Advertisement

ಫುಟ್ ಬಾಲ್‌ ವಿಶ್ವಕಪ್‌: ಭಾರತೀಯರಿಂದ ಟಿಕೆಟ್‌ ಖರೀದಿ ದಾಖಲೆ

10:58 PM Jul 02, 2022 | Team Udayavani |

ಪಣಜಿ: ಕತಾರ್‌ ಪುರುಷರ ವಿಶ್ವಕಪ್‌ ಫುಟ್ ಬಾಲ್‌ ಗೆ ಭಾರತವೇನು ಅರ್ಹತೆ ಗಳಿಸಿಲ್ಲ. ಭಾರತದ ಫುಟ್ ಬಾಲ್‌ ಆಟದ ಗುಣಮಟ್ಟ ಇನ್ನೂ ಆ ಮಟ್ಟಕ್ಕೇರಿಲ್ಲ. ಹಾಗಿದ್ದರೂ ಈ ನವೆಂಬರ್‌ನಲ್ಲಿ ನಡೆಯುವ ಕತಾರ್‌ ವಿಶ್ವಕಪ್‌ನ ಮೊದಲ ಹಂತದ ಟಿಕೆಟ್‌ ಮಾರಾಟದಲ್ಲೇ ಭಾರತೀಯರು 23,573 ಟಿಕೆಟ್‌ ಖರೀದಿಸಿದ್ದಾರೆ.

Advertisement

ಕತಾರ್‌ ಹೊರತುಪಡಿಸಿದರೆ ಗರಿಷ್ಠ ಟಿಕೆಟ್‌ ಪಡೆದ ವಿಶ್ವದ ಇತರ 10 ರಾಷ್ಟ್ರಗಳ ಪೈಕಿ ಭಾರತ 7ನೇ ಸ್ಥಾನ ಪಡೆದಿದೆ! ಇತಿಹಾಸದಲ್ಲೇ ಗರಿಷ್ಠ ಭಾರತೀಯರು ವಿಶ್ವಕಪ್‌ಗೆ ಫುಟ್ ಬಾಲ್‌ ವೀಕ್ಷಿಸಿದ ದಾಖಲೆ ನಿರ್ಮಾಣವಾಗುವುದು ಖಚಿತ.

ಭಾರತ ವಿಶ್ವಕಪ್‌ಗೆ ಅರ್ಹತೆ ಗಳಿಸದಿದ್ದರೂ, ಅಭಿಮಾನಿಗಳಿಗೇನು ಕೊರತೆಯಿಲ್ಲ. ಬಂಗಾಲ, ಕೇರಳ, ಈಶಾನ್ಯ ರಾಜ್ಯಗಳಲ್ಲಿ ಫುಟ್ ಬಾಲ್‌ ಬಹಳ ಜನಪ್ರಿಯತೆ ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕತಾರ್‌ ರಾಜಧಾನಿ ದೋಹಾ, ಭಾರತದ ಬಹುತೇಕ ನಗರಗಳಿಂದ ವಾಯುಮಾರ್ಗದಲ್ಲಿ ಕೇವಲ 4 ಗಂಟೆಗಳ ಅಂತರದಲ್ಲಿದೆ!

ಅಂದರೆ ವಿಮಾನಯಾನದ ಮೂಲಕ ಬೇಗ ಕತಾರನ್ನು ಭಾರತೀಯರು ತಲುಪಿಕೊಳ್ಳಬಹುದು. ಹಾಗೆಯೇ ಆ ದೇಶದಲ್ಲೂ ಸಾಕಷ್ಟು ಭಾರತೀಯರು ಉದ್ಯೋಗ ಮಾಡುತ್ತಲೂ ಇದ್ದಾರೆ. ಇವೆಲ್ಲ ಟಿಕೆಟ್‌ ಮಾರಾಟ ಹೆಚ್ಚಲು ಕಾರಣ.

ಇಷ್ಟು ಟಿಕೆಟ್‌ಗಳು ಮಾರಾಟವಾಗಿರುವುದು ಮೊದಲ ಹಂತದ ಮಾರಾಟದಲ್ಲಿ. ಒಟ್ಟಾರೆ ಎಲ್ಲ ದೇಶಗಳಿಂದ ಸೇರಿ 18 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಸದ್ಯದಲ್ಲೇ 2ನೇ ಹಂತದ ಮಾರಾಟ ಆರಂಭವಾಗಲಿದೆ. ಆಗ ಇನ್ನೆಷ್ಟು ಟಿಕೆಟ್‌ಗಳು ಮಾರಾಟವಾಗುತ್ತವೆ ಎಂದು ಕಾದು ನೋಡಬೇಕು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next