ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಶುಕ್ರವಾರ (ಜೂನ್ 24) ನಾಮಪತ್ರ ಸಲ್ಲಿಸಿದರು. ಮುರ್ಮು ಅವರ ನಾಮಪತ್ರ ಅನುಮೋದಿಸಲು ಆಡಳಿತಾರೂಢ ಪಕ್ಷ ಹಾಗೂ ಮೈತ್ರಿಕೂಟದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
ಇದನ್ನೂ ಓದಿ:ಗೋವು ಕಳ್ಳಸಾಗಣೆ ಪ್ರಕರಣ; ಜಾರಿ ನಿರ್ದೇಶನಾಲಯದಿಂದ ಟಿಎಂಸಿ ಸಂಸದ, ನಟ ದೇವ್ ವಿಚಾರಣೆ
ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವಾರು ಮುಖ್ಯಮಂತ್ರಿಗಳು ಜತೆಗಿದ್ದರು. ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗಾಗಿ ಮುರ್ಮು ನಾಮಪತ್ರ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ಅಭ್ಯರ್ಥಿಯಾಗಿ ಮುರ್ಮು ಅವರನ್ನು ಅನುಮೋದಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಾಮಪತ್ರದ ಸೆಟ್ ಅನ್ನು ಚುನಾವಣಾಧಿಕಾರಿ ಪಿ.ಸಿ.ಮೋಡೈ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಎನ್ ಡಿಎ ಮೈತ್ರಿಕೂಟದ ವೈಎಸ್ ಆರ್ ಕಾಂಗ್ರೆಸ್, ಬಿಜು ಜನತಾ ದಳದ ಮುಖಂಡರು ಹಾಜರಿದ್ದರು.
ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ಆಯ್ಕೆಯಾದರೆ, ಬುಡಕಟ್ಟು ಜನಾಂಗದ ಮೊದಲ ಮಹಿಳೆ ಹಾಗೂ ಅತ್ಯುತ್ನದ ಹುದ್ದೆಗೇರಿದ ಎರಡನೇ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ. 64 ವರ್ಷದ ದ್ರೌಪದಿ ಮುರ್ಮು ಒಡಿಶಾದ ಮೊದಲ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ. ಮುರ್ಮು ಜಾರ್ಖಂಡ್ ನ ಮೊದಲ ಮಹಿಳಾ ರಾಜ್ಯಪಾಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಪಕ್ಷಗಳು ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು, ಅವರು ಜೂನ್ 27ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21ರಂದು ಫಲಿತಾಂಶ ಹೊರಬೀಳಲಿದೆ.