ವಿಜಯಪುರ: ರಾಜ್ಯದಲ್ಲಿ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸಿದೆ. ಆದರೆ ಸ್ಥಳ ನಿಗದಿಯಾಗಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸೋಮವಾರ ಉದ್ದೇಶಿತ ಇಟ್ಟಂಗಿಹಾಳ ಫುಡ್ ಪಾರ್ಕ್ ಗೆ ಸ್ಥಳ ಪರಿಶೀಲನೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ, ಧಾರವಾಡ, ವಿಜಯಪುರ ಜಿಲ್ಲೆ ಹೀಗೆ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಯಾವ ಜಿಲ್ಲೆಯನ್ನೂ ಅಯ್ಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು
ಬರುವ ಬಜೆಟ್ ನಲ್ಲಿ ವಿಜಯಪುರ ಹೊರ ವಲಯದ ಇಟ್ಟಂಗಿಹಾಳ ಪ್ರದೇಶದಲ್ಲಿ ಫುಡ್ ಪಾರ್ಕ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ. ಈ ಹಿಂದೆ ಬಬಲೇಶ್ವರ ಶಾಸಕರಾದ ಎಂ.ಬಿ. ಪಾಟೀಲ ಅವರು ಫುಡ್ ಪಾರ್ಕ್ ನ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಹೀಗಾಗಿ ಸ್ಥಳ ಪರಿಶೀಲನೆಗೆ ಆಗಮಿಸಿದ್ದೇನೆ. ಇಟ್ಟಂಗಿಹಾಳ ಪ್ರದೇಶದಲ್ಲಿ ವೈನ್ ಪಾರ್ಕ್ ಹಾಗೂ ಫುಡ್ ಪಾರ್ಕ್ ಎರಡೂ ಯೋಜನೆಗೆ ಒಂದ ಕಡೆಗೆ ಸ್ಥಳ ಮೀಸಲು ಇರಿಸಲಾಗಿದೆ. ಹೀಗಾಗಿ ಈ ಸ್ಥಳದಲ್ಲಿ ಕೃಷಿಗೆ ಸಂಬಂಧಿಸಿದಂತೆ ಶಾಸಕ ಎಂ.ಬಿ.ಪಾಟೀಲ ಅವರ ಸಲಹೆ ಮೇರೆಗೆ ಬಹುಪಯೋಗಿ ಕೃಷಿ ಪಾರ್ಕ್ ನಿಮಾರ್ಣಕ್ಕೆ ಚಿಂತಿಸಲಾಗುತ್ತಿದೆ ಎಂದರು.
ಇದನ್ನೂ ಓದಿ:ಸ್ಥಳೀಯರಿಗೆ ಟೋಲ್ ವಿನಾಯತಿಗಾಗಿ ಕೋಟ ಬಂದ್ ಯಶಸ್ವಿ; ಸಾವಿರಾರು ಮಂದಿಯಿಂದ ಪ್ರತಿಭಟನಾ ಸಭೆ
ವಿಜಯಪುರ ಜಿಲ್ಲೆ ದ್ರಾಕ್ಷಿ, ದಾಳಿಂಬೆ, ತೊಗರಿ ಸೇರಿದಂತೆ ಇತರೆ ಪ್ರಮುಖ ಕೃಷಿ, ತೋಟಗಾರಿಕೆ ಬೆಳೆ ಪ್ರದೇಶ ಹೆಚ್ಚಾಗಿದೆ. ವೈನ್-ಫುಡ್ ಪಾರ್ಕ್ ಗೆ ಒಂದೇ ಕಡೆ ಗುರುತಿಸಿ, ಸೂಕ್ತ ಸ್ಥಳ ಮೀಸಲು ಇರಿಸಿದ್ದಾರೆ. ಎಲ್ಲ ಬಗೆಯ ಕೃಷಿ ಉತ್ಪನ್ನಗಳ ದಾಸ್ತಾನು, ಶೈತ್ಯಾಗಾರ, ಕೌಶಲ್ಯ ತರಬೇತಿಯಂಥ ಕಾರ್ಯಕ್ರಮಕ್ಕೆ ಅನುಕೂಲ ಆಗಲಿದೆ. ತ್ವರಿತವಾಗಿ ಪ್ರಸ್ತಾವನೆ ಸಿದ್ದಪಡಿಸಿ, ಬಜೆಟ್ ನಲ್ಲಿ ಅಗತ್ಯ ಅನುದಾನ ಘೋಷಣೆ ಸಿಎಂಗೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ಹಿಟ್ನಳ್ಳಿ ಕೃಷಿ ವಿಸ್ತರಣಾ ಕೇಂದ್ರವನ್ನು ಮುದ್ದೇಬಿಹಾಳ ಸ್ಥಳಾಂತರ ವಿಚಾರ ಇಲಾಖೆಗೆ ಮುಂದಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಈ ಕುರಿತು ಚರ್ಚೆ ನಡೆಸಿದ್ದಾಗಿ ಇಲ್ಲಿ ಬಂದಮೇಲೆ ತಿಳಿಯಿತು. ಇದನ್ನು ಸ್ಥಳಾಂತರ ಮಾಡದೇ ಅಗತ್ಯ ಬಿದ್ದರೆ ಮುದ್ದೇಬಿಹಾಳಕ್ಕೆ ಹೊಸದಾಗಿ ಕೃಷಿ ವಿಸ್ತರಣಾ ಕೇಂದ್ರ ಮಂಜೂರು ಮಾಡುವುದಾಗಿ ಹೇಳಿದರು.
ವಿಜಯಪುರ ಸೂಕ್ತ: ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕೆ, ಲಿಂಬೆ, ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಉತ್ಕೃಷ್ಟ ಗುಣಮಟ್ಟದ ಬೆಳೆ ಬೆಳೆಯಲಾಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಫುಡ್ ಪಾರ್ಕ್ ನಿರ್ಮಾಣ ಅಗತ್ಯವಿದೆ. ಇದಕ್ಕಾಗಿ ಸರ್ಕಾರಕ್ಕೆ ನಾನು ಮಾಡಿಕೊಂಡ ಮನವಿ ಮೇರೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಂದಿಸಿ, ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ಪ್ರಸಕ್ತ ಬಜೆಟ್ ನಲ್ಲಿ ಯೋಜನೆ ಘೋಷಿಸಿ ಸೂಕ್ತ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.
ಇದನ್ನೂ ಓದಿ:ಯತ್ನಾಳ್ ರಿಗೆ ದೆಹಲಿಗೆ ಬುಲಾವ್ ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ: ಸಚಿವ ಬಿ.ಸಿ.ಪಾಟೀಲ್
ರಾಜ್ಯ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ್, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಇತರರು ಉಪಸ್ಥಿತರಿದ್ದರು.