ಬೆಂಗಳೂರು: ಬಿಬಿಎಂಪಿಯು ಇಲ್ಲಿಯವರೆಗೆ ಒಟ್ಟಾರೆ 1.41 ಲಕ್ಷ ಕಟ್ಟಡ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡಿದೆ. ಇದರಲ್ಲಿ 40 ಸಾವಿರ ಜನ ರಾಜ್ಯದ ವಿವಿಧ ಜಿಲ್ಲೆಗಳಿಂದ ವಲಸೆ ಬಂದವರಾಗಿದ್ದು, ಉಳಿದಂತೆ 90 ಸಾವಿರಕ್ಕೂ ಹೆಚ್ಚು ಜನ ಹೊರರಾಜ್ಯದವರಾಗಿದ್ದಾರೆ. ಲಾಕ್‌ಡೌನ್ ಘೋಷಣೆಯಾದ ಸಂದರ್ಭದಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರಿಗೆ ತುರ್ತಾಗಿ 42 ಸಾವಿರ ಜನರಿಗೆ ಆಹಾರದ ಕಿಟ್ ನೀಡಲಾಗಿದೆ. ಇನ್ನು ರಾಜ್ಯದ 15,681 ಜನ ವಲಸೆ ಕಾರ್ಮಿಕರಿಗೆ ತುರ್ತಾಗಿ ಆಹಾರದ ಕಿಟ್ ನೀಡಲಾಗಿದೆ. ಪ್ರತಿಯೊಬ್ಬ ವಲಸೆ ಕಾರ್ಮಿಕರಿಗೆ 21 ದಿನಗಳಿಗೆ ಆಗುವಷ್ಟು ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿಯ ಕೆರೆ ನಿರ್ವಹಣೆ ಮುಖ್ಯ ಎಂಜಿನಿಯರ್ ಹಾಗೂ ಆಹಾರ ಕಿಟ್ ವಿತರಣೆ ಸಮನ್ವಯ ಅಧಿಕಾರಿ ಮೋಹನಕೃಷ್ಣ ಮಾಹಿತಿ ನೀಡಿದರು.
ಯಾವ ಭಾಗದಲ್ಲಿ ಹೆಚ್ಚು ಕಿಟ್ ವಿತರಣೆ: ಬಿಬಿಎಂಪಿ ವ್ಯಾಪ್ತಿಯ ಹೊರವಲಯದಲ್ಲೇ ಹೆಚ್ಚು ಕಾಮಗಾರಿಗಳು ನಡೆಯುತ್ತಿದ್ದು, ಈ ಭಾಗದಲ್ಲೇ ಹೆಚ್ಚು ಆಹಾರದ ಕಿಟ್ ವಿತರಣೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಯಲಹಂಕ ಭಾಗದಲ್ಲೂ ಹೆಚ್ಚು 29,352 ಆಹಾರದ ಕಿಟ್ ವಿತರಣೆ ಮಾಡಲಾಗಿದೆ. ಇನ್ನು ರಾಜರಾಜೇಶ್ವರಿ ನಗರದಲ್ಲಿ 21,260 ಜನರಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಉಳಿದಂತೆ ಮಹದೇವಪುರ ಹಾಗೂ ಬೊಮ್ಮನಹಳ್ಳಿಯಲ್ಲಿ ಕ್ರಮವಾಗಿ 40,020 ಮತ್ತು 16,207 ಜನರಿಗೆ ವಿತರಿಸಲಾಗಿದೆ ಎಂದರು. ಅಕ್ಷಯ ಪಾತ್ರ ಪ್ರತಿಷ್ಠಾನವೂ ಆಹಾರದ ಕಿಟ್ ವಿತರಣೆ ಮಾಡುತ್ತಿದ್ದು, ಈ ಸಂಸ್ಥೆಯ ಮೂಲಕ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಒಟ್ಟು 46,250 ಜನ ವಲಸೆ ಕಟ್ಟಡ ಮತ್ತು ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್‌ಗಳನ್ನು ನೀಡಲಾ ಗುತ್ತಿದೆ. ಇದಕ್ಕೆ 650 ರೂ. ನಿಗದಿ ಮಾಡಲಾಗಿದ್ದು, ಅಕ್ಕಿಯನ್ನು ಸರ್ಕಾರದಿಂದ ಪ್ರತ್ಯೇಕವಾಗಿ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಮಿಕರ ಸೆಸ್ ಬಳಕೆಗೆ ಮನವಿ: ಕಟ್ಟಡ ನಿರ್ಮಾಣ ಹಾಗೂ ಕೂಲಿ ಕಾರ್ಮಿಕರಿಗೆ ಸರ್ಕಾರದ ಬಳಿ ಇರುವ ಕಟ್ಟಡ ನಿರ್ಮಾಣ ಸೆಸ್ ಬಳಸಿಕೊಳ್ಳಬೇಕು. ಬೆಂಗಳೂರಿನಲ್ಲೇ 8 ಕೋಟಿ ರೂ. ಸೆಸ್ ಹಣ ಇದೆ. ಇಂತಹ ತುರ್ತು ಸಂದರ್ಭದಲ್ಲಾದರೂ ಆ ಹಣ ಬಳಕೆ ಆಗಬೇಕು ಎಂದು ಎಂದು ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್ ಅಸೋಸಿಯೇಷನ್ ಬೆಂಗಳೂರು ಘಟಕ (ಕ್ರೆಡಾಯ್) ಅಧ್ಯಕ್ಷ ಸುರೇಶ್ ಹರಿ ಒತ್ತಾಯಿಸಿದರು. ನಗರದಲ್ಲಿ ಶೇ. 10ರಷ್ಟು ಕೂಲಿ ಕಾರ್ಮಿಕರೂ ಇಲ್ಲ. ಎಲ್ಲರೂ ಅವರ ಊರುಗಳಿಗೆ ಹಿಂತಿರುಗಿ ದ್ದಾರೆ. ಸರ್ಕಾರ ಅವರಿಗೆ ಊಟ ನೀಡುತ್ತಿದೆಯಾದರೂ, ವಸತಿ ಮತ್ತು ಶೌಚಾಲಯದ ವ್ಯವಸ್ಥೆ ಮಾಡಲು ಸಾಧ್ಯ ವಾಗಿಲ್ಲ ಎಂದು ಗುತ್ತಿಗೆದಾರರು ಬೇಸರ ವ್ಯಕ್ತಪಡಿಸಿದರು.
ಆಹಾರ ಕಿಟ್ ನೀಡುವುದರಲ್ಲಿ ಯಾವುದೇ ಲೋಪವಾಗಿಲ್ಲ. ಕಿಟ್ ನೀಡುವ ಮುನ್ನ ಪರಿಶೀಲನೆ ಮಾಡಲಾಗುತ್ತಿದ್ದು, ವಲಸೆ ಕಾರ್ಮಿಕರ ಆಧಾರ್ ಕಾರ್ಡ್ ಮಾಹಿತಿ ಪಡೆದು ಆಹಾರ
ಸರಬರಾಜು ಇಲಾಖೆಯಲ್ಲಿ ಕಾರ್ಡ್ ಇರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕೆ 15 ದಿನಗಳು ಬೇಕಾಗುತ್ತದೆ. ಹೀಗಾಗಿ, ಕೆಲವು ಭಾಗದಲ್ಲಿ ಗೊಂದಲ ಉಂಟಾಗಿದೆ.
ಮುನೀಂದ್ರ ಕುಮಾರ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ
● ಹಿತೇಶ್ ವೈ