Advertisement

ಮಂಗಳೂರಿನಲ್ಲಿ ಮೊದಲ ಬಾರಿಗೆ ರಸ್ತೆಗಿಳಿಯಲಿದೆ ಬೈಕ್‌ ಆ್ಯಂಬುಲೆನ್ಸ್‌

11:58 AM Jun 29, 2018 | Team Udayavani |

ಮಹಾನಗರ: ನಗರದಲ್ಲಿ ಉದ್ಭವಿಸಿರುವ ಟ್ರಾಫಿಕ್‌ ಜಾಂ ಸಮಸ್ಯೆಯಿಂದ ಆ್ಯಂಬುಲೆನ್ಸ್‌ಗಳು ಸರಿಯಾದ ಸಮಯಕ್ಕೆ ತಲುಪದೆ ಕೆಲವೊಮ್ಮೆ ರೋಗಿಗಳ ಸ್ಥಿತಿಯೂ ಅಯೋಮಯವಾಗುವುದಿದೆ. ಇದಕ್ಕಾಗಿ ನಗರದ ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ ಹೊಸ ದಾರಿಯೊಂದನ್ನು ಕಂಡುಕೊಂಡಿದೆ. ಅದೆಂದರೆ ಬೈಕ್‌ ಆ್ಯಂಬುಲೆನ್ಸ್‌ ಸೇವೆ.

Advertisement

ಜೀವ ರಕ್ಷಣೆಗಾಗಿ ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ನೆರವು ಒದಗಿಸುವ ಉದ್ದೇಶದಿಂದ ಆಸ್ಪತ್ರೆಯು ಮಂಗಳೂರಿನಲ್ಲೇ ಮೊದಲ ಬಾರಿಗೆ ಬೈಕ್‌ ಆ್ಯಂಬುಲೆನ್ಸ್‌ ಸೇವೆಯನ್ನು ರೋಗಿಗಳಿಗೆ ಕಲ್ಪಿಸುತ್ತಿದೆ. ನಗರದೊಳಗೆ ಕರೆ ಬಂದ ಕಡೆಗೆ ತೆರಳಿ ರೋಗಿಗೆ ತತ್‌ಕ್ಷಣಕ್ಕೆ ಬೇಕಾದ ಪ್ರಾಥಮಿಕ ಚಿಕಿತ್ಸೆ ಕೊಡಿಸುವುದು ಈ ಹೊಸ ಯೋಜನೆಯ ಉದ್ದೇಶ. ಮುಖ್ಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮತ್ತು 15 ನಿಮಿಷದೊಳಗೆ ಪ್ರಥಮ ಚಿಕಿತ್ಸೆ ಅಗತ್ಯವಾದ ರೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಸೇವೆಯನ್ನು ಪರಿಚಯಿಸಲಾಗಿದೆ.

ಸೈರನ್‌ ಹಾಕಲಿದೆ ಬೈಕ್‌
ಬೈಕ್‌ ಆ್ಯಂಬುಲೆನ್ಸ್‌ ಇತರ ಬೈಕ್‌ಗಳ ಮಾದರಿಯಲ್ಲೇ ಇರುತ್ತದೆ. ಸೈರನ್‌ ವ್ಯವಸ್ಥೆ ಇದ್ದು, ಬೈಕಿನ ಮೇಲ್ಭಾಗದಲ್ಲಿ ಸೈರನ್‌ ದೀಪವನ್ನು ಕೂಡ ಅಳವಡಿಸಲಾಗಿದೆ. ಬೈಕ್‌ನಲ್ಲಿ ಸುಮಾರು ಮೂರು ಬಾಕ್ಸ್‌ಗಳಿದ್ದು, ಇವುಗಳಲ್ಲಿ ಪ್ರಥಮ ಚಿಕಿತ್ಸೆಯ ಕಿಟ್‌, ಏರ್‌ ಬ್ಯಾಗ್‌ ಮತ್ತು ಎಲ್ಲ ಅವಶ್ಯ ಔಷಧಗಳಿರುತ್ತವೆ. ಅಡ್ವಾನ್ಸ್‌ ಕಾರ್ಡಿಯಾಕ್‌ ಲೈಫ್‌ ಸಪೋರ್ಟ್‌ (ಎಸಿಎಲ್‌ಎಸ್‌), ಬೇಸಿಕ್‌ ಲೈಫ್‌ ಸಪೋರ್ಟ್‌ (ಬಿಸಿಎಸ್‌) ತರಬೇತಿ ಹೊಂದಿದ ಇಬ್ಬರು ನರ್ಸಿಂಗ್‌ ಸಿಬಂದಿಯನ್ನು ಬೈಕ್‌ ಆ್ಯಂಬುಲೆನ್ಸ್‌ ಸೇವೆಗಾಗಿ ನಿಯೋಜಿಸಲಾಗಿದ್ದು, ಕರೆ ಬಂದಲ್ಲಿಗೆ ತೆರಳಿ ತತ್‌ಕ್ಷಣಕ್ಕೆ ಬೇಕಾದ ಚಿಕಿತ್ಸೆಗಳನ್ನು ನೀಡುತ್ತಾರೆ.

ಪ್ರಾಥಮಿಕ ಚಿಕಿತ್ಸೆಗೆ ಸುಲಭ
ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ ಸಮಸ್ಯೆಯಿಂದಾಗಿ ಆ್ಯಂಬುಲೆನ್ಸ್‌ ಗಳಿಗೂ ಕೆಲವೊಮ್ಮೆ ಕಾಲಕ್ಕೆ ತಲುಪಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಬೈಕ್‌ ಆ್ಯಂಬುಲೆನ್ಸ್‌ ಸೇವೆಯನ್ನು ಪರಿಚಯಿಸಲಾಗಿದೆ. ಬೈಕ್‌ ಆ್ಯಂಬುಲೆನ್ಸ್‌ ಶೀಘ್ರ ತೆರಳುತ್ತದೆಯಾದ್ದರಿಂದ ಪ್ರಾಥಮಿಕ ಚಿಕಿತ್ಸೆ ನೀಡುವುದು ಸುಲಭವಾಗುತ್ತದೆ. ಬಳಿಕ ಆಸ್ಪತ್ರೆಯಿಂದ ಆ್ಯಂಬುಲೆನ್ಸ್‌ ಕೂಡಾ ತೆರಳಿ ರೋಗಿಯನ್ನು ಆಸ್ಪತ್ರೆಗೆ ಕರೆ ತರಲಾಗುತ್ತದೆ ಎಂದು ಫಾ| ಮುಲ್ಲರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ| ರುಡಾಲ್ಫ್ ರವಿ ಡೇಸಾ ತಿಳಿಸಿದ್ದಾರೆ.

ಶೀಘ್ರ ಸೇವೆ ಆರಂಭ
ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರವೇ ಬೈಕ್‌ ಆ್ಯಂಬುಲೆನ್ಸ್‌ನ್ನು  ಪರಿಚಯಿಸಲಾಗುತ್ತಿದೆ. ಈಗಾಗಲೇ ಬೈಕ್‌ ನೋಂದಣಿ ಕಾರ್ಯ ಮುಗಿದಿದ್ದು, ಆ್ಯಂಬುಲೆನ್ಸ್‌ ಸೇವೆಗಾಗಿ ಉಪಯೋಗಿಸುವುದರಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ವಿಶೇಷ ಅನುಮತಿ ಬೇಕಾಗುತ್ತದೆಯೋ ಎಂಬುದಾಗಿ ವಿಚಾರಿಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ತತ್‌ ಕ್ಷಣವೇ ಬೈಕ್‌ ಆ್ಯಂಬುಲೆನ್ಸ್‌ ರಸ್ತೆ ಗಿಳಿಯಲಿದೆ ಎನ್ನುತ್ತಾರೆ ಫಾ| ರುಡಾಲ್ಫ್ ರವಿ ಡೇಸಾ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ (0824-2238333, 2238332)ಗೆ ಕರೆ ಮಾಡಬಹುದು. 

Advertisement
Advertisement

Udayavani is now on Telegram. Click here to join our channel and stay updated with the latest news.

Next