Advertisement

ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆ ಮುಚ್ಚುವುದಿಲ್ಲ

11:03 AM May 20, 2017 | Harsha Rao |

ಹಿರಿಯ ರಾಜಕಾರಣಿ ದಿವಂಗತ ಅಜೀಜ್‌ ಸೇಠ್ ಅವರ ಪುತ್ರ ತನ್ವಿರ್ ಸೇಠ್ ಸಂಪುಟ ಪುನಾರಚನೆ ಸಂದರ್ಭ ಸಿದ್ದರಾಮಯ್ಯ ಮಂತ್ರಿ ಮಂಡಲ ಸೇರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೊಣೆ ಹೊತ್ತವರು. ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಮಿಕ ಮತ್ತು ವಕ್ಫ್ ಸಚಿವರಾಗಿಯೂ ಕೆಲಸ ಮಾಡಿದ್ದರು.

Advertisement

– ನಿಮ್ಮ ಇಲಾಖೆಯ ಸಾಧನೆ ಏನೇನು?
ಪ್ರತಿಯೊಬ್ಬರಿಗೂ ಶಿಕ್ಷಣ ನಮ್ಮ ಇಲಾಖೆಯ ಗುರಿ. ಆ ನಿಟ್ಟಿನಲ್ಲಿ ಇಲಾಖೆ ಹಲವಾರು ಕಾರ್ಯಕ್ರಮ ರೂಪಿಸಿ ಅನುಷ್ಠಾನ
ಗೊಳಿಸುತ್ತಿದೆ. ಶಾಲಾ ಕಟ್ಟಡಗಳ ನಿರ್ಮಾಣ, ದುರಸ್ತಿ, ಬೋಧಕ- ಬೋಧಕೇತರ ಸಿಬ್ಬಂದಿ ನೇಮಕಕ್ಕೆ ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿನ ನ್ಯೂನತೆ ಸರಿಪಡಿಸುವ ನಿಟ್ಟಿನಲ್ಲಿ ತಿದ್ದುಪಡಿ ತರಲಾಗಿದ್ದು ಇದೊಂದು ಮಹತ್ತರ ಕಾರ್ಯ. ಏಕೆಂದರೆ ಶಿಕ್ಷಣ ಇಲಾಖೆಯ ಸಮಗ್ರ ಸುಧಾರಣೆಗೆ ಇದು ಸಹಕಾರಿಯಾಗಲಿದೆ.

– ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ಆರೋಪ ಇದೆಯಲ್ಲ?
ಆ ರೀತಿ ಬಿಂಬಿಸಲಾಗುತ್ತಿದೆ. ನಾವು ಮಕ್ಕಳಿರುವ ಸರ್ಕಾರಿ ಶಾಲೆ ಎಲ್ಲೂ ಮುಚ್ಚಿಲ್ಲ. ಮುಚ್ಚುವುದೂ ಇಲ್ಲ. ಸರ್ಕಾರಿ ಶಾಲೆಗಳು ಉಳಿಯಬೇಕು ಎಂಬುದು ನಮ್ಮ ಉದ್ದೇಶ ಸಹ. ತೀರಾ ಮಕ್ಕಳ ಸಂಖ್ಯೆ ಕಡಿಮೆಯಿರುವ ಶಾಲೆಗಳ ವಿಚಾರದಲ್ಲಿ ಸಮೀಪದ ಶಾಲೆಗೆ ವಿಲೀನ ಮಾಡಲಾಗುತ್ತಿದೆಯಷ್ಟೇ. ಆದರೆ, ಕೆಲವೊಂದು ಸವಾಲು ಎದುರಿಸುತ್ತಿದ್ದೇವೆ. ಸೌಲಭ್ಯದ ನಡುವೆಯೂ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಈ ವರ್ಷ ದಾಖಲಾತಿ ಆಂದೋಲನದ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಂಕಲ್ಪ ಮಾಡಿದ್ದೇವೆ.

– ಮಕ್ಕಳ ಸಂಖ್ಯೆ ಕಡಿಮೆ ಇರುವ ಸರ್ಕಾರಿ ಶಾಲೆ ವಿಲೀನ ಮಾಡುವುದು ಎಷ್ಟು ಸರಿ?
ರಾಜ್ಯದ 2,164 ಶಾಲೆಗಳಲ್ಲಿ 10 ಮಕ್ಕಳಿಗಿಂತ ಕಡಿಮೆ ದಾಖಲಾತಿ ಇದೆ. ಹೆಚ್ಚುವರಿ ಶಿಕ್ಷಕರ ನಿಯೋಜನೆ ಸಂದರ್ಭದಲ್ಲಿ ಶೂನ್ಯ ದಾಖಲಾತಿಯ 729 ಶಾಲೆಗಳು ಪುನರ್‌ ಆರಂಭವಾಗಿದೆ. 259 ಏಕ ವಿದ್ಯಾರ್ಥಿ ಇರುವ ಶಾಲೆಗೂ ಶಿಕ್ಷಕರನ್ನು ನೀಡಿದ್ದೇವೆ. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂಬ ಶ್ವೇತಪತ್ರ ಹೊರಡಿಸಿದ್ದೇವೆ. ಶಾಲೆಯ ವಿಲೀನದ ಬಗ್ಗೆಯೂ ನಮ್ಮ ನಿಲುವು ಸ್ಪಷ್ಟವಾಗಿದೆ.

– ಈ ವರ್ಷ 5ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸುವ ತೀರ್ಮಾನ ಆಗಿದೆಯಂತಲ್ಲಾ ?
ಕಳೆದ ವರ್ಷ 4 ಮತ್ತು 6 ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸಿದ್ದೇವೆ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ತಿಳಿಯಲು ಸಾಧವಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯಂತೆ 8ನೇ ತರಗತಿ ತನಕ ಮಕ್ಕಳನ್ನು ಅನುತ್ತೀರ್ಣ ಮಾಡುವಂತಿಲ್ಲ. 5ನೇ ತರಗತಿಗೆ ಪರೀಕ್ಷೆ ನಡೆಸಿ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನು ಮಾಡಲಿದ್ದೇವೆ. ಈ ಸಂಬಂಧ ತೀರ್ಮಾನವೂ ಆಗಿದೆ.

Advertisement

– ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳ ಹಿಡಿತದಲ್ಲಿದೆ ಎಂಬ ಆರೋಪವಿದೆಯಲ್ಲ ?
ಇದನ್ನು ಒಪ್ಪುವುದಿಲ್ಲ. ಸರ್ಕಾರ ಯಾರ ಹಿಡಿತ ಹಾಗೂ ಮೂಲಾಜಿಗೂ ಒಳಗಾಗಿಲ್ಲ. ಕಾನೂನು ಪ್ರಕಾರ ಇರುವ ಸಂಸ್ಥೆಗಳನ್ನು ಗೌರವಿಸುತ್ತೇವೆ. ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಹೆಚ್ಚುವರಿ ಶುಲ್ಕ ಪಡೆದ ಸಂಸ್ಥೆಗೆ 10 ಲಕ್ಷ ರೂ. ವರೆಗೂ ದಂಡ ಹಾಗೂ ಮಾನ್ಯತೆ ರದ್ದು ಮಾಡುವ ನಿಯಮ ರೂಪಿಸಿದ್ದೇವೆ. ಖಾಸಗಿ ಶಾಲೆಯಲ್ಲಿ ಶುಲ್ಕ ನಿಯಂತ್ರಣ, ಮಕ್ಕಳ ರಕ್ಷಣೆ, ಸಿಬಿಎಸ್‌ಇ, ಐಸಿಎಸ್‌ಇ ಶಿಕ್ಷಣ ಸಂಸ್ಥೆಯನ್ನು ಕರ್ನಾಟಕ ಶಿಕ್ಷಣ ಹಕ್ಕು ಕಾಯ್ದೆಯಡಿಗೆ ತಂದು, ಅವರ ಮೇಲೆ ನಿಗಾ ವಹಿಸುವ ಕಾರ್ಯ ನಡೆಯುತ್ತಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲೂ
ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಲು ಆದೇಶ ಮಾಡಿದ್ದೇವೆ.

– ಪಠ್ಯಪುಸ್ತಕ ವಿತರಣೆ ಪ್ರತಿ ವರ್ಷ ಯಾಕೆ ವಿಳಂಬವಾಗುತ್ತದೆ?
ಸಸತ ಮೂರು ವರ್ಷದ ಬರಗಾಲದಿಂದ ರಾಜ್ಯದ ಪ್ರಮುಖ ಮೂರು ಕಾಗದದ ಕಾರ್ಖಾನೆ ಸ್ಥಗಿತವಾಗಿದೆ. ನ್ಯಾಷನಲ್‌ ಪೇಪರ್‌ ಮಿಲ್ಸ್‌ ಜತೆ ಸಂಪರ್ಕಿಸಿ, ಪಠ್ಯಪುಸ್ತಕ ಮುದ್ರಿಸುವ ಟೆಂಡರ್‌ ಬಿಡ್‌ದಾರರಿಗೆ ಪೇಪರ್‌ ನೀಡಿದ್ದೇವೆ. ಈ ವರ್ಷ ಶೈಕ್ಷಣಿಕ ವರ್ಷ ಆರಂಭದಲ್ಲೇ ಮಕ್ಕಳಿಗೆ ಪಠ್ಯ ಪುಸ್ತಕ ಒದಗಿಸಲಿದ್ದೇವೆ.

– ಮಕ್ಕಳ ಚೀಲದ ಹೊರೆ ಕಡಿಮೆ ಮಾಡಲು ಕ್ರಮ ಇದೆಯೆ?
ಎನ್‌ಸಿಆರ್‌ಟಿ ಕಲಿಕಾ ಮಾರ್ಗಸೂಚಿಯಂತೆ ಪಠ್ಯ ಕಡಿಮೆ ಮಾಡದೆ, ಮಕ್ಕಳ ವಯೋಮಿತಿಗೆ ತಕ್ಕಂತೆ ಪಠ್ಯಪರಿಷ್ಕರಣೆ
ಮಾಡಿದ್ದೇವೆ. 256 ಪುಟಕ್ಕಿಂತ ಅಧಿಕವಿರುವ ಪುಸ್ತಕವನ್ನು ಎರಡು ವಿಭಾಗ ಮಾಡಿದ್ದೇವೆ. ಆರಂಭದಲ್ಲಿ ಅರ್ಧ ಹಾಗೂ ದಸರಾ ರಜೆ ನಂತರ ಉಳಿದ ಅರ್ಧಭಾಗದ ಪುಸ್ತಕ ನೀಡಲಿದ್ದೇವೆ. ಇದರಿಂದ ಮಕ್ಕಳ ಚೀಲದ ಹೊರೆ ಕಡಿಮೆ ಆಗುತ್ತದೆ.

– ಕಳೆದ 10 ವರ್ಷದಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡಿಲ್ಲ ಎಂಬ ಆರೋಪ ಇದೆಯಲ್ಲ?
250 ಮಕ್ಕಳಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ತಲಾ ಒಬ್ಬ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ 240 ವಿದ್ಯಾರ್ಥಿಗಳಿರುವ ಪಿಯು ಕಾಲೇಜಿಗೆ ಒಬ್ಬ ದೈಹಿಕ ಶಿಕ್ಷಕರನ್ನು ನೇಮಿಸಬೇಕೆಂಬ ಕ್ರಮ ಇದೆ. ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ನಿವಾರಣೆಗೆ ಸಹ ಶಿಕ್ಷಕರಿಗೆ ದೈಹಿಕ ಶಿಕ್ಷಣದ ತರಬೇತಿ ನೀಡಿದ್ದೇವೆ. ಹಾಗೆಯೇ ದೈಹಿಕ ಶಿಕ್ಷಕರನ್ನು ಭಾಷಾ ಶಿಕ್ಷಕರಾಗಿ ತಯಾರಿ ಮಾಡುತ್ತಿದ್ದೇವೆ.

– ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಯದ್ದೇ ದೊಡ್ಡ ಸಮಸ್ಯೆ ಎಂಬ ಮಾತಿದೆಯಲ್ಲ?
ಶಿಕ್ಷಕರ ವರ್ಗಾವಣೆ ಜೇನು ಗೂಡಿದ್ದಂತೆ. 2007ರ ಶಿಕ್ಷಕರ ವರ್ಗಾವಣಾ ಕಾಯ್ದೆಯಲ್ಲಿ ಅನೇಕ ಗೊಂದಲ ಇದೆ. ಕಳೆದ
ವರ್ಷ ಕಾನೂನು ತಿದ್ದುಪಡಿ ಇಲ್ಲದೇ, ಪ್ರಯೋಜನಕಾರಿ ಮಾರ್ಪಾಡು ಮಾಡಿ, ಶಿಕ್ಷಕರ ವರ್ಗಾವಣಾ ನೀತಿ ರೂಪಿಸಿದ್ದೇವು. ಯಾವ ಗೊಂದಲ ಇಲ್ಲದೇ ವರ್ಗಾವಣೆ ಆಗಿದೆ. ಈ ವರ್ಷ ಅದಕ್ಕೆ ಮತ್ತಷ್ಟು ಪುಷ್ಠಿ ನೀಡಿ, ದಂಪತಿ ಶಿಕ್ಷಕರ ವರ್ಗಾವಣೆ ಇನ್ನಷ್ಟು ಸಲೀಸು ಮಾಡಿದ್ದೇವೆ. ನಗರ ಪ್ರದೇಶದಲ್ಲಿ 10 ವರ್ಷಕ್ಕಿಂತ ಜಾಸ್ತಿ ಇರುವವರಿಗೂ ವರ್ಗಾವಣೆ ಭಾಗ್ಯ ಕಡ್ಡಾಯ. ಅಂಗವಿಕಲರಿಗೆ, ನಿವೃತ್ತಿಗೆ ಹತ್ತಿರ ಇರುವವರಿಗೆ ವಿನಾಯ್ತಿ ಇದೆ. ಹೊಸದಾಗಿ
ನೇಮಕಗೊಳ್ಳುವ ಶಿಕ್ಷಕರಿಗೆ ಗ್ರಾಮೀಣ ಸೇವೆ ಕಡ್ಡಾಯ. ಈ ಬಾರಿ ವರ್ಗಾವಣೆ ಪ್ರಮಾಣ ಶೇ.8 ರಿಂದ ಶೇ.15 ಕ್ಕೆ ಏರಿಸಿದ್ದೇವೆ.

– ಪ್ರಶ್ನೆಪತ್ರಿಕೆ ಸೋರಿಕೆ ಇಲಾಖೆಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆಯಲ್ಲ?
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಕಾನೂನು ತಿದ್ದುಪಡಿ ಮಾಡಿದ್ದೇವೆ. ಒಂದೊಮ್ಮೆ ಶಿಕ್ಷಣ ಸಂಸ್ಥೆಗಳ ಹಂತದಲ್ಲಿ ಇಂತಹ ತಪ್ಪು ಆಗಿದ್ದರೆ ಆ ಸಂಸ್ಥೆಯ ಮಾನ್ಯತೆ ರದ್ದಾಗಲಿದೆ. ಪರೀಕ್ಷಾ ವೇಳೆ ನಕಲು ಮಾಡಲು ಅವಕಾಶ ನೀಡುವ ಸಂಸ್ಥೆ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ.

– ನಿಮ್ಮ ಹೊಣೆಗಾರಿಕೆಯ ವಕ್ಫ್ ಇಲಾಖೆಗೆ ಸಂಬಂಧಿಸಿದಂತೆ ಅನ್ವರ್‌ ಮಾನಿಪ್ಪಾಡಿಯವರ ವರದಿ ಅನುಷ್ಠಾನ ಮಾಡುವ ಯೋಜನೆ ಇದೆಯಾ?
ಅನ್ವರ್‌ ಮಾನಿಪ್ಪಾಡಿ ವರದಿ ಸರ್ಕಾರದ ಮುಂದಿಲ್ಲ. 2012ರಲ್ಲಿ ಸರ್ಕಾರಕ್ಕೆ ಒಪ್ಪಿಸಿದ್ದು, ಸಚಿವ ಸಂಪುಟ ಅದರ ಅನುಷ್ಠಾನಕ್ಕೆ ಒಪ್ಪಿಗೆ ನೀಡಿರಲಿಲ್ಲ.

– ವಕ್ಫ್ ಆಸ್ತಿ ನುಂಗಣ್ಣರ ಪಾಲಾಗುತ್ತಿದೆ ಎಂಬ ಆರೋಪ ಇದೆಯಲ್ಲ?
ವಕ್ಫ್ ಆಸ್ತಿಯ ಎರಡನೇ ಹಂತದ ಸರ್ವೇ ಶೇ.60ರಷ್ಟು ಪೂರ್ಣಗೊಂಡಿದೆ. ವಕ್ಫ್ ಆಸ್ತಿಗೆ ಖಾತಾ ರೂಪಿಸಿ, ಆಸ್ತಿ ಮಾರಾಟ ನಿಷೇಧ ಮಾಡಿದ್ದೇವೆ. ರುದ್ರಭೂಮಿಗೆ ಜಮೀನು ನೀಡಲು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಗ್ರಾಪಂ ಹಂತದಲ್ಲಿ ವಕ್ಫ್ ಆಸ್ತಿ ರಕ್ಷಣೆ ಜವಾಬ್ದಾರಿಯನ್ನು ಪಿಡಿಒಗಳಿಗೆ ನೀಡಿದ್ದೇವೆ. ವಕ್ಫ್ ಆಸ್ತಿ ಸಂರಕ್ಷಿಸಿ ತಡೆಗೋಡೆ ನಿರ್ಮಿಸಲು 85 ಕೋಟಿ ರೂ. ಬಿಡುಗಡೆಯಾಗಿದೆ. ಅತಿಕ್ರಮಣ ತಡೆಯಲು ಜಿಲ್ಲಾಮಟ್ಟದ ಕಾರ್ಯಪಡೆ ಸಿದ್ಧಪಡಿಸಿದ್ದೇವೆ. ವಕ್ಫ್ ವ್ಯಾಜ್ಯ ಪರಿಹಾರಕ್ಕೆ ತ್ರಿಸದಸ್ಯ ಸಂಚಾರಿ ನ್ಯಾಯಮಂಡಳಿಯನ್ನು ಬೆಂಗಳೂರು, ಮೈಸರು
ಮತ್ತು ಬೆಳಗಾವಿ, ಕಲಬುರಗಿ ವಿಭಾಗದಲ್ಲಿ ಸ್ಥಾಪಿಸಿದ್ದೇವೆ. ವಕ್ಫ್ ಆಸ್ತಿ, ಮಸೀದಿ, ಖಬ್ರಸ್ತಾನ್‌ ನೋಂದಣಿ ಮಾಡುತ್ತಿದ್ದೇವೆ.

– ವಕ್ಫ್ ಆಸ್ತಿ ಅತಿಕ್ರಮಣ ಮಾಡಿರುವವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ?
ವಕ್ಫ್ ಆಸ್ತಿಯಲ್ಲಿ ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಆಸ್ಪತ್ರೆ, ಬಸ್‌ ನಿಲ್ದಾಣ ಇತ್ಯಾದಿ ಸಾರ್ವಜನಿಕ ಉಪಯೋಗಿ ಸರ್ಕಾರಿ ಕಟ್ಟಡ ಇದ್ದರೆ, ಆ ಜಾಗವನ್ನು ಏಕಕಾಲ ಮತ್ತು ಏಕಕ್ರಮವಾಗಿ ಸರ್ಕಾರಕ್ಕೆ ನೀಡಲು ತೀರ್ಮಾನ ತೆಗೆದುಕೊಂಡಿದ್ದೇವೆ. ಖಾಸಗಿ ವ್ಯಕ್ತಿ ವಕ್ಫ್ ಆಸ್ತಿ ಅತಿಕ್ರಮಣ ಮಾಡಿದ್ದರೆ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತೆರವು ಮಾಡಲಿದ್ದೇವೆ.

– ಮಕ್ಕಳ ಆಸೆ, ಆಕಾಂಕ್ಷೆಗೆ ಅಡ್ಡಿ ಬರಲ್ಲ 
ನಮ್ಮದು ರಾಜಕೀಯ ಹಿನ್ನೆಲೆಯಿಂದ ಕೂಡಿದ ಕುಟುಂಬ. ಮೈಸೂರು ಮಹಾರಾಜರು ನಮಗೆ ಆಶ್ರಯ ನೀಡಿ,
ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದ್ದರು. ನಮ್ಮ ಅಜ್ಜ-ಅಪ್ಪ ರಾಜಕೀಯದಲ್ಲಿದ್ದವರು. ಇದೀಗ ನಾನಿದ್ದೇನೆ. ಮಗಳು
ಬಿ.ಕಾಂ ಪೂರೈಸಿ ಸಿಎ ಮಾಡುತ್ತಿದ್ದಾಳೆ. ಮಗ ಈಗ ಬಿಕಾಂ ಸೇರಿದ್ದಾನೆ. ಅವರ ಇಚ್ಛೆಯಂತೆ ನಡೆದುಕೊಳ್ಳುತ್ತಿದ್ದೇನೆ.
ಅವರ ಆಸೆ, ಆಕಾಂಕ್ಷೆಗೆ ಎಂದಿಗೂ ಅಡ್ಡಿ ಬರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next