Advertisement

ಕೆಂಪಡಿಕೆ ಸಾಗಾಟಕ್ಕೆ ಆಹಾರ ಸುರಕ್ಷೆಯ ಮಾನದಂಡ ಅಡ್ಡಿ!

04:18 PM Nov 29, 2020 | keerthan |

ಮಂಗಳೂರು: ಉತ್ತರ ಭಾರತಕ್ಕೆ ಕ್ಯಾಂಪ್ಕೋ ಸಾಗಾಟ ಮಾಡುತ್ತಿರುವ ಕೆಂಪಡಿಕೆಗೆ ಭಾರತೀಯ ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರದ (ಎಫ್‌.ಎಸ್‌.ಎಸ್‌.ಎ.ಐ) ಮಾನದಂಡ ಇದೀಗ ಅಡ್ಡಿಯಾಗುತ್ತಿದೆ.

Advertisement

ಭಾರತೀಯ ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರವು (ಎಫ್‌.ಎಸ್‌.ಎಸ್‌.ಎ.ಐ) ಕೆಂಪಡಿಕೆ ತೇವಾಂಶದ ಮಟ್ಟವನ್ನು ಗರಿಷ್ಠ ಶೇ.7ಕ್ಕೆ ನಿಗದಿಪಡಿಸಿದೆ. ಇದಕ್ಕಿಂತ ಹೆಚ್ಚಿನ ತೇವಾಂಶವಿದ್ದರೆ ಅಂತಹ ಕೆಂಪಡಿಕೆ ಖರೀದಿಗೆ ಪ್ರಾಧಿಕಾರದ ಮಾನದಂಡದಲ್ಲಿ ಅವಕಾಶವಿಲ್ಲ. ಆದರೆ, ಕೆಂಪಡಿಕೆಯು ಸಾಮಾನ್ಯವಾಗಿ 40-45 ದಿನಗಳ ಬಿಸಿಲಿನಲ್ಲಿ ಒಣಗಿದರೂ ತೇವಾಂಶವು ಶೇ.7ಕ್ಕಿಂತ ಹೆಚ್ಚಿರುತ್ತದೆ. ಕೆಲವು ಕೆಂಪಡಿಕೆಯು ಶೇ.11ರಿಂದ 13ರಷ್ಟು ತೇವಾಂಶ ಹೊಂದಿರುತ್ತದೆ.

ಸಮಸ್ಯೆ ಏನು?

ಕ್ಯಾಂಪ್ಕೋದಿಂದ ತೆರಳಿದ ಕೆಂಪಡಿಕೆಯನ್ನು ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಪ್ರಾಧಿಕಾರದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಾರೆ. ಈ ವೇಳೆ ಕೆಂಪಡಿಕೆಯ ತೇವಾಂಶವು ಶೇ.7ಕ್ಕಿಂತ ಅಧಿಕವಿದ್ದರೆ ಅಡಿಕೆ ಸಾಗಾಟ ಮಾಡಿದವರ ಮೇಲೆಯೇ ದುಬಾರಿ ದಂಡ ಹಾಕಲಾಗುತ್ತಿದೆ. ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಅಡಿಕೆ ಸಾಗಾಟ ಮಾಡುವವರ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳಲು ನಿಯಮಾವಳಿಯಲ್ಲಿ ಅವಕಾಶವಿದೆ. ಇದು ಕ್ಯಾಂಪ್ಕೋದ ಕೆಂಪಡಿಕೆ ಸಾಗಾಟಕ್ಕೆ ಬಹುದೊಡ್ಡ ಹೊಡೆತ ನೀಡುತ್ತಿದೆ.

ತೇವಾಂಶ ಜಾಸ್ತಿ ಇದ್ದರೆ ಅಡಿಕೆ ಗುಣಮಟ್ಟವಿಲ್ಲ; ಜತೆಗೆ ಶೇ.15ಕ್ಕಿಂತ ಹೆಚ್ಚು ತೇವಾಂಶವಿದ್ದ ಅಡಿಕೆ ಹಾಳಾಗುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಮತ್ತೆ ಇದರ ಬಳಕೆಗೆ ಅವಕಾಶವಿಲ್ಲ ಎಂಬುದು ಪ್ರಾಧಿಕಾರದ ವಾದ. ಆದರೆ, ಮಳೆ ಅಧಿಕವಿದ್ದರೆ ಅಥವಾ ಇತರ ಕಾರಣದಿಂದ ಕೆಂಪಡಿಕೆ ತೇವಾಂಶ ಶೇ.12ರವರೆಗೂ ಇರುತ್ತದೆ. ಹೀಗಾಗಿ ಪ್ರಾಧಿಕಾರದ ಮಾನದಂಡದಲ್ಲಿಯೇ ತಿದ್ದುಪಡಿ ಆಗಬೇಕು ಎಂಬುದು ಕ್ಯಾಂಪ್ಕೋ ಪ್ರತಿವಾದ.

Advertisement

ಮಾನದಂಡ ತಿದ್ದುಪಡಿಗೆ ಆಗ್ರಹ

ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಬಗ್ಗೆ ಕೆಂಪಡಿಕೆಗೆ ಇರುವ ಮಾನದಂಡಗಳನ್ನು ತಿದ್ದುಪಡಿ ಮಾಡುವಂತೆ ಪ್ರಾಧಿಕಾರಕ್ಕೆ ಪ್ರಸ್ತಾವ ಕಳುಹಿಸಲು ಕ್ಯಾಂಪ್ಕೋ ನಿರ್ಧರಿಸಿದೆ.ಈ ಹಿನ್ನೆಲೆಯಲ್ಲಿ ಸಿ.ಪಿ.ಸಿ.ಆರ್‌.ಐ., ಡಿ.ಎ.ಎಸ್‌.ಡಿ, ಎಫ್‌.ಎ.ಓ ಸಲಹೆಗಾರರು, ವಿಶ್ವವಿದ್ಯಾನಿಲಯಗಳ ಸಂಶೋಧಕರು, ಅಡಿಕೆಗೆ ಸಂಬಂಧಪಟ್ಟ ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಡಿಕೆ ಬೆಳೆಗಾರರ ಸಭೆ ನಡೆಸಲಾಗಿದೆ. ಸಿ.ಸಿ.ಸಿ.ಆರ್‌.ಐ.ನಲ್ಲಿ ಅಡಿಕೆಯ ತೇವಾಂಶದ ಮಟ್ಟ ಹಾಗೂ ವಾಟರ್‌ ಆಕ್ಟಿವಿಟಗಳ ಬಗ್ಗೆ ವಿಶ್ಲೇಷಣೆ ನಡೆಸಲು ನಿರ್ಧರಿಸಲಾಗಿದೆ. ಬಳಿಕ ಸೂಕ್ತ ತಿದ್ದುಪಡಿಗಳನ್ನು ಪ್ರಾಧಿಕಾರಕ್ಕೆ ಶಿಫಾರಸು ಮಾಡಲು ಉದ್ದೇಶಿಸಲಾಗಿದೆ.

2019-20ರ ಕ್ಯಾಂಪ್ಕೋ ಕೆಂಪಡಿಕೆ ವಹಿವಾಟು

793 ಕೋ.ರೂ.ಮೊತ್ತದ 23,427.93 ಮೆ.ಟನ್‌ ಕೆಂಪಡಿಕೆ ಖರೀದಿ

844 ಕೋ.ರೂ. ಮೌಲ್ಯದ 25,163.66 ಮೆ.ಟನ್‌ ಕೆಂಪಡಿಕೆ ಮಾರಾಟ

ಶೇ.90ರಷ್ಟು ಕೆಂಪಡಿಕೆ ಉತ್ತರ ಭಾರತಕ್ಕೆ ಸಾಗಾಟ

ತೇವಾಂಶ ಶೇ.12ಕ್ಕೆ ನಿಗದಿಗೆ ಶಿಫಾರಸು

ಕೆಂಪಡಿಕೆಯ ತೇವಾಂಶದ ಮಟ್ಟವನ್ನು ಗರಿಷ್ಠ ಶೇ.7 ಆಗಿ ಎಫ್‌.ಎಸ್‌.ಎಸ್‌.ಎ.ಐ ನಿಗದಿಪಡಿಸಿದೆ. ಆದರೆ, ಕೆಂಪಡಿಕೆಯ ತೇವಾಂಶ ಶೇ.7ಕ್ಕಿಂತ ಹೆಚ್ಚಿರುತ್ತದೆ. ಆದರೆ, ಈ ಅಡಿಕೆ ಸಾಗಾಟ ಮಾಡುವಾಗ ಉತ್ತರ ಭಾರತ ಭಾಗದಲ್ಲಿ ಪ್ರಾಧಿಕಾರದ ಅಧಿಕಾರಿಗಳು ದಂಡ ಹಾಕುತ್ತಿದ್ದಾರೆ. ಹೀಗಾಗಿ ಕೆಂಪಡಿಕೆ ತೇವಾಂಶದ ಬಗ್ಗೆ ಈಗ ಇರುವ ಮಾನದಂಡವನ್ನು ತಿದ್ದುಪಡಿ ಮಾಡಿ ಶೇ.12ಕ್ಕೆ ನಿಗದಿ ಮಾಡುವಂತೆ ಕ್ಯಾಂಪ್ಕೋ ವತಿಯಿಂದ ಪ್ರಮುಖರ ಸಭೆ ನಡೆಸಿ ಶಿಫಾರಸು ಮಾಡಲಾಗುವುದು.

ಎಸ್‌.ಆರ್‌.ಸತೀಶ್ಚಂದ್ರ, ಅಧ್ಯಕ್ಷರು, ಕ್ಯಾಂಪ್ಕೊ

Advertisement

Udayavani is now on Telegram. Click here to join our channel and stay updated with the latest news.

Next