Advertisement

ಋತುವಿಗೆ ತಕ್ಕ ಆಹಾರ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪರಿಹಾರ

03:43 AM May 17, 2021 | Team Udayavani |

ಮಾನವನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಆಹಾರ ಬಹುಮುಖ್ಯ. ಋತುವಿಗೆ ತಕ್ಕಂತೆ ಹಿತಮಿತ ಸಮತೋಲಿತ ಆಹಾರ ದೇಹದ ರಕ್ಷಣೆ, ಪೋಷಣೆಯನ್ನು ಮಾಡುತ್ತದೆ ಮಾತ್ರವಲ್ಲ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆಯುರ್ವೇದದಲ್ಲಿ ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರದ್‌, ಹೇಮಂತ್‌ ಎಂದು ಆರು ಋತುಗಳನ್ನು ಉಲ್ಲೇಖೀಸಿದ್ದರೂ ಸಾಮಾನ್ಯವಾಗಿ ಬೇಸಗೆ, ಮಳೆ, ಚಳಿಗಾಲವೆಂದು ಮೂರು ಕಾಲಗಳ ಅನುಸರಣೆ ಮಾಡಿಕೊಂಡು ಅದಕ್ಕೆ ತಕ್ಕುದಾದ ಅಂದರೆ ಶೀತ, ಉಷ್ಣ, ದ್ರವ, ಸ್ಥಿಗ್ಧ ಆಹಾರ ಕ್ರಮಗಳನ್ನು ಪಾಲಿಸಿಕೊಂಡು ಹೋಗುವುದು ಒಳ್ಳೆಯದು.

Advertisement

ಬೇಸಗೆಕಾಲ
ಬೇಸಗೆಯಲ್ಲಿ ದೇಹವನ್ನು ತಂಪಾಗಿರಿಸುವುದು ಅತ್ಯಗತ್ಯ. ಜತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸಬೇಕಾಗುತ್ತದೆ. ಹೀಗಾಗಿ ಶೀತ ಗುಣವಿರುವ ಆಹಾರಗಳ ಬಳಕೆ ಮಾಡುವುದು ಒಳ್ಳೆಯದು. ದೇಹ ನಿರ್ಜಲೀಕರಣವಾಗದಂತೆ ತಡೆಯಲು ಯತೇತ್ಛ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಕಟು ರಸಗಳು ಅಂದರೆ ಖಾರ ಪದಾರ್ಥಗಳ ಜತೆಗೆ ಎಣ್ಣೆ, ಮಸಾಲೆಯುಕ್ತ ಆಹಾರಗಳ ಸೇವನೆ ಕಡಿಮೆ ಮಾಡುವುದು ಉತ್ತಮ. ಲವಣ, ಆಮ್ಲ ಸೇವನೆಯಲ್ಲಿ ನಿಯಂತ್ರಣವಿರಲಿ.

ಬೇಸಗೆಯಲ್ಲಿ ಮಧುರ ರಸಗಳು ಅಂದರೆ ಸಿಹಿ ಗುಣವಿರುವ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ ಶೀತಲ ದ್ರವ್ಯಗಳು ಅಂದರೆ ನೀರಿನಾಂಶ ಅಧಿಕವಾಗಿರುವ ಆಹಾರ ಪದಾರ್ಥ, ಧಾನ್ಯಗಳು, ಮಾಂಸದಲ್ಲಿ ಕೋಳಿ ಮಾಂಸ ಸೇವನೆ ಮಾಡಬಹುದು. ಜತೆಗೆ ದಿನಕ್ಕೆ ಒಂದು ಬಾರಿಯಾದರೂ ಹಾಲಿನ ಸೇವನೆ ಮಾಡಬೇಕು. ಇದರಿಂದ ಜೀರ್ಣಶಕ್ತಿ ಸುಸ್ಥಿರವಾಗಿರುತ್ತದೆ. ಅಲ್ಲದೆ ಕಲ್ಲಂಗಡಿ, ಸೌತೆಕಾಯಿ, ಮೊಸರು, ಎಳನೀರು, ಪುದೀನಾ, ಹಸುರು ಸೊಪ್ಪು ತರಕಾರಿಗಳು, ಈರುಳ್ಳಿ, ಕಬೂìಜಾ, ನಿಂಬೆ ಹಣ್ಣಿನ ಸೇವನೆಗೆ ಆದ್ಯತೆ ನೀಡಲಾಗುತ್ತದೆ. ಇವು ದೇಹದಲ್ಲಿ ನೀರಿನಾಂಶವನ್ನು ಕಾಪಾಡುವುದರ ಜತೆಗೆ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ. ಹಲವಾರು ರೀತಿಯ ಸಾಂಕ್ರಾಮಿಕಗಳಿಂದ ರಕ್ಷಣೆಯನ್ನೂ ಕೊಡುತ್ತದೆ.

ಮಳೆಗಾಲ
ಮಳೆಗಾಲವೆಂದರೆ ಹಲವು ಕ್ರಿಮಿಕೀಟಗಳು, ಬ್ಯಾಕ್ಟೀರಿಯಾಗಳು, ಸೂûಾ$¾ಣು ಜೀವಿಗಳು ವೃದ್ಧಿಯಾಗುವ ಸಮಯ. ಈ ಸಂದರ್ಭದಲ್ಲಿ ಹಲವು ರೀತಿಯ ಕಾಯಿಲೆಗಳು ಬಾಧಿಸುತ್ತವೆ. ಇದಕ್ಕಾಗಿ ಪ್ರಕೃತಿಯಲ್ಲೇ ಸಿಗುವಂತಹ ಹಲವು ರೀತಿಯ ಆಹಾರಗಳನ್ನು ಬಳಸಿಕೊಂಡು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಮಳೆಗಾಲದಲ್ಲಿ ದೇಹದಲ್ಲಿ ಅಗ್ನಿ ಕಡಿಮೆಯಾಗಿ ವಾತ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಳೆಗಾಲದಲ್ಲಿ ಉಷ್ಣೋದಕ ಆಹಾರ ಸೇವನೆಗೆ ಪ್ರಾಶಸ್ತ್ಯ ನೀಡಲಾಗಿದೆ. ಧಾನ್ಯಗಳು, ಜೇನುತುಪ್ಪವನ್ನು ಆಹಾರದಲ್ಲಿ ಬಳಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಆರೋಗ್ಯದ ದೃಷ್ಟಿಯಿಂದ ಲಘು ಆಹಾರ ಸೇವನೆ ಒಳ್ಳೆಯದು. ಹೊರಗೆ ಬಿಸಿಲಿದೆ ಎಂದು ಹೆಚ್ಚು ಹೊತ್ತು ಬಿಸಿಲಲ್ಲಿರುವುದು ಸರಿಯಲ್ಲ.

ಹಸುರು ಸೊಪ್ಪು, ತರಕಾರಿ ಮಿಶ್ರಿತ ಬಿಸಿ ಸೂಪ್‌ ಸೇವನೆಯಿಂದ ಅಜೀರ್ಣ, ಹೊಟ್ಟೆಯ ಸೋಂಕನ್ನು ತಡೆಗಟ್ಟಬಹುದು. ಇದರಲ್ಲಿ ಬೆಳ್ಳುಳ್ಳಿ, ಕರಿಮೆಣಸು, ಬೆಣ್ಣೆ ಸೇರಿಸಿದರೆ ದೇಹಕ್ಕೆ ಶಕ್ತಿ ದೊರೆಯುವುದು ಮಾತ್ರವಲ್ಲ ಶೀತ, ಕೆಮ್ಮು, ಕಫ‌, ಗಂಟಲಿನ ಅಲರ್ಜಿಯನ್ನೂ ತಡೆಯಬಹುದು. ಮಳೆಗಾಲದಲ್ಲಿ ಚಹಾ, ಕಾಫಿ ಸೇವಿಸುವ ಬಯಕೆ ಎಲ್ಲರಲ್ಲೂ ತುಸು ಹೆಚ್ಚಾಗಿರುತ್ತದೆ. ಇಂಥ ಸಂದರ್ಭದಲ್ಲಿ ಏಲಕ್ಕಿ, ದಾಲಿcನಿ, ಶುಂಠಿ, ತುಳಸಿ ಎಲೆ ಹಾಕಿ ಚಹಾ ತಯಾರಿಸಿದರೆ ಅದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮಾತ್ರವಲ್ಲದೆ ಸೋಂಕುಗಳಿಂದ ರಕ್ಷಣೆಯನ್ನೂ ಒದಗಿಸುತ್ತದೆ.

Advertisement

ವಿಟವಿನ್‌ ಸಿ ಸಮೃದ್ಧವಾಗಿರುವ ಕ್ಯಾಪ್ಸಿಕಂ, ಪಪ್ಪಾಯ, ನಿಂಬೆ, ಟೊಮೆಟೋ ಬಳಸುವುದು ಉತ್ತಮ. ಆದಷ್ಟು ಮನೆಯಲ್ಲೇ ಆಹಾರ ತಯಾರಿಸುವುದು ಒಳ್ಳೆಯದು. ಅರಿಸಿನ, ಕಾಳುಮೆಣಸು, ಶುಂಠಿ, ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬಳಸಬೇಕು. ಮಳೆಗಾಲವೆಂದ ಮಾತ್ರಕ್ಕೆ ನೀರಿನ ಸೇವನೆ ಅಗತ್ಯವಿಲ್ಲ ಎಂದಿರಬಾರದು. ದೇಹಕ್ಕೆ ಬೇಕಾದಷ್ಟು ನೀರು ಸೇವನೆ ಅತೀ ಅಗತ್ಯ.

ಚಳಿಗಾಲ
ಮಳೆಗಾಲ ಮತ್ತು ಚಳಿಗಾಲದಲ್ಲಿ ಕಫ‌ಕ್ಕೆ ಕಾರಣವಾಗುವ ಆಹಾರಗಳನ್ನು ವರ್ಜಿಸುವುದರ ಜತೆಗೆ ಮಧ್ಯಾಹ್ನ ಮಲಗುವುದನ್ನೂ ತಪ್ಪಿಸುವುದು ಉತ್ತಮ. ಈ ಸಂದರ್ಭದಲ್ಲಿ ಸಿಹಿ, ಆಮ್ಲ ಪದಾರ್ಥಗಳ ಸೇವನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಗೋಧಿ, ಕಬ್ಬು, ಎಳ್ಳು, ಉದ್ದು ಮೊದಲಾದವುಗಳನ್ನು ಆಹಾರದಲ್ಲಿ ಬಳಸುವುದರಿಂದ ದೇಹದಲ್ಲಿ ಬಲವರ್ಧನೆಯಾಗುವುದು. ಇದರೊಂದಿಗೆ ಸೀಫ‌ುಡ್‌, ಮಟನ್‌ಗಳನ್ನೂ ಸೇವಿಸಬಹುದು. ಜತೆಗೆ ಕ್ಯಾಬೇಜ್‌, ಶುಂಠಿ, ಈರುಳ್ಳಿ, ಖರ್ಜೂರ, ಹೂಕೋಸ್‌ ಸೇವನೆ ಅತ್ಯತ್ತಮ. ಚಳಿಗಾಲದಲ್ಲಿ ಮೊಳಕೆ ಭರಿಸಿದ ಕಾಳುಗಳನ್ನು, ಮೆಣಸು, ಬದನೆ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ. ಜತೆಗೆ ದಿನದಲ್ಲಿ ಸ್ವಲ್ಪ ಹೊತ್ತು ಬಿಸಿಲಲ್ಲಿ ಇರುವುದು, ಖಾರ, ಕಷಾಯ ಪ್ರಧಾನ ಆಹಾರಗಳ ಸೇವನೆ ಕಡಿಮೆ ಮಾಡುವುದು ಒಳ್ಳೆಯದು.

ನಮ್ಮ ದಿನಚರಿಯನ್ನು ಅಸ್ತವ್ಯಸ್ತ ಮಾಡುವ ಚಳಿಗಾಲದಲ್ಲಿ ಆಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯ ಅಗತ್ಯವಿರುತ್ತದೆ. ಹೀಗಾಗಿ ದೇಹ ಮತ್ತು ಮನಸ್ಸನ್ನು ಲವಲವಿಕೆಯಿಂದ ಇಡಲು ಪೂರಕವಾಗುವ ಆಹಾರ ಸೇವನೆ ಮಾಡಬೇಕು.
ಅತ್ಯಧಿಕ ಪೋಷಕಾಂಶಗಳು ಮತ್ತು ಕಬ್ಬಿಣ, ಫೋಲಿಕ್‌ ಆಮ್ಲಗಳನ್ನು ಹೊಂದಿರುವ ಮೆಂತೆ ಸೊಪ್ಪಿನ ಸೇವನೆ ಚಳಿಗಾಲದಲ್ಲಿ ಅತ್ಯುತ್ತಮ. ಅಲ್ಲದೇ ದೇಹದ ಉಷ್ಣಾಂಶವನ್ನು ಇದು ಕಾಪಾಡುತ್ತದೆ. ವಿಟಮಿನ್‌ ಎ ಸಹಿತ ಹಲವಾರು ಆ್ಯಂಟಿ ಆ್ಯಕ್ಸಿಡೆಂಟ್‌ಗಳನ್ನು ಹೊಂದಿರುವ ಕ್ಯಾರೆಟ್‌ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬಹುಮುಖ್ಯ ಪದಾರ್ಥ. ಇದು ಶೀತ, ನೆಗಡಿಯಂಥ ವೈರಲ್‌ನಿಂದ ದೇಹಕ್ಕೆ ರಕ್ಷಣೆಯನ್ನು ಕೊಡುತ್ತದೆ. ಸಿಟ್ರಿಕ್‌ ಹಣ್ಣುಗಳ ಸೇವನೆಯು ವೈರಲ್‌ನಿಂದ ದೇಹಕ್ಕೆ ರಕ್ಷಣೆಯನ್ನು ಕೊಡುತ್ತದೆ. ಇದರೊಂದಿಗೆ ಒಣ ಫ‌ಲಗಳನ್ನು ಸೇವಿಸಬೇಕು. ಜತೆಗೆ ಹೆಚ್ಚು ನೀರಿನ ಸೇವನೆಯೂ ಅತೀ ಆವಶ್ಯಕ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಋತುಚರ್ಯೆ, ದಿನಚರ್ಯೆ ಆಯುರ್ವೇದ ಆಹಾರ ಪದ್ಧತಿಯಲ್ಲಿ ಬಹುಮುಖ್ಯವಾಗಿರುತ್ತದೆ. ಹವಮಾನದಲ್ಲಾಗುವ ಬದಲಾವಣೆ ದೇಹದ ಮೇಲೂ ಪರಿಣಾಮ ಬೀರುತ್ತದೆ. ಅಂದರೆ ವಸಂತ ಕಾಲದಲ್ಲಿ ಕಫ‌ ಹೆಚ್ಚಾಗುತ್ತದೆ. ಹೀಗಾಗಿ ಈ ವೇಳೆ ತಣ್ಣನೆಯ ಆಹಾರವನ್ನು ಸೇವಿಸಬಾರದು ಜತೆಗೆ ತಣ್ಣೀರು ಸ್ನಾನವನ್ನೂ ಮಾಡಬಾರದು. ಅದೇ ರೀತಿ ಚಳಿಗಾಲದಲ್ಲಿ ಉಷ್ಣ ಆಹಾರ ಸೇವನೆ ಸೂಕ್ತವಾಗಿರುತ್ತದೆ. ಆದ್ದರಿಂದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಆಯುರ್ವೇದದಲ್ಲಿ ಸೂಚಿಸಿರುವ ಕೆಲವೊಂದು ಅಂಶಗಳನ್ನು ಪಾಲಿಸಬೇಕು. ರೋಗನಿರೋಧಕ ಶಕ್ತಿ ಎನ್ನುವುದು ಕೇವಲ ಆಹಾರ, ವ್ಯಾಯಾಮದಿಂದ ಸಿಗುವಂಥದ್ದಲ್ಲ. ಅದು ನಮ್ಮ ಮನಸ್ಸಿನ ಭಾವನೆಗಳಿಂದಲೂ ದೊರೆಯುತ್ತದೆ. ಒಂದು ನಕಾರಾತ್ಮಕ ಭಾವನೆ ನಮ್ಮಲ್ಲಿರುವ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣವಾಗಿ ಕಡಿಮೆಗೊಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಹೀಗಾಗಿ ಮನಸ್ಸು, ದೇಹ ಎರಡೂ ಶುದ್ಧವಾಗಿರಿಸಿಕೊಳ್ಳುವುದು ಅತ್ಯಗತ್ಯ.

– ಡಾ| ರಾಘವೇಂದ್ರ ಪ್ರಸಾದ್‌ ಬಂಗಾರಡ್ಕ,

Advertisement

Udayavani is now on Telegram. Click here to join our channel and stay updated with the latest news.

Next