ಬೆಳಗಾವಿ: ದೇಶದಲ್ಲಿ ಲಾಕ್‌ಡೌನ್‌ದಿಂದಾಗಿ ಸಂಕಷ್ಟದಲ್ಲಿರುವ ಜನರ ಕಣ್ಣೀರು ಒರೆಸುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ದೇಶದ ಜನರು ನೆಮ್ಮದಿಯಿಂದ ಬಾಳಬೇಕು ಎಂಬ ಉದ್ದೇಶದಿಂದ ಆರ್ಥಿಕ ಪರಿಹಾರ ನೀಡುತ್ತಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಹಿಂಡಲಗಾದಲ್ಲಿರುವ ಗ್ರಾಮೀಣ ಬಿಜೆಪಿ ಮಂಡಳ ಕಚೇರಿಯಲ್ಲಿ ಶನಿವಾರ ನಾಭಿಕ ಸಮಾಜ ಬಾಂಧವರಿಗೆ ಆಹಾರ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಈಗಾಗಲೇ ವಿವಿಧ ಸಮುದಾಯದ ಜನರಿಗೆ ಆರ್ಥಿಕ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನೇಕ ಸವಾಲುಗಳನ್ನು ಎದುರಿಸಿ ಕೋವಿಡ್ ಸಂದರ್ಭದಲ್ಲಿ ಕಷ್ಟ ಪಡುತ್ತಿರುವ ಕುಟುಂಬಗಳಿಗೆ ಪರಿಹಾರ ನೀಡುವ ಮೂಲಕ ಅವರ ನೋವಿಗೆ ಸ್ಪಂದಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಅನೇಕ ಕುಟುಂಬಗಳಿಗೆ ಸರ್ಕಾರ ಸಹಾಯ ಮಾಡಿದೆ ಎಂದು ಹೇಳಿದರು. ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ದೇಶದಲ್ಲಿ ಕೋವಿಡ್ ಬಂದಾಗಿನಿಂದ ಅದನ್ನು ಎದುರಿಸುವ ಸಾಮರ್ಥ್ಯ ಭಾರತೀಯರು ಹೊಂದಿದ್ದಾರೆ. ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಕೋವಿಡ್ ಅಷ್ಟೊಂದು ಪ್ರಭಾವ ಬೀರಿಲ್ಲ. ಮೊದಲನೇ ದಿನದಿಂದಲೂ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡುತ್ತ ಕೋವಿಡ್ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕಾದ ಅಗತ್ಯವಿದೆ ಎಂದರು.
ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ಹಿಮ್ಮೆಟ್ಟಿಸಲು ಉತ್ತಮ ನಿರ್ಧಾರ ಕೈಗೊಂಡಿವೆ. ಕೊರೊನಾ ಕಾಲಿಟ್ಟ ಕೂಡಲೇ ಪ್ರಧಾನಿ ಮೋದಿ ಅವರು ಲಾಕ್‌ಡೌನ್ ನಿರ್ಧಾರ ಕೈಗೊಳ್ಳುವ ಮೂಲಕ ಕೋವಿಡ್ ಸೋಂಕು ನಿಯಂತ್ರಣಕ್ಕೆ ನಾಂದಿ ಹಾಡಿದರು. ಪ್ರಾರಂಭದಲ್ಲಿಯೇ ಇದಕ್ಕೆ ಕಡಿವಾಣ ಹಾಕಿ ಮಹಾಮಾರಿ ಹರಡದಂತೆ ತೆಗೆದುಕೊಂಡ ನಿರ್ಧಾರ ವಿಶ್ವಕ್ಕೆ ಮಾದರಿ ಆಯಿತು ಎಂದರು.
ಲಡಾಕ್‌ನಲ್ಲಿ ಚೀನಾ ಹೇಯ ಕೃತ್ಯಕ್ಕೆ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಆಹಾರದ ಪೊಟ್ಟಣಗಳನ್ನು ವಿತರಿಸಿದರು. ಮುಖಂಡರಾದ ಶಿವಾಜಿ ಸುಂಠಕರ, ಮನೋಹರ ಕಡೋಲ್ಕರ, ರಾಮಚಂದ್ರ ಮನ್ನೋಳಕರ, ಪ್ರವೀಣ ಪಾಟೀಲ, ಭಾಗ್ಯಶ್ರೀ ಕೋಕಿತಕರ, ರಂಜನಾ ಕೋಲಕಾರ, ಜ್ಯೋತಿಬಾ ಮೋರೆ ಸೇರಿದಂತೆ ಇತರರು ಇದ್ದರು.