ದೋಹಾ: ರವಿವಾರದಿಂದ ಕತಾರ್ನಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಋಣಾತ್ಮಕ ಸಂಗತಿಗಳೇ ಹೆಚ್ಚು ಸುದ್ದಿಯಾಗುತ್ತಿರುವುದು ವಿಪ ರ್ಯಾಸ. ಈ ಸಾಲಿಗೆ ನೂತನ ಸೇರ್ಪಡೆಯೆಂದರೆ, ದುಬಾರಿ ಟಿಕೆಟ್ ದರ.
ಮುಖ್ಯವಾಗಿ ಇದು ವಿದೇ ಶಗಳಿಂದ ಆಗಮಿಸಿದ ಫುಟ್ ಬಾಲ್ ವೀಕ್ಷಕರ ಅಸ ಮಾಧಾನಕ್ಕೆ ಕಾರಣವಾಗಿದೆ. ಒಂದು ನಿದರ್ಶನ ಒದಗಿಸುವುದಾದರೆ, ಡೆಲ್ಲಿ-ಕತಾರ್ ನಡುವಿನ ವಿಮಾನದ ಟಿಕೆಟ್ ದರಕ್ಕಿಂತ ಫುಟ್ ಬಾಲ್ ಪಂದ್ಯದ ಟಿಕೆಟ್ ಬೆಲೆ ಜಾಸ್ತಿ!
ಇದು, ರಷ್ಯಾದಲ್ಲಿ 4 ವರ್ಷಗಳ ಹಿಂದೆ ಆಡಲಾದ ವಿಶ್ವಕಪ್ ಫುಟ್ ಬಾಲ್ ವೇಳೆಯಿದ್ದ ಟಿಕೆಟ್ ದರಕ್ಕಿಂತ ಶೇ. 40ರಷ್ಟು ಏರಿಕೆಯಾಗಿದೆ.
ರಷ್ಯಾದಲ್ಲಿ ಪ್ರೇಕ್ಷಕರೊಬ್ಬರ ಪ್ರವೇಶಕ್ಕೆ ಸರಾಸರಿ 214 ಪೌಂಡ್ಗಳಾಗಿದ್ದರೆ (20 ಸಾವಿರ ರೂ.) ಕತಾರ್ನಲ್ಲಿ ಇದು 286 ಪೌಂಡ್ಗಳಿಗೆ ಏರಿದೆ (28 ಸಾವಿರ ರೂ.). 2018ರ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರದೊಂದಿಗೆ ಹೋಲಿಸಿದರೆ ಈ ಸಲದ ದರದಲ್ಲಿ ಶೇ. 59ರಷ್ಟು ಏರಿಕೆ ಆಗಿದೆ! ಫೈನಲ್ ಪಂದ್ಯದ ಅತ್ಯಂತ ದುಬಾರಿ ಟಿಕೆಟ್ ಬೆಲೆ 686 ಪೌಂಡ್ (66,689 ರೂ.) ಆಗಿದೆ. ಅಷ್ಟೇ ಅಲ್ಲ, ಕಳೆದ 20 ವರ್ಷಗಳ ವಿಶ್ವಕಪ್ ಫುಟ್ ಬಾಲ್ ಇತಿಹಾಸದಲ್ಲೇ ಇದು ಅತ್ಯಂತ ದುಬಾರಿ ಎಂಬುದಾಗಿ ಮ್ಯೂನಿಚ್ ಮೂಲದ “ಕೆಲ್ಲರ್ ನ್ಪೋರ್ಟ್ಸ್’ ನಡೆಸಿದ ಸಮೀಕ್ಷೆಯೊಂದು ತಿಳಿಸಿದೆ.
Related Articles
ಹೊಸದಿಲ್ಲಿಯಿಂದ ಕತಾರ್ಗೆ ತೆರಳಲು ವಿಮಾನದ ಟಿಕೆಟ್ ಬೆಲೆ ಅಂದಾಜು 50 ಸಾವಿರ ರೂ.ಗಳಾದರೆ, ಫೈನಲ್ ಪಂದ್ಯ ವೀಕ್ಷಿಸಲು ಇದಕ್ಕೂ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಿದೆ! ಇದಕ್ಕೆ ಸಂಬಂಧಿಸಿದಂತೆ ಫುಟ್ಬಾಲ್ ಆಡಳಿತ ಸಂಸ್ಥೆ ಫಿಫಾ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದುಬಾರಿ ದರದ ಹೊರತಾಗಿಯೂ 8 ಸ್ಟೇಡಿಯಂಗಳಲ್ಲಿ ನಡೆಯಲಿರುವ ಪಂದ್ಯಗಳ 3 ಮಿಲಿಯನ್ ಟಿಕೆಟ್ಗಳು ಮಾರಾಟಗೊಂಡಿವೆ.
2006ರಂದು ಜರ್ಮನಿಯಲ್ಲಿ ನಡೆದ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಯ ವೇಳೆಯೂ ದುಬಾರಿ ಟಿಕೆಟ್ ದರದ ಕುರಿತು ಕೂಗು ಕೇಳಿಬಂದಿತ್ತು. ಹಿಂದಿನ 20 ವರ್ಷಗಳಲ್ಲೇ ಇದು ಅತ್ಯಂತ ದುಬಾರಿ ಎನ್ನಲಾಗಿತ್ತು. ಬರ್ಲಿನ್ನಲ್ಲಿ ನಡೆದ ಫೈನಲ್ ಪಂದ್ಯದ ಸರಾಸರಿ ಟಿಕೆಟ್ ದರ 221 ಪೌಂಡ್ ಆಗಿತ್ತು. ಇದೀಗ ಕತಾರ್ನಿಂದಲೂ ಇಂಥದೇ ಕೂಗೆದ್ದಿದೆ.
ಈ ಪಂದ್ಯಾವಳಿಯನ್ನು ಸ್ಮರಣೀಯಗೊಳಿಸುವುದು ಅರಬ್ ರಾಷ್ಟ್ರದ ಗುರಿ. ಇದಕ್ಕಾಗಿ ನೂತನ ಕ್ರೀಡಾಂಗಣ, ಮೈದಾನ, ಸುಸ ಜ್ಜಿತ ರಸ್ತೆಗಳನ್ನು ನಿರ್ಮಿಸಿದೆ. ಭಾರೀ ಮೊತ್ತವನ್ನು ವ್ಯಯಿಸಿದೆ. ಇದನ್ನೀಗ ಟಿಕೆಟ್ ದರದಲ್ಲಿ ಸರಿದೂಗಿಸುವುದು ಕತಾರ್ನ ಯೋಜನೆಯಾಗಿದೆ.
ದರದಲ್ಲಿ ಭಾರೀ ವ್ಯತ್ಯಾಸ
ವಿಶ್ವಕಪ್ ಲೀಗ್ ಹಂತದಿಂದ ಫೈನಲ್ ತನಕ ವಿಶ್ವಕಪ್ ಟಿಕೆಟ್ ದರದಲ್ಲಿ ಭಾರೀ ವ್ಯತ್ಯಾಸ ಇರುವುದನ್ನು ಗಮನಿಸಬಹುದು. ಲೀಗ್ ಹಂತದ ಟಿಕೆಟ್ ದರ 53 ಸಾವಿರ ರೂ.ಗಳಿಂದ 4.79 ಲಕ್ಷ ರೂ. ತನಕ ಇದೆ. ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ನೋಡಲು 37 ಸಾವಿರ ರೂ.ನಿಂದ 8 ಲಕ್ಷ ರೂ., ಕ್ವಾರ್ಟರ್ ಫೈನಲ್ಗೆ 47 ಸಾವಿರ ರೂ.ನಿಂದ 3.40 ಲಕ್ಷ ರೂ., ಸೆಮಿಫೈನಲ್ ಪಂದ್ಯಗಳಿಗೆ 77 ಸಾವಿರ ರೂ.ನಿಂದ 3.5 ಲಕ್ಷ ರೂ., ಫೈನಲ್ ಪಂದ್ಯಕ್ಕೆ 2.25 ಲಕ್ಷ ರೂ.ನಿಂದ 13.39 ಲಕ್ಷ ರೂ. ಟಿಕೆಟ್ ದರ ನಿಗದಿಯಾಗಿದೆ.
ನೆದರ್ಲೆಂಡ್ಸ್ ಬಹಿಷ್ಕಾರ!
ಮಾನವ ಹಕ್ಕುಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ನೆದರ್ಲೆಂಡ್ಸ್ ವೀಕ್ಷಕರು ಈ ಬಾರಿಯ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಬಹಿಷ್ಕರಿಸಲಿದ್ದಾರೆ ಎಂಬುದಾಗಿ ಕೋಚ್ ಲೂಯಿಸ್ ವಾನ್ ಗಾಲ್ ಹೇಳಿದ್ದಾರೆ. ಆದರೂ ತಮಗೆ ಸ್ಫೂರ್ತಿ ತುಂಬಲು ಕನಿಷ್ಠ ಮೂರು ಸಾವಿರದಷ್ಟಾದರೂ ಬೆಂಬಲಿಗರು ಆಗಮಿಸಿದರೆ ಒಳ್ಳೆಯದು; ಒಂದು ವೇಳೆ ನೆದರ್ಲೆಂಡ್ಸ್ ತಂಡ ಫೈನಲ್ ತಲುಪಿದರೆ ಅಭಿಮಾನಿಗಳು ಕನಿಷ್ಠ ಟೆಲಿವಿಷನ್ನಲ್ಲಾದರೂ ಇದನ್ನು ವೀಕ್ಷಿಸಬಹುದೆಂಬ ನಂಬಿಕೆ ವಾನ್ ಗಾಲ್ ಅವರದು.
ನೆದರ್ಲೆಂಡ್ಸ್ನಲ್ಲಿ 28 ಸಾವಿರ ಮಂದಿಯೊಂದಿಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಕೇವಲ ಶೇ. 14ರಷ್ಟು ಮಂದಿ ಕತಾರ್ ವಿಶ್ವಕಪ್ ಫುಟ್ಬಾಲ್ ಬಗ್ಗೆ ಆಸಕ್ತಿ ಹೊಂದಿರುವುದು ತಿಳಿದು ಬಂದಿದೆ.
ಕತಾರ್ಗೆ ವಿಶ್ವಕಪ್ ಆತಿಥ್ಯವನ್ನೇ ನೀಡಬಾರದಿತ್ತು ಎಂಬುದು ನೆದರ್ಲೆಂಡ್ಸ್ನ ಮತ್ತೂಂದು ತಕರಾರು. 32 ತಂಡಗಳು ಭಾಗವಹಿಸಲಿರುವ ಈ ಪಂದ್ಯಾವಳಿಗೆ ಇದು ಅತ್ಯಂತ ಸಣ್ಣ ತಾಣವಾಯಿತು ಎಂಬುದು ಡಚ್ ಆರೋಪ.
ಆದರೆ ಕತಾರ್ನಲ್ಲಿ ಲಭಿಸಿದ ಮೂಲಭೂತ ವ್ಯವಸ್ಥೆ ಕುರಿತು ಡಚ್ ಕೋಚ್ ವಾನ್ ಗಾಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಯುದ್ಧ ವಿಮಾನಗಳ ಭದ್ರತೆಯಲ್ಲಿ ಆಗಮಿಸಿದ ಪೋಲೆಂಡ್ ತಂಡ ಕೆಲವು ದಿನಗಳ ಹಿಂದೆ ಪೋಲೆಂಡ್ ಮೇಲೆ ನಡೆದ ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ ಅಲ್ಲಿನ ಫುಟ್ಬಾಲ್ ತಂಡ ವಿಶೇಷ ಭದ್ರತೆಯೊಂದಿಗೆ ಕತಾರ್ಗೆ ಬಂದಿಳಿದಿದೆ. ಎರಡು ಯುದ್ಧ ವಿಮಾನಗಳು ಪೋಲೆಂಡ್ ತಂಡವಿದ್ದ ವಿಮಾನಕ್ಕೆ ರಕ್ಷಣೆ ಒದಗಿಸಿದವು. ಇದರ ವೀಡಿಯೋವನ್ನು ಪೋಲೆಂಡ್ ಫುಟ್ಬಾಲ್ ಮಂಡಳಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಮಂಗಳವಾರ ಪೋಲೆಂಡ್ ಗ್ರಾಮವೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು.
ಪೋಲೆಂಡ್ನ ವಾಯುಪ್ರದೇಶದಿಂದ ಹೊರಡುವ ವರೆಗೂ ಯುದ್ಧ ವಿಮಾನಗಳು ಫುಟ್ಬಾಲಿಗರಿದ್ದ ವಿಮಾನದ ಹಿಂದೆಯೇ ಸಾಗುತ್ತಿದ್ದವು. ಇದು ರಾಜಕೀಯ ಹಿನ್ನೆಲೆ ಪಡೆದ ಪ್ರಕರಣವಾಗಿತ್ತು. ಪೋಲೆಂಡ್ ನ್ಯಾಟೊ ಸದಸ್ಯ ರಾಷ್ಟ್ರವಾಗಿರುವ ಕಾರಣ ರಷ್ಯಾವೇ ಕ್ಷಿಪಣಿ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪ ಮಾಡಿತ್ತು. ಅದೇ ವೇಳೆ ಉಕ್ರೇನ್ನಲ್ಲಿರುವ ಮೂಲಭೂತ ಸೌಕರ್ಯದ ದಾಸ್ತಾನಿನ ಮೇಲೆ ರಷ್ಯಾ ವ್ಯಾಪಕ ದಾಳಿ ನಡೆಸಿತ್ತು. ಇದನ್ನು ತಡೆಯಲು ಉಕ್ರೇನ್ ಹಾರಿಸಿದ ಬರಾಜ್ ಪೋಲೆಂಡ್ ಗಡಿಯೊಳಗೆ ಬಿದ್ದಿರಬಹುದು ಎನ್ನಲಾಗಿತ್ತು. ಪ್ರಾಥಮಿಕ ತನಿಕಾ ವರದಿ ಬಳಿಕ, ಇದು ಉಕ್ರೇನ್ ಹಾರಿಸಿದ ಕ್ಷಿಪಣಿಯಿಂದ ಸಂಭವಿಸಿದ ಸ್ಫೋಟ ಎಂದು ಅಮೆರಿಕ ಹೇಳಿದೆ.
ಪೋಲೆಂಡ್ “ಸಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಮೆಕ್ಸಿಕೊ, ಆರ್ಜೆಂಟೀನಾ, ಸೌದಿ ಅರೇಬಿಯ ಈ ಗುಂಪಿನ ಇತರ ತಂಡಗಳು.
ನಾಳೆ ವರ್ಣರಂಜಿತ ಆರಂಭ
ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಗೆ ರವಿವಾರ ವರ್ಣ ರಂಜಿತ ಆರಂಭ ಲಭಿಸಲಿದೆ. ಇದನ್ನು ಸ್ಮರಣೀಯ ಗೊಳಿಸಲು ಸಂಘಟಕರು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ದೋಹಾದ “ಅಲ್ ಬೈತ್ ಸ್ಟೇಡಿಯಂ’ನಲ್ಲಿ ಭಾರತೀಯ ಕಾಲಮಾನದಂತೆ ಸಂಜೆ 7.30ಕ್ಕೆ ಉದ್ಘಾಟನ ಸಮಾರಂಭ ಆರಂಭಗೊಳ್ಳಲಿದೆ. ಕತಾರ್ ಸಂಸ್ಕೃತಿಯನ್ನು ಜಗತ್ತಿಗೆ ಬಿಂಬಿಸುವುದು ಉದ್ಘಾಟನ ಸಮಾರಂಭದ ಮೂಲ ಆಶಯ. ಜತೆಗೆ ಕಲೆ ಹಾಗೂ ಸಂಗೀತ ವೈವಿಧ್ಯವೂ ಅನಾವರಣಗೊಳ್ಳಲಿದೆ. ದಕ್ಷಿಣ ಕೊರಿಯಾದ “ಬಿಟಿಎಸ್ ಮ್ಯೂಸಿಕ್’ ಈ ಕಾರ್ಯಕ್ರಮದ ಪ್ರಧಾನ ಆಕರ್ಷಣೆ ಎನಿಸಲಿದೆ.
ಕೊಲಂಬಿಯಾದ ಪಾಪ್ ತಾರೆ ಶಕೀರಾ ಶೋ ಕೂಡ ಇದೆ ಎನ್ನಲಾಗಿದೆ. ಆದರೆ ಶಕೀರಾ ಪಾಲ್ಗೊಳ್ಳುವುದು ಇನ್ನೂ ಖಾತ್ರಿಯಾಗಿಲ್ಲ.