ಚಂಡೀಗಢ್: ಇತ್ತೀಚೆಗೆ ನಡೆದ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಈಶಾನ್ಯ ರಾಜ್ಯಗಳಲ್ಲಿ ಮೈತ್ರಿ ಪಕ್ಷಗಳೊಂದಿಗೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಉತ್ತರ ಭಾರತದ ಎರಡು ರಾಜ್ಯಗಳಾದ ಹಿಮಾಚಲ್ ಪ್ರದೇಶ ಮತ್ತು ಹರ್ಯಾಣದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ಗೆಲುವಿನ ನಗು ಬೀರಿದೆ.
ಇದನ್ನೂ ಓದಿ:ಕಾಬೂಲ್ ಸೇನಾ ಆಸ್ಪತ್ರೆಯಲ್ಲಿ ಅವಳಿ ಸ್ಫೋಟ; 15 ಮಂದಿ ಸಾವು, 34 ಜನರಿಗೆ ಗಾಯ
ಹಿಮಾಚಲ ಪ್ರದೇಶದ ಮೂರು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪರಾಜಯಗೊಂಡಿದ್ದು, ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ ಎಂದು ವರದಿ ವಿವರಿಸಿದೆ.
ಹಿಮಾಚಲ ಪ್ರದೇಶದಲ್ಲಿ ನಾವು ಮೂರು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯ ಸಾಧಿಸಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಲೋಕಸಭಾ ಕ್ಷೇತ್ರ ಹಾಲಿ ಬಿಜೆಪಿ ಸಂಸದರಿದ್ದು, ಮುಖ್ಯಮಂತ್ರಿ ತವರು ಜಿಲ್ಲೆಯಾಗಿದೆ. ಈ ಸೋಲು ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಹಿನ್ನಡೆ ತಂದಿದೆ ಎಂದು ಶುಕ್ಲಾ ಹೇಳಿದರು. ಹಣದುಬ್ಬರದ ಪರಿಣಾಮ ನಾವು ಸೋಲನ್ನು ಅನುಭವಿಸುವಂತಾಗಿದೆ ಎಂದು ಹಿಮಾಚಲ್ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಉಪಚುನಾವಣೆ ಫಲಿತಾಂಶದ ಕುರಿತು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.