Advertisement

ಆಹಾರ ಉತ್ಪಾದನೆ ಕುಂಠಿತ ಸಾಧ್ಯತೆ

06:35 AM Aug 09, 2018 | Team Udayavani |

ಬೆಂಗಳೂರು:ಮುಂಗಾರು ಹಂಗಾಮಿನಲ್ಲಿ ಹದಿಮೂರು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬಿತ್ತನೆ ಕುಂಠಿತವಾಗಿದ್ದು, ಶೇ. 66 ರಷ್ಟು ಮಾತ್ರ ಬಿತ್ತನೆಯಾಗಿದ್ದು, ಆಹಾರ  ಧಾನ್ಯ ಉತ್ಪಾದನೆಯಲ್ಲಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಗಸ್ಟ್‌ ಮೊದಲ ವಾರದವರೆಗೆ ವಾಡಿಕೆಯಂತೆ 522 ಮಿ.ಮೀ. ಮಳೆಯಾಗುತ್ತದೆ. ಈ ವರ್ಷ 505 ಮಿ.ಮೀಟರ್‌ ಮಳೆಯಾಗಿದೆ. ಈ ವರ್ಷ 110 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಉತ್ಪಾದನೆಯ ಗುರಿ ಹೊಂದಲಾಗಿದ್ದು, ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಆಹಾರ ಉತ್ಪಾದನೆಯಲ್ಲಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ರಾಯಚೂರು, ಕೊಪ್ಪಳ, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆ, ಗದಗ, ಬಳ್ಳಾರಿ, ರಾಮನಗರ, ಬೀದರ್‌, ಕಲಬುರಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾವೇರಿ, ಮಂಡ್ಯ, ತುಮಕೂರು, ಕೋಲಾರ, ಬಳ್ಳಾರಿ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ.

ಮುಂಗಾರು ಹಂಗಾಮಿನಲ್ಲಿ 74 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದು, 49.47 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಶೇ. 66 ರಷ್ಟು ಮಾತ್ರ ಬಿತ್ತನೆಯಾಗಿದೆ. ಇನ್ನೂ 21.04 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಬಿತ್ತನೆಗೆ ಅವಕಾಶವಿದೆ. ಕೆಲವು ಪ್ರದೇಶಗಳಲ್ಲಿ ಪರ್ಯಾಯ ಬೆಳೆ ಬೆಳೆಯಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಯಚೂರು, ಬಳ್ಳಾರಿ, ಕೊಡಗು ಹಾಗೂ ಚಾಮರಾಜನಗರಗಳಲ್ಲಿ ಶೇಕಡಾ 50 ಕ್ಕಿಂತಲೂ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಪ್ರಮುಖ ಬೆಳೆಗಳಾದ ಭತ್ತ, ರಾಗಿ, ಸಿರಿಧಾನ್ಯಗಳು, ಹುರುಳಿ, ಅವರೆ, ನೆಲಗಡಲೆ, ಸೂರ್ಯಕಾಂತಿ, ಹರಳು ಹಾಗೂ ಮಡಕಿ ಬಿತ್ತನೆ ಶೇಕಡಾ 50ಕ್ಕಿಂತಲೂ ಕಡಿಮೆಯಾಗಿದೆ ಎಂದು ತಿಳಿಸಿದರು.

Advertisement

ಮುಂಗಾರು ಹಂಗಾಮಿಗೆ 8.60 ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಜಗಳ ಅಗತ್ಯವಿದ್ದು, 7.97 ಲಕ್ಷ ಕ್ವಿಂಟಾಲ್‌ ವಿವಿಧ ಬಿತ್ತನೆ ಬೀಜಗಳ ಲಭ್ಯವಿದೆ. ಇದುವರೆಗೂ 3.63 ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಜ ವಿತರಿಸಲಾಗಿದೆ. ಇನ್ನೂ 4.30 ಲಕ್ಷ ಕ್ವಿಂಟಾಲ್‌ ಬೀಜ ದಾಸ್ತಾನಿದೆ. ಮುಂಗಾರು ಹಂಗಾಮಿಗೆ ಅಗತ್ಯವಿರುವಷ್ಟು ರಸಗೊಬ್ಬರ ಸಂಗ್ರಹಿಸಿಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ 8 ಜಿಲ್ಲೆಗಳಲ್ಲಿ 6309 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಬಾಡಿರುವ ವರದಿಯಾಗಿದೆ ಎಂದರು.

ಬೆಳೆಗಳ ಪರಿಸ್ಥಿತಿ ಅಧ್ಯಯನ ಮಾಡಲು ಡ್ರೋನ್‌ ಮೂಲಕ ಸರ್ವೆ ಮಾಡಲು ಚಿಂತಿಸಲಾಗಿದ್ದು, ಡ್ರೋನ್‌ ಮೂಲಕ ಒಂದು ದಿನದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಸಮೀಕ್ಷೆ ನಡೆಸಬಹುದು. ಡ್ರೋನ್‌ ಮೂಲಕ ಬೆಳೆ ಸಮೀಕ್ಷೆಗೆ ಸುಮಾರು 15 ಕೋಟಿ ರೂ. ವೆಚ್ಚವಾಗಲಿದೆ.
– ಎನ್‌.ಎಚ್‌.ಶಿವಶಂಕರರೆಡ್ಡಿ

ನೀಲಗಿರಿ ಬದಲು ಬಿದಿರು
ರಾಜ್ಯದಲ್ಲಿ ನೀಲಗಿರಿ ಬೆಳೆಯನ್ನು ನಿಷೇಧ ಮಾಡಲಾಗಿದ್ದು ಅದಕ್ಕೆ ಪರ್ಯಾಯವಾಗಿ ರೈತರಿಗೆ ಬ್ಯಾಂಬೂ (ಬಿದಿರು) ಬೆಳೆಯಲು ಪ್ರೋತ್ಸಾಹಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ ಸಚಿವರು, ಪರಿಸರ ಸ್ನೇಹಿಯಾಗಿರುವ ಎಲಿಫೆಂಟ್‌ ಆಫ್ ಬ್ಯಾಂಬೂ ಮರಗಳನ್ನು ಬೆಳೆಯುವುದರಿಂದ ರೈತರಿಗೆ ಹೆಚ್ಚಿನ ಆದಾಯ ಬರಲಿದೆ. ಮೂರು ವರ್ಷದಲ್ಲಿ ಬ್ಯಾಂಬು ಬೆಳೆ ಬರಲಿದ್ದು ಪ್ರತಿ ಎಕರೆಗೆ ಕನಿಷ್ಠ 3 ರಿಂದ 3.5 ಲಕ್ಷ ರೂ. ಆದಾಯ ಪಡೆಯಬಹುದು. ಆರಂಭದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಬಿದಿರು ಬೆಳೆಯಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next