ವರದಿ : ಬಸವರಾಜ ಹೂಗಾರ
ಹುಬ್ಬಳ್ಳಿ: ಕೋವಿಡ್ ಕೇರ್ ಸೆಂಟರ್ ಹಾಗೂ ಹೋಮ್ ಐಸೋಲೇಷನ್ ಹೊಂದಿದ ಸೋಂಕಿತರಿಗೆ ಇಲ್ಲಿನ ಶ್ರೀ ಕೃಷ್ಣ ಭವನದಿಂದ ಅತ್ಯಂತ ಕಡಿಮೆ ದರದಲ್ಲಿ ಊಟ ಹಾಗೂ ಉಪಹಾರ ವಿತರಣೆ ಕಾರ್ಯ ನಡೆಯುತ್ತಿದೆ.
ಕಳೆದ 23 ದಿನಗಳಿಂದ ನಗರದ ವಿವಿಧ ಭಾಗಗಳಿಗೆ ಊಟ-ಉಪಹಾರ ತಲುಪಿಸುವ ಕೆಲಸವನ್ನು ಶ್ರೀ ಕೃಷ್ಣ ಭವನದ ಸಿಬ್ಬಂದಿ ಮಾಡುತ್ತಿದ್ದಾರೆ. ಕೋವಿಡ್ ಕರ್ಫ್ಯೂದಿಂದ ನಗರದ ಎಲ್ಲ ಹೋಟೆಲ್‌ಗಳು ಬಾಗಿಲು ಹಾಕಿದ್ದು, ಇಂತಹ ಸಮಯದಲ್ಲಿ ಹೋಟೆಲ್ ಸಿಬ್ಬಂದಿ ತಮ್ಮ ತಮ್ಮ ಊರುಗಳಿಗೆ ಮರಳಲು ಸಿದ್ಧವಾಗುತ್ತಿದ್ದರು. ಸಿಬ್ಬಂದಿಗೆ ಉದ್ಯೋಗದ ಜೊತೆಗೆ ಅವರ ಯೋಗಕ್ಷೇಮವೂ ದೊಡ್ಡ ಜವಾಬ್ದಾರಿಯಾಗಿದ್ದು ಅದನ್ನು ಹೇಗೆ ನಿರ್ವಹಿಸಬಹುದು ಎಂದು ಶ್ರೀ ಕೃಷ್ಣ ಭವನದ ಮಾಲೀಕರಾದ ಕೃಷ್ಣಮೂರ್ತಿ ಉಚ್ಚಿಲ ಅವರು ಚಿಂತಿಸಿದಾಗ ಅವರಿಗೆ ನೆರವಾಗಿದ್ದು ಹೋಂ ಐಸೋಲೇಶನ್ ಇರುವವರು ಹಾಗೂ ಕೋವಿಡ್ ಕೇರ್ ಸೆಂಟರ್‌ಗಳು. ಅವರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಊಟ, ಉಪಹಾರ ಹಾಗೂ ಚಹಾ ಬಿಸ್ಕಿಟ್ ವಿತರಣೆ ಮಾಡುವ ಮೂಲಕ ಹೋಟೆಲ್ ಸಿಬ್ಬಂದಿಗೆ ಕೆಲಸದ ಜತೆಗೆ ಸೋಂಕಿತರಿಗೂ ಊಟ ನೀಡುವ ಕಾಯಕದಲ್ಲಿ ತೊಡಗಿಕೊಂಡರು. ಕೋವಿಡ್ ಕೇರ್ ಕೇಂದ್ರಗಳಲ್ಲಿರುವ ವೈದ್ಯರ ನಿಗದಿತ ಆಹಾರ ನಿರ್ಬಂಧಗಳ ಪ್ರಕಾರ, ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮತ್ತು ಆಹಾರವನ್ನು ತಯಾರಿಸಿ ವಿತರಿಸಲಾಗುತ್ತಿದೆ. ಜೊತೆಗೆ ಹೋಂ ಐಸೋಲೇಶನ್ ಇರುವವರಿಗೂ ಅವರ ಬೇಡಿಕೆಗೆ ಅನುಗುಣವಾಗಿ ಊಟ-ಉಪಹಾರ ವಿತರಣೆ ಮಾಡಲಾಗುತ್ತಿದೆ.
ರೋಗಿಗಳಿಗೆ ಕೈಗೆಟಕುವ ಬೆಲೆಯಲ್ಲಿ ನೀಡಲಾಗುವ ಊಟದಲ್ಲಿ ಹಣ್ಣುಗಳು, ಬೇಳೆಕಾಳುಗಳು ಮತ್ತು ತರಕಾರಿಗಳು ಸೇರಿವೆ. ಉಪಹಾರದಲ್ಲಿ ಇಡ್ಲಿ, ಉಪ್ಪಿಟ್ಟು ಸೇರಿದಂತೆ ಇನ್ನಿತರ ಖಾದ್ಯ ನೀಡಲಾಗುತ್ತಿದೆ. ಈಗಾಗಲೇ ಗೋಕುಲ ರಸ್ತೆ ಸಂಜೀವಿನಿ ಆಯರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್‌ಗೆ ಪ್ರತಿದಿನ 50 ಊಟ, ಉಪಹಾರ, ಚಹಾ ಬಿಸ್ಕಿಟ್, ಬಿವಿಬಿ ಕಾಲೇಜು ಆವರಣದಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಸುಮಾರು 20ಕ್ಕೂ ಹೆಚ್ಚು ಊಟ ವಿತರಣೆ ಮಾಡಲಾಗುತ್ತಿದೆ. ಇನ್ನುಳಿದಂತೆ ಹೋಂ ಐಸೋಲೇಷನ್ ಇರುವವರ ಮನೆಗಳಿಗೆ ಊಟ ಸರಬರಾಜು ಮಾಡಲಾಗುತ್ತಿದೆ.