Advertisement

ಫೋಟೊ ಆಸೆಗೆ ಕೂದಲು ಕಚಕ್‌…

07:32 PM Oct 01, 2019 | Lakshmi GovindaRaju |

ಶಾಲೆಯಲ್ಲಿ ಪ್ರಾರ್ಥನೆಗೆ ನಿಂತಿದ್ದಾಗ, ನಮ್ಮ ನಾಲ್ಕು ಮಂದಿಯ ತಲೆ ಟೀಚರ್‌ಗೆ ವಿಚಿತ್ರವಾಗಿ ಕಂಡಿರಬೇಕು. “ಜಡೆಯಿಲ್ಲದ ನಾಲ್ಕು ಕೋತಿಗಳು ಇಲ್ಲಿ ಬನ್ನಿ. ನಿಮ್ಮ ಜಡೆಯನ್ನು ಯಾವ ದೇವರಿಗೆ ಮುಡಿ ಕೊಟ್ಟಿದ್ದೀರಿ? ಆ ದೇವರು ಪೂರ್ತಿ ಮುಡಿ ಕೇಳಲಿಲ್ವಾ?’… ಎಂದಾಗ ನಾಚಿಕೆ, ಭಯ, ಅವಮಾನವಾಗಿ ಅಳತೊಡಗಿದೆವು.

Advertisement

ಕೆಲವು ವರ್ಷಗಳ ಹಿಂದಿನ ಮಾತು. ಆಗ ಗ್ರಾಮಕ್ಕೊಂದು ಪಂಚಾಯತ್‌, ಹತ್ತು ಹಳ್ಳಿಗೊಂದು ಪೋಸ್ಟ್ಆಫೀಸ್‌, ದೂರದಲ್ಲೊಂದು ಸರ್ಕಾರಿ ಆಸ್ಪತ್ರೆ, ಒಂದು ನ್ಯಾಯಬೆಲೆ ಅಂಗಡಿ, ಒಂದೆರಡು ದಿನಸಿ ಅಂಗಡಿ… ಇಷ್ಟೇ ಇದ್ದದ್ದು. ಬ್ಯೂಟಿಪಾರ್ಲರ್‌, ಫೋಟೋ ಸ್ಟುಡಿಯೋ, ಬಟ್ಟೆ ಅಂಗಡಿ, ಕ್ಲಿನಿಕ್‌ಗೆ ಪೇಟೆಗೇ ಹೋಗಬೇಕಿತ್ತು. ಆಗಷ್ಟೇ ಭಟ್ಕಳ ತಾಲೂಕಿನ ಬೆಳ್ಕೆಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭವಾಗಿತ್ತು. ಸುತ್ತಮುತ್ತಲಿನ ಇಪ್ಪತ್ತು-ಮೂವತ್ತು ಹಳ್ಳಿಗೆ ಅದೊಂದೇ ಪ್ರೌಢಶಾಲೆ.

ಐದ್ಹತ್ತು ಮೈಲುಗಳಿಂದ ಮಕ್ಕಳು ಓಡುತ್ತಾ, ಏದುಸಿರು ಬಿಡುತ್ತಾ ಆ ಶಾಲೆಗೆ ಬರುತ್ತಿದ್ದರು. ಬಗಲಿಗೆ ಸ್ಕೂಲ್‌ಬ್ಯಾಗ್‌ ಇರುತ್ತಿರಲಿಲ್ಲ. ಪುಸ್ತಕಗಳನ್ನು ಒಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿ ಮಡಚಿ, ಕೈಲಿ ಹಿಡಿದುಕೊಂಡು ಹೋಗುತ್ತಿದ್ದೆವು. ಮಳೆ ಬಂದಾಗ ಪಠ್ಯಪುಸ್ತಕಗಳನ್ನು ಎದೆಗಾನಿಸಿಕೊಂಡು, ಒದ್ದೆಯಾಗದಂತೆ ನೋಡಿಕೊಳ್ಳುತ್ತಿದ್ದೆವು. ಬೆಳಗ್ಗೆ ತಂಗಳನ್ನ, ರವೆ ರೊಟ್ಟಿ ಅಥವಾ ಗೋಧಿಹಿಟ್ಟಿನ ದೋಸೆ ತಿಂದು ಓಡಲು ಪ್ರಾರಂಭಿಸಿದರೆ, ಸಂಜೆ ಅದೇ ಸ್ಪೀಡಿನಲ್ಲಿ ಪುರ್ರನೆ ಹಾರಿ ಮನೆ ಸೇರುತ್ತಿದ್ದೆವು.

ಒಮ್ಮೆ ಹೈಸ್ಕೂಲಿನ ಗೆಳತಿಯೊಬ್ಬಳು, “ಬನ್ರೇ, ನಾವು ನಾಲ್ಕು ಮಂದಿ ಫೋಟೋ ತೆಗೆಸಿಕೊಳ್ಳೋಣ. ನಮ್ಮ ಬಳಿ ನೆನಪಿಗಾಗಿ ಒಂದು ಫೋಟೋವಾದರೂ ಇರಲಿ’ ಎಂದಳು. ನಮ್ಮೂರಲ್ಲಿ ಸ್ಟುಡಿಯೋ ಇರಲಿಲ್ಲ. ಭಟ್ಕಳಕ್ಕೆ ಹೋಗುವುದಾದರೂ ಸರಿಯೇ, ಫೋಟೋ ಬೇಕೇ ಬೇಕು ಅಂತ ಹೊರಟೆವು. ಅಲ್ಲಿನ ಸ್ಟುಡಿಯೋದವ ನಮ್ಮ ಮುಖ ನೋಡಿ, “ಅಡಗೂಲಜ್ಜಿ ಥರ ಕಾಣಿಸ್ತಿದ್ದೀರಿ. ಬ್ಯೂಟಿಪಾರ್ಲರ್‌ಗೆ ಹೋಗಿ ಹೇರ್‌ಸ್ಟೈಲ್‌ ಬದಲಿಸಿ, ಮೇಕಪ್‌ ಮಾಡಿಸ್ಕೊಂಡು ಬನ್ನಿ’ ಎಂದು ಉಚಿತ ಸಲಹೆ ಕೊಟ್ಟ.

ಫೋಟೊದಲ್ಲಿ ಚಂದ ಕಾಣಿಸಬೇಕೆಂಬ ಆಸೆಯಿಂದ ಬ್ಯೂಟಿಪಾರ್ಲರ್‌ ಎಲ್ಲಿದೆ ಅಂತ ಕೇಳಿ, ವಿಚಾರಿಸಿಕೊಂಡು ಹೊರಟೆವು. ಅಲ್ಲಿಯ ತನಕ ಗಂಡಸರ ಸಲೂನ್‌ ಬಗ್ಗೆ ತಿಳಿದಿತ್ತೇ ಹೊರತು, ಹೆಂಗಳೆಯರ ಹೆರಳು ಕತ್ತರಿಸುವವರ ಬಗ್ಗೆ ತಿಳಿದಿರಲಿಲ್ಲ. ಹೆದರುತ್ತಲೇ ಅಲ್ಲಿಗೆ ಹೋದೆವು. ನಾಲ್ಕೂ ಮಂದಿಯ ಮಾರುದ್ದದ ಜಡೆಯನ್ನು ಯು ಶೇಪ್‌, ವಿ ಶೇಪ್‌ ಹೆಸರಿನಲ್ಲಿ ಚೋಟುದ್ದ ಮಾಡಿದಳು ಅಲ್ಲಿದ್ದ ಹೆಂಗಸು. ನಂತರ ಮುಖಕ್ಕೆ ಒಂದಿಂಚಿನ ಮೇಕಪ್‌ ಮೆತ್ತಿಕೊಂಡು, ಲಿಪ್‌ಸ್ಟಿಕ್‌ ಬಳಿದುಕೊಂಡು, ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ನಮ್ಮ ಗುರುತು ನಮಗೇ ಸಿಗುತ್ತಿರಲಿಲ್ಲ.

Advertisement

ಸ್ಟುಡಿಯೋಗೆ ಹೋಗಿ, ಬೇಕು ಬೇಕಾದಂತೆ ಮೂರ್ನಾಲ್ಕು ಭಂಗಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಮನೆಗೆ ಬಂದೆ. ನನ್ನ ವೇಷ ನೋಡಿದ ಅಮ್ಮ, ಸಹಸ್ರ ನಾಮಾರ್ಚನೆ ಮಾಡಿ ಮಂಗಳಾರತಿ ಮಾಡಿದಳು. “ಬೇಕಿತ್ತಾ ನಿನಗೆ ಈ ಸಂಭ್ರಮ? ನೀನೇನು ಸಿನೆಮಾದಲ್ಲಿ ಕುಣಿಯೋ ಗೊಂಬೆನಾ? ಉದ್ದ ಜಡೆ ಎಷ್ಟು ಚಂದ ಕಾಣ್ತಿತ್ತು. ನಾಳೆ ಶಾಲೆಗೆ ಅದು ಹೇಗೆ ಎರಡುಜಡೆ ಹೆಣೆದುಕೊಳ್ತೀಯ?’ ಅಂದಾಗ ನನಗೂ ಗಾಬರಿಯಾಯ್ತು. ಮರುದಿನ ಎರಡು ಪುಕ್ಕ ಕಟ್ಟಿಕೊಂಡು ಶಾಲೆಗೆ ಹೋದೆ. ಶಾಲೆ ಯಲ್ಲಿ ಪ್ರಾರ್ಥನೆಗೆ ನಿಂತಿದ್ದಾಗ, ನಮ್ಮ ನಾಲ್ಕು ಮಂದಿಯ ತಲೆ ಟೀಚರ್‌ಗೆ ವಿಚಿತ್ರವಾಗಿ ಕಂಡಿರಬೇಕು. “ಜಡೆಯಿಲ್ಲದ ನಾಲ್ಕು ಕೋತಿಗಳು ಇಲ್ಲಿ ಬನ್ನಿ. ನಿಮ್ಮ ಜಡೆಯನ್ನು ಯಾವ ದೇವರಿಗೆ ಮುಡಿ ಕೊಟ್ಟಿದ್ದೀರಿ?

ಆ ದೇವರು ಪೂರ್ತಿ ಮುಡಿ ಕೇಳಲಿಲ್ವಾ?’ ಎಂದಾಗ ನಾಚಿಕೆ, ಭಯ, ಅವಮಾನವಾಗಿ ಅಳತೊಡಗಿದೆವು. “ಅದೇನು ಮಾಡ್ತೀರೋ ನನಗೆ ಗೊತ್ತಿಲ್ಲ. ದಿನವೂ ನೀವು ಜಡೆ ಹೆಣೆದು ರಿಬ್ಬನ್‌ ಕಟ್ಟಿಕೊಂಡೇ ಬರಬೇಕು’ ಎಂದಾಗ ನನ್ನ ಗೋಳಾಟ ಹೇಳತೀರದು. ಸ್ಟುಡಿಯೋಗೆ ಹೋಗೋಣವೆಂದ ಗೆಳತಿಗೆ ಬೈಯ್ಯುತ್ತಾ, ಅದಕ್ಕೆ ಒಪ್ಪಿದ ನನ್ನ ಬುದ್ಧಿಗೂ ಬೈದುಕೊಂಡೆ. “ಟೀಚರ್‌ ಸರಿಯಾಗಿ ಹೇಳಿದ್ದಾರೆ’ ಅಂತ ಅಮ್ಮ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದರು. ಕೂದಲಿನ ಬುಡದಿಂದಲೇ ರಿಬ್ಬನ್‌ ಸೇರಿಸಿ, ಜಡೆ ಹೆಣೆದು ನಂತರ ಮೊಂಡಾದ ಜಡೆ ಬಿಚ್ಚಿ ಹೋಗದಂತೆ ರಬ್ಬರ್‌ ಹಾಕಿಕೊಂಡು ಶಾಲೆಗೆ ಹೋಗತೊಡಗಿದೆ.

* ಗೀತಾ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next