ಕಾರ್ಕಳ: ಲೌಕ್‌ಡೌನ್ ಘೋಷಣೆಯಾದ ಅನಂತರ ಅನ್ನವಿಲ್ಲದೇ ಹಸಿದಿರುವ ಬೀದಿನಾಯಿಗಳಿಗೆ ತುತ್ತು ನೀಡುವ ಮೂಲಕ ಇಲ್ಲೊರ್ವರು ಮಾನವೀಯತೆ ಮೆರೆಯುತ್ತಿದ್ದಾರೆ. ಹೊಟೇಲ್, ಡಾಬಾಗಳ ಸುತ್ತುಮುತ್ತು ತಿರುಗಾಡುತ್ತಿದ್ದು ಹೊಟ್ಟೆ ತುಂಬಿಸುತ್ತಿದ್ದ ಬೀದಿನಾಯಿಗಳು ಲಾಕೌಡೌನ್ ಪರಿಣಾಮ ತುತ್ತು ಅನ್ನವಿಲ್ಲದೇ ಪರಿತಪಿಸುತ್ತಿತ್ತು. ಇದನ್ನು ಮನಗಂಡ ಕಾರ್ಕಳ ಮಾರ್ಕೆಟ್ ರಸ್ತೆಯ ಪ್ರಜ್ವಲ್ ಅವರು ಬೀದಿ ನಾಯಿಗಳಿಗೆ ತುತ್ತು ಅನ್ನ, ಪೆಡಿಗ್ರಿ, ಬಿಸ್ಕೆಟ್, ರಸ್ಕ್, ಬ್ರೆಡ್‌ನೊಂದಿಗೆ ನೀರು ನೀಡುತ್ತಿದ್ದಾರೆ. ಮಾರ್ಕೆಟ್ ರಸ್ತೆ, ಕಾರ್ಕಳ ಬಸ್ ನಿಲ್ದಾಣ, ಅನಂತಶಯನ, ತಾಲೂಕು ಕ್ರೀಡಾಂಗಣ, ಸ್ವರಾಜ್ ಮೈದಾನ, ಕರಿಯಕಲ್ಲು, ಬೈಪಾಸ್ ಜಂಕ್ಷನ್, ಆನೆಕೆರೆ, ಬಂಡಿಮಠ, ತಾಲೂಕು ಕಚೇರಿ ಮೊದಲಾದೆಡೆಯಿರುವ ಸುಮಾರು 40 ಬೀದಿನಾಯಿಗಳಿಗೆ ಹಬ್ಬದೂಟವೆಂಬಂತೆ ಆಹಾರ ದೊರೆಯುತ್ತಿದೆ.
ಸಂಜೆ 7ರಿಂದ ಪ್ರಾರಂಭ
ಪ್ರತಿದಿನ ಸಂಜೆ 7ಗಂಟೆಗೆ ತನ್ನ ಕಾರಿನಲ್ಲಿ ಆಹಾರ ತುಂಬಿಸಿಕೊಂಡು ಪ್ರಜ್ವಲ್ ನಗರದತ್ತ ಧಾವಿಸುತ್ತಾರೆ. ಎಲ್ಲ ನಾಯಿಗಳಿಗೂ ಆಹಾರ ಹಂಚಿ ವಾಪಸ್ ಮನೆಗೆ ತೆರಳುವಾಗ ರಾತ್ರಿ 9:30 ಯಾಗುತ್ತಿದೆ.
ಕಾರ್ಕಳ ಸ್ವಚ್ಛ ಬ್ರಿಗೇಡ್‌ನ ಸಕ್ರಿಯ ಸದಸ್ಯನಾಗಿರುವ ಪ್ರಜ್ವಲ್ ಅವರು ನಾಯಿಗಳಿಗೆ ಆಹಾರ ನೀಡುವುದು ಮಾತ್ರವಲ್ಲದೇ ಅನಾರೋಗ್ಯ ಪೀಡಿತ ನಾಯಿಗಳ ಆರೈಕೆಯನ್ನೂ ಮಾಡುತ್ತಿದಾರೆ. ಪ್ರಾಣಿ ಪೇಮಿಯಾದ ಇವರು ಬೀದಿನಾಯಿಗಳನ್ನು ಅತ್ಯಂತ ಪ್ರೀತಿಯಿಂದ ಕಂಡು ಉಪಚರಿಸುತ್ತಿದ್ದು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬೀದಿನಾಯಿಗಳು ಹಸಿವಿನಿಂದ ಬಳಲುತ್ತಿರುವುದನ್ನು ಕಂಡು ಪ್ರತಿದಿನ ಆಹಾರ ನೀಡುತ್ತಿದ್ದೇನೆ. ಸುಮಾರು 40 ಹಸಿದ ನಾಯಿಗಳಿಗೆ ಆಹಾರ ನೀಡುತ್ತಿರುವುದು ನನಗೆ ಅತ್ಯಂತ ತೃಪ್ತಿಕರ ವಿಚಾರ. ಕಾರ್ಕಳ ಸ್ವತ್ಛ ಬ್ರಿಗೇಡ್ ಹಾಗೂ ಸೇವಾ ಭಾರತಿ ತಂಡದ ಸದಸ್ಯರೂ ಒಮ್ಮೊಮ್ಮೆ ಆಹಾರ ನೀಡುವಲ್ಲಿ ಸಹಕರಿಸಿದ್ದಾರೆ.
– ಪ್ರಜ್ವಲ್ ಕಾರ್ಕಳ