತರಬೇತಿ ಪಡೆದರು. ಸಶಸ್ತ್ರ ಸೈನ್ಯವನ್ನು ಪ್ರವೇಶಿಸಿದ ರಾಜ ಮನೆತನದ ಏಕೈಕ ಮಹಿಳೆ ಅವರು ಎಂಬುದು ವಿಶೇಷ.

 

Advertisement

Udayavani is now on Telegram. Click here to join our channel and stay updated with the latest news.

Next