ಸುಳ್ಯ: ಜಾತಿ, ಕೋಮುಗಳ ಮಧ್ಯೆ ವಿಷ ಬೀಜಗಳನ್ನು ಬಿತ್ತುತ್ತಿರುವ ಈ ಕಾಲಘಟ್ಟದಲ್ಲಿ ಕಲೆಗಳು, ಸಾಹಿತ್ಯದ ಕುರಿತಾದ ನಮ್ಮ ನಲ್ಮೆಗಳು ನಮ್ಮ ಪ್ರತಿಯೊಂದು ಸಾಮಾಜಿಕ ಘಟಕಗಳಲ್ಲಿ ಇರಬೇಕಾದ ಅನಿವಾರ್ಯತೆ ಇದೆ ಎಂದು ಹಿರಿಯ ನಾಟಕಕಾರ ಡಾ| ಡಿ.ಎಸ್. ಚೌಗಲೆ ಬೆಳಗಾವಿ ಅಭಿಪ್ರಾಯಿಸಿದರು.
ಸುಳ್ಯದ ಹಳೆ ಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದ ಆಶ್ರಯದಲ್ಲಿ ಫೆ 2, 3 ಮತ್ತು 4ರಂದು ಹಮ್ಮಿಕೊಂಡಿರುವ ಹದಿನಾರನೇ ವರ್ಷದ ರಂಗಸಂಭ್ರಮ- 2018 ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಭಾರತವನ್ನು ಬಹುತ್ವದ ನೆಲೆಯಲ್ಲಿ ನೋಡಬೇಕಿದೆ. ಇಲ್ಲಿ ಏಕಮುಖಿಯಾಗಿ ದೃಷ್ಟಿ ಹಾಯಿಸಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿನ ರಂಗಕಲೆ ಅಥವಾ ಜನಪದೀಯ ಕಲೆಗಳು ಅದರ ಅನನ್ಯತೆಯನ್ನು ಇಟ್ಟುಕೊಂಡಿರುವುದು ಬಹುತ್ವದಲ್ಲಿ ಎಂದು ವಿವರಿಸಿದರು.
2018ನೇ ಸಾಲಿನ ರಂಗಮನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಸಾಮಾಜಿಕ ಜಾಲ ತಾಣ ಸೇರಿದಂತೆ ಕೆಲ ಮಾಧ್ಯಮಗಳಲ್ಲಿ ಸುಖಾ ಸುಮ್ಮನೆ ಟೀಕಿಸುವ, ಯೋಗ್ಯತೆ, ಸಂಸ್ಕಾರದ ಪರಿವೆ ಇಲ್ಲದೇ ಯಾರು ಯಾರ ವಿರುದ್ಧವೂ ಪ್ರತಿಕ್ರಿಯಿಸುವ ಸಂದರ್ಭ ಸೃಷ್ಟಿಯಾಗಿದೆ. ಅಂತಹ ಮನಸ್ಥಿತಿಗಳು ದೂರವಾಗುವ ಅಗತ್ಯವಿದೆ ಎಂದು ನುಡಿದರು.
ಶಾಸಕ ಎಸ್ ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಕಸಾಪ ಅಧ್ಯಕ್ಷ ಕೆ. ಮೋಹನ್ ರಾವ್, ಅರಂತೋಡು ಪಾಪ್ಯುಲರ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ರಂಗಮನೆಯ ಸುಜನಾ ಸುಳ್ಯ ಉಪಸ್ಥಿತರಿದ್ದರು. ರಂಗಮನೆ ಅಧ್ಯಕ್ಷ ಜೀವನ್‌ರಾಂ ಸುಳ್ಯ ಸ್ವಾಗತಿಸಿದರು. ಸದಸ್ಯ ಡಾ| ಸುಂದರ ಕೇನಾಜೆ ವಂದಿಸಿದರು. ಮೌಲ್ಯಾ ಜೀವನ್‌ರಾಂ ನಿರೂಪಿಸಿದರು. ವಳಕುಂಜ ಕುಮಾರ ಸುಬ್ರಹ್ಮಣ್ಯ ನಿರ್ದೇಶನದಲ್ಲಿ 12 ಚಂಡೆ, ಮದ್ದಳೆಗಳ ಯಕ್ಷ ತಾಳ-ಲಯ ಝೆಂಕಾರ ಪ್ರದರ್ಶನಗೊಂಡಿತ್ತು.