ಧಾರವಾಡ: ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇಲ್ಲಿನ ಕೆಸಿಡಿ ವಿಜ್ಞಾನ ಮಹಾವಿದ್ಯಾಲಯದ ಕಾಲೇಜು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಧಾರವಾಡ ಮತ್ತು ಬೆಳಗಾವಿ ಮಧ್ಯದ ಫೈನಲ್ ಪಂದ್ಯ ರೋಚಕ ತಿರುವು ಪಡೆದುಕೊಂಡು ಅಂತಿಮವಾಗಿ ಬೆಳಗಾವಿ 2-1 ಗೋಲುಗಳಿಂದ ಚಿನ್ನದ ಪದಕ ತನ್ನದಾಗಿಸಿಕೊಂಡಿತು.
ಪಂದ್ಯದಲ್ಲಿ ಬೆಳಗಾವಿ ಪರ ಸುನೀಲ 14 ನಿಮಿಷದಲ್ಲಿ 1 ಗೋಲು ಬಾರಿಸಿದರೆ, ಜ್ಞಾನೇಶ 21 ನಿಮಿಷದಲ್ಲಿ ಇನ್ನೊಂದು ಗೋಲು ಬಾರಿಸಿದ್ದು, ತಂಡವನ್ನು ವಿಜಯದ ಹೊಸ್ತಿಲಲ್ಲಿ ತಂದು ನಿಲ್ಲಿಸಿತು. ಚಾಕಚಕ್ಯತೆ ಮತ್ತು ಅಚ್ಚುಕಟ್ಟಿನ ಆಟ ಪ್ರದರ್ಶಿಸಿದ ಬೆಳಗಾವಿ ತಂಡವನ್ನು ಕಟ್ಟಿ ಹಾಕಲು ಧಾರವಾಡ ತಂಡ ಹರ ಸಾಹಸ ಪಟ್ಟಿತಾದರೂ ಅಂತಿಮವಾಗಿ 25 ನಿಮಿಷದಲ್ಲಿ ಎಂ.ಪಿ.ಥಾಮಸ್ ಬಾರಿಸಿದ ಒಂದು ಗೋಲು ಮಾತ್ರ ತಂಡಕ್ಕೆ ಲಭಿಸಿತು. ಹೀಗಾಗಿ ಧಾರವಾಡ ಬೆಳ್ಳಿ ಪದಕ ಪಡೆಯುವ ಮೂಲಕ ಒಲಿಂಪಿಕ್ಸ್‌ನ ಫುಟ್‌ಬಾಲ್ ರನ್ನರ್ ಅಪ್‌ಗೆ ತೃಪ್ತಿ ಪಡೆಯಿತು.
ಬೆಂಗಳೂರಿಗೆ ಕಂಚು: ಕೆಸಿಡಿ ಕ್ರೀಡಾಂಗಣದಲ್ಲಿ ಬೆಳಗ್ಗೆ ಕಂಚಿನ ಪದಕಕ್ಕಾಗಿ ಬೆಂಗಳೂರು ಮತ್ತು ಮಂಗಳೂರು ತಂಡದ ಮಧ್ಯೆ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 4-1 ಗೋಲುಗಳಿಂದ ಜಯ ಗಳಿಸಿ, ಕಂಚಿನ ಪದಕ ಪಡೆಯಿತು.
ಬೆಂಗಳೂರು ಪರ ಮುನೆರುದ್ಧಿನ್ 21 ನಿಮಿಷದಲ್ಲಿ 1 ಗೋಲು ಬಾರಿಸಿದರೆ, ಸಂತೋಷ 46 ನಿಮಿಷದಲ್ಲಿ 1ಗೋಲು, ಹೆಲನ್ 49 ನಿಮಿಷದಲ್ಲಿ 1ಗೋಲು ಹಾಗೂ ಸಂತೋಷ 77 ನಿಮಿಷದಲ್ಲಿ ಮತ್ತೂಂದು ಗೋಲು ಬಾರಿಸಿದ್ದು ಪಂದ್ಯವನ್ನು ಗೆಲ್ಲಿಸುವುದಕ್ಕೆ ಸಹಕಾರಿಯಾಯಿತು. ಇನ್ನು ಮಂಗಳೂರು ಪರ ಸಫಾನ್ 6ನೇ ನಿಮಿಷದಲ್ಲಿ ಒಂದು ಗೋಲು ಬಾರಿಸಿದ್ದು ಬಿಟ್ಟರೆ, ಬೇರೆ ಆಟಗಾರರ ಕಳಪೆ ಪ್ರದರ್ಶನದಿಂದ ಮಂಗಳೂರು 4ನೇ ಸ್ಥಾನಕ್ಕೆ ಕುಸಿಯಿತು.
ಚಾಂಪಿಯನ್ ಟ್ರೋಫಿ ನೀಡಿದ ಜಿಲ್ಲಾಧಿಕಾರಿ: ಸಮಗ್ರ ವೀರಾಗ್ರಣಿ ಪಡೆದ ಬೆಳಗಾವಿ ತಂಡದ ಆಟಗಾರರನ್ನು ಫುಟ್‌ಬಾಲ್ ಪಂದ್ಯಾವಳಿ ನಡೆದ ಕೆಸಿಡಿ ಮೈದಾನದಲ್ಲೇ ಧಾರವಾಡ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಚಿನ್ನದ ಪದಕ ಮತ್ತು ಚಾಂಪಿಯನ್ ಟ್ರೋಫಿ ನೀಡಿ ಅಭಿನಂದಿಸಿದರು. ಅದೇ ರೀತಿ ರನ್ನರ್ ಅಪ್ ಆದ ಧಾರವಾಡ ತಂಡದ ಆಟಗಾರರಿಗೆ ಬೆಳ್ಳಿ ಪದಕ ಮತ್ತು ಟ್ರೋಫಿ ನೀಡಿದರೆ, ಬೆಂಗಳೂರು ತಂಡದ ಆಟಗಾರರಿಗೆ ಕಂಚಿನ ಪದಕ ನೀಡಿ ಅಭಿನಂದಿಸಿದರು.