ಉಡುಪಿ : ಅಂಗನವಾಡಿಗಳಲ್ಲಿ ಗರ್ಭಿಣಿ, ಬಾಣಂತಿಯರ ಎಲ್ಲ ಆಹಾರ ಸಾಮಗ್ರಿಗಳ ವಿತರಣೆಯಲ್ಲಿ ಆಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಯಾವುದೇ ಗೊಂದಲ ಇಲ್ಲದೇ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ ಅವರು ಸ್ಪಷ್ಟಪಡಿಸಿದ್ದಾರೆ.
“ಮಾತೃ ಪೂರ್ಣ ಯೋಜನೆ ಮುಗಿಯದ ಆಹಾರ ಸಾಮಗ್ರಿ ವಿತರಣೆ ಗೊಂದಲ’ ಎಂಬ ಶೀರ್ಷಿಕೆಯಡಿ ಉದಯವಾಣಿ ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಈ ಸಂಬಂಧ ಅಂಗನವಾಡಿ ಕೇಂದ್ರಗಳಿಗೆ ಸ್ಪಷ್ಟ ನಿರ್ದೇಶನ ನೀಡಿ, ಯಾವುದೇ ಲೋಪ ಆಗದಂತೆ ನೋಡಿಕೊಳ್ಳಲು ಇಲಾಖೆಯಿಂದ ಸೂಚನೆ ನೀಡಲಾಗಿದೆ ಮತ್ತು ಫಲಾನುಭವಿಗಳಿಗೆ ಸರಿಯಾದ ಸಮಯದಲ್ಲಿ ಆಹಾರ ಸಾಮಗ್ರಿ ಸಿಗುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಲಾಗುತ್ತಿದೆ.
ಕೋವಿಡ್ ಸಂದರ್ಭ ಮಾತೃಪೂರ್ಣ ಯೋಜನೆಯಡಿ ಅಂಗನವಾಡಿಗಳಲ್ಲಿ ವಿತರಿಸುವ ಆಹಾರ ಸಾಮಗ್ರಿಗಳನ್ನು ಅರ್ಹ ಫಲಾನುಭವಿಗಳು ಮನೆಗೆ ಕೊಂಡೊಯ್ಯಲು ಅವಕಾಶ ನೀಡಲಾಗಿತ್ತು. ತದನಂತರ ಆದೇಶ ಹಿಂದಕ್ಕೆ ಪಡೆಯಲಾಗಿದ್ದು, ಮೊದಲಿನಂತೆಯೇ ಅಂಗನವಾಡಿಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿತ್ತು. ಪ್ರಸ್ತುತ ಕೇಂದ್ರ ಕಚೇರಿ ನಿರ್ದೇಶನದಂತೆ ಮಳೆಗಾಲ ಮುಗಿಯುವವರೆಗೂ ಆಹಾರ ಸಾಮಗ್ರಿಗಳನ್ನು ಫಲಾನುಭವಿಗಳ ಮನೆಗೆ ವಿತರಿಸಲಾಗುತ್ತಿದೆ. ಅದರಂತೆ ಆಹಾರ ಸಾಮಗ್ರಿಗಳನ್ನು ಗರ್ಭಿಣಿ, ಬಾಣಂತಿಯರ ಮನೆಗೆ ವಿತರಿಸಲಾಗುತ್ತಿದೆ ಹಾಗೂ ಮೊಟ್ಟೆಯನ್ನು ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯವಾಗಿ ಖರೀದಿಸಿ ವಿತರಿಸುತ್ತಿದ್ದಾರೆ. ಕೇಂದ್ರ ಕಚೇರಿಯ ಸೂಚನೆಯಂತೆ ಮೊಟ್ಟೆ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ಎಲ್ಲ ಆಹಾರ ಸಾಮಗ್ರಿ ವಿತರಣೆಯನ್ನು ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡದೆ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಎಲ್ಲ ಫಲಾನುಭವಿಗಳು ಸಂಬಂಧಿಸಿದ ಎಲ್ಲ ಅಂಗನವಾಡಿ ಕೇಂದ್ರಗಳೊಂದಿಗೆ ಸಂಪರ್ಕದಲ್ಲಿದ್ದು ಕ್ಲಪ್ತ ಸಮಯದಲ್ಲಿ ಸೌಲಭ್ಯ ಪಡೆದುಕೊಳ್ಳುತ್ತಿರುವುದು ಖಾತರಿಪಡಿಸಿಕೊಳ್ಳುತ್ತಿದ್ದೇವೆ ಎಂದು ವೀಣಾ ವಿವೇಕಾನಂದ ತಿಳಿಸಿದ್ದಾರೆ.
ಇದನ್ನೂ ಓದಿ : ಮಸ್ಕಿ: ಮೀನಿಗೆ ಆಹಾರ ಹಾಕಲು ಹೋಗಿ ಬಾವಿಗೆ ಬಿದ್ದ ವಿದ್ಯಾರ್ಥಿನಿ, ಇನ್ನೂ ಪತ್ತೆಯಾಗದ ದೇಹ