Advertisement

ಆರೋಗ್ಯಕರ ಬದುಕಿಗೆ ಆಹಾರ ಪ್ರಜ್ಞೆ ಅತ್ಯವಶ್ಯ

01:20 AM May 29, 2021 | Team Udayavani |

ಔಷಧ ಬಳಕೆಯಲ್ಲಿನ ಅರಿವಿನ ಕೊರತೆಯೂ ದೀರ್ಘ‌ಕಾಲೀನ ಆರೋಗ್ಯ ಪಾಲನೆ ದೃಷ್ಟಿಯಲ್ಲಿನ ಸವಾಲುಗಳಲ್ಲೊಂದು. ಮಾತ್ರೆ-ಔಷಧದ ರೂಪದಲ್ಲಿ ಪಡೆಯಬೇಕಾದ ನಿಗದಿತ ಪ್ರಮಾಣದ ರಾಸಾಯನಿಕಗಳನ್ನು ಎಚ್ಚರಿಕೆ ತಪ್ಪಿ ಬಳಸಿದಲ್ಲಿ ಪ್ರಮಾಣ ಹೆಚ್ಚಾಗಿ ಅಡ್ಡಪರಿಣಾಮ ಬೀರುತ್ತ ಭವಿಷ್ಯದಲ್ಲಿ ಆರೋಗ್ಯ ಹದಗೆಡಲು ಒಂದು ಕಾರಣವಾಗಿಬಿಡುತ್ತದೆ. ಮೂಲಭೂತ ಹಕ್ಕಾಗಿ ದಕ್ಕಬೇಕಿದ್ದ ಆರೋಗ್ಯ ವ್ಯವಸ್ಥೆಯು ವ್ಯಾಪಾರೀಕರಣಗೊಂಡು, ಮಾಫಿಯಾ ಆಗಿ ಬದಲಾದ ಮೇಲೆ ಅನಾವಶ್ಯಕ ಪರೀಕ್ಷೆ- ಔಷಧೋಪಾಚಾರಗಳಿಗೆ ಬಡಪಾಯಿಗಳನ್ನು ತಳ್ಳುವ ಪರಿಪಾಠವೂ ಹೆಚ್ಚಿದೆ. ಮಾತ್ರೆಗಳನ್ನು ಉಪಾಹಾರದಂತೆ, ಉಪಾಹಾರವನ್ನು ಮಾತ್ರೆಗಳಂತೆ ಸೇವಿಸುತ್ತಿರುವ ವಿಚಿತ್ರ ಕಾಲಘಟ್ಟವಿದು.

Advertisement

ಹೌದು, ಮೇಲ್ನೋಟಕ್ಕೆ ದೇಹವು ಮೂಳೆಮಾಂಸದ ತಡಿಕೆಯೆನಿಸಿದರೂ ದೇಹರಚನೆಯನ್ನು ಸೂಕ್ಷ್ಮ ವಾಗಿ ಗ್ರಹಿಸಿದರೆ ತಿಳಿಯುವುದು, ಅದು ಇಟ್ಟಿಗೆ ಯಂತೆ ಬಹುಕೋಟಿ ಕೋಶಗಳಿಂದ ಕಟ್ಟಲ್ಪಟ್ಟ ಒಂದು ಕ್ರಮಬದ್ಧ ನಿರ್ಮಿತಿ, ಜತೆಗದು ಸುಂದರವೂ ಸಂಕೀರ್ಣವೂ ಆದ ಅದ್ಭುತ ಕಲಾಕೃತಿ. ಮಾತ್ರವಲ್ಲ ಜೀವ ರಾಸಾಯನಿಕ ಕ್ರಿಯೆಯಲ್ಲಿ ಒಂದಕ್ಕೊಂದು ಪೂರಕವಾಗಿ, ಪ್ರೇರಕವಾಗಿ ಒದಗಬಲ್ಲ ಕೋಶಗಳು ಮತ್ತು ಅಸಂಖ್ಯ ಸೂಕ್ಷ್ಮಜೀವಾಣುಗಳನ್ನು ಒಳ ಗೊಂಡಿರುವ ಒಂದು ಆಂತರಿಕ ಪ್ರಕೃತಿ.

ನಮ್ಮ ದೇಹದ ಜೀವಕೋಶಗಳು, ಅವುಗಳ ರಚನೆ, ಮೂಲ ಮತ್ತು ನಿರ್ವಹಿಸುವ ಕೆಲಸಗಳ ಭಿನ್ನತೆಯಾಧಾರದಲ್ಲಿ ವಿವಿಧ ಅಂಗಾಂಶ, ಅಂಗ, ಅಂಗವ್ಯೂಹಗಳಿವೆ. ದೇಹದೊಳಗೆ ಸಾವಿರಕ್ಕೂ ಅಧಿಕ ಬ್ಯಾಕ್ಟೀರಿಯಾ ಪ್ರಭೇದಗಳನ್ನೊಳಗೊಂಡ ಕೊಟ್ಯಂತರ ಸೂಕ್ಷ್ಮಜೀವಿಗಳ ಆವಾಸವೂ ಇದೆ. ಇಲ್ಲಿ ಪ್ರತಿಯೊಂದು ಕೋಶಗಳೂ ಕೂಡ ತಂತಮ್ಮ ಹೊಣೆಗಾರಿಕೆಯ ಸ್ಪಷ್ಟತೆಯಿರುವ, ಸಂವೇದನಾಶೀಲ ರಚನೆಗಳಾಗಿದ್ದು, ಅವುಗಳು ಪೋಷಕಾಂಶ, ವ್ಯಾಯಾಮ, ವಿಶ್ರಾಂತಿಗಳನ್ನು ನಿರೀಕ್ಷಿಸುತ್ತವೆ. ದೇಹದ ಪ್ರಾತಿನಿಧಿಕ ಘಟಕಗಳಾದ ಜೀವಕೋಶಗಳು ಸೂಕ್ತ ಮತ್ತು ನಿಯಮಿತವಾದ ಪ್ರಚೋದನೆಗೆ ಒಳಪಡುತ್ತಿದ್ದಲ್ಲಿ ಮಾತ್ರ ನಾವು ನಿತ್ಯದ ಬದುಕಲ್ಲಿ ಉಲ್ಲಸಿತರಾಗಿ, ಜೀವಂತಿಕೆಯಿಂದ ತೊಡಗಿಸಿ ಕೊಳ್ಳುವುದು ಸಾಧ್ಯ. ಆಂತರಿಕ ಪರಿಸರವನ್ನು ಸುಸ್ಥಿತಿ ಯಲ್ಲಿರಿಸದ ಹೊರತು ನಾವು ಬಾಹ್ಯ ಪರಿಸರವನ್ನು ನಿಯಂತ್ರಿಸಲು ಸಾಧ್ಯವಾಗದು.

ಇಂದಿನ ಆಧುನಿಕ ಕಾಲಘಟ್ಟದ ಧಾವಂತದ ಬದುಕು ನಮಗೆಲ್ಲ ಅಪರಿಮಿತ ಮಾನಸಿಕ ಒತ್ತಡ ವನ್ನು ತಂದೊಡ್ಡಿರುವುದು ಸತ್ಯ. ಇದು ವಯೋ ಮಾನ‌ದ ಭೇದವಿರದೇ ಪ್ರತಿಯೊಬ್ಬರೂ ಅತೀವ ಪ್ರಕ್ಷೋಭೆಗಳ ಜೇಡರಬಲೆಯ ಸಿಕ್ಕುಗಳಲ್ಲಿ ಸಿಕ್ಕಿ ತೊಳಲಾಡುವ ಸಂದರ್ಭವೂ ಹೌದು. ಎಳೆಯರಲ್ಲಿ, ವರ್ಷ ಮೂರು ತುಂಬುವ ಮೊದಲೇ ಕಂಡು ಕೇಳಿರದ ಭಾಷೆ-ಬರವಣಿಗೆಯನ್ನೂ ಅವೈಜ್ಞಾನಿಕ ಕಲಿಕಾ ಮಾದರಿ ಮತ್ತು ಮಾಧ್ಯಮವನ್ನು ಹೇರಿರುವ ಕಾರಣ ಹಸುಗೂಸುಗಳ‌ಲ್ಲೊಂದು ಅನಾರೋಗ್ಯಕರ ಒತ್ತಡ, ಸ್ಪರ್ಧೆ ಇರುತ್ತದೆ. ಗೃಹಿಣಿಯರು, ರೈತರು, ಕೂಲಿಕಾರ್ಮಿಕರು, ಕಚೇರಿ-ಕಾರ್ಖಾನೆಗಳ ಉದ್ಯೋಗಸ್ಥರೆಲ್ಲರೂ ಈಗ ಸದಾ ಉದ್ವಿಗ್ನಮಯ ಪರಿಸ್ಥಿತಿಯನ್ನು ಎದುರಿಸಬೇಕಿದೆ. ಮನೆಯಲ್ಲಿನ ಹಿರಿಯರೂ ತಮ್ಮ ಆರೋಗ್ಯ-ಆಯುಷ್ಯದ ಕುರಿತು ಹಿಂದೆಂದಿಗಿಂತಲೂ ಹೆಚ್ಚು ಚಿಂತಿತರಾಗಿದ್ದಾರೆ. ಮನೆ ಮಂದಿಯೆಲ್ಲರಿಗೂ ಈಗ ಹತ್ತಾರು ಬೇಕು- ಬೇಡಿಕೆ ಗಳಿಗೆ ಒಟ್ಟೊಟ್ಟಿಗೆ ಓಗೊಡಬೇಕಾದ ತುರ್ತಿದೆ. ಮನ ಸಿನೊಟ್ಟಿಗೆ ದೇಹವೂ ಸ್ಪಂದಿಸಲೇ ಬೇಕಿದೆ ಮತ್ತು ಆಹಾರಭ್ಯಾಸವೇ ದೇಹವನ್ನೀಗ ಕಾಯಬೇಕಿದೆ.

ನಮ್ಮೆಲ್ಲರ ಆರೋಗ್ಯ, ಅಭ್ಯುದಯ ಮತ್ತು ಕ್ರಿಯಾಶೀಲತೆಗೆ ಶಕ್ತಿ ಹಾಗು ಸತ್ವಗಳು ಒದಗುವುದು ನಾವು ತಿನ್ನುವ ಆಹಾರ, ಮಾಡುವ ಆಲೋಚನೆ, ಮೂಡುವ ಚಿಂತನೆಗಳಲ್ಲಿ. ಟಿವಿ-ಮೊಬೈಲ್‌ಗ‌ಳೆಂಬ ಬಲಶಾಲಿ ಬಾಹ್ಯಪ್ರಚೋದಕಗಳನ್ನು ಹದ್ದುಬಸ್ತಿನಲ್ಲಿ ರಿಸಿದರೆ ಕ್ಷೇಮ. ಅರಿವಿನ ಜಗತ್ತನ್ನು ವಿಸ್ತರಿಸಬಲ್ಲ ಯೋಗ್ಯ ಪುಸ್ತಕಗಳು, ಒಳಗಿನ ಕತ್ತಲನ್ನು ಕಳೆಯಲು ನೆರವಾಗಬಲ್ಲವರ ಸಂಗವೂ ಜತೆಗೂಡಿದಲ್ಲಿ ಅಂತಃಸತ್ವವೂ ವೃದ್ಧಿಗೊಳ್ಳುತ್ತದೆ. ಬಹುಮುಖ್ಯವಾಗಿ ಆಹಾರವು ಒಳಗೊಂಡಿರಬೇಕಾದ್ದು ದೇಹದ, ರಚನೆ, ಶಕ್ತಿ ಉತ್ಪಾದನೆ, ರಕ್ಷಣೆ ಮತ್ತು ಜೈವಿಕ ನಿಯಂತ್ರಕ ಗಳನ್ನು ಪೂರೈಸಬಲ್ಲ ಪೋಷಕಾಂಶಗಳನ್ನು. ಆದರೆ ನಾವೀಗ ನಾಲಗೆ ಚಪಲಕ್ಕಾಗಿ ತಿನ್ನುತ್ತಿರುವ ಅದೆಷ್ಟೋ ಆಹಾರ ಪದಾರ್ಥಗಳು ದೇಹವನ್ನು ಘಾಸಿಗೊಳಿಸು ವಂತಹ ವಿಷಕಾರಿಗಳು. “ಅದರಕ್ಕೆ ಸಿಹಿಯಾದ್ದು ಉದರಕ್ಕೆ ಕಹಿ’ ಎಂಬ ವೈರುಧ್ಯವಿದೆ ಸ್ವತಃ ನಮ್ಮೊಳಗೆ.
ನಾವು ಏನನ್ನಾದರೂ ತಿನ್ನುವ ಮುನ್ನವಾಗಲೀ ಅನಂತರವಾಗಲೀ ನಮ್ಮ ಆಹಾರಕ್ರಮದ ಕುರಿತು ಯೋಚಿಸುವವರಲ್ಲ. ತಿಂದು ಸುಮ್ಮನಾಗಿರುತ್ತೇವೆ. ಆದರೆ ತಿಂದಿದ್ದು ಒಳಸೇರಿದ ಮರುಕ್ಷಣವೇ ಅನ್ನನಾಳದೊಳಗೊಂದು ಸಂಚಲನ ಶುರು ವಾಗು ತ್ತದೆ. ಅನ್ನನಾಳದಂಚಿನಲ್ಲಿರುವ ಮತ್ತು ಸಂಬಂಧಿತ ಕೋಶಗಳು ಪ್ರಚೋದನೆಗೊಳಪಟ್ಟು ಸ್ರವಿಕೆ, ಹೀರಿಕೆ, ಸಂಗ್ರಹಣೆ, ಹೀರಿಕೆ, ವಿಸರ್ಜನೆಗಳಂತಹ ಕ್ರಿಯೆ ಗಳನ್ನು ಹಂತ ಹಂತವಾಗಿ ನೆರವೇರಿಸುತ್ತವೆ. ಅನ್ನನಾಳ ಸೇರಿದ ಆಹಾರದಲ್ಲಿನ ಪೌಷ್ಟಿಕಾಂಶದ ಕಣ ಕಣವೂ ವ್ಯರ್ಥ ಗೊಳ್ಳದಂತೆ ರಕ್ತಗತ ಮಾಡಿಕೊಳ್ಳಲು ಜೀರ್ಣಾಂಗವು ಸರ್ವಪ್ರಯತ್ನವನ್ನೂ ಮಾಡುತ್ತದೆ.

Advertisement

ಆದರೆ ಇತ್ತೀಚಿನ ಆತಂಕವೇನೆಂದರೆ ನಮ್ಮ ಮೆನೂವಿನಲ್ಲಿ ದೇಹಕ್ಕೆ ಅಗತ್ಯ ಪೋಷಕತ್ವಗಳ ಬದಲಾಗಿ ಹಾನಿಕಾರಕ ರಾಸಾಯನಿಕಗಳೇ ಹೆಚ್ಚೆಚ್ಚು ಸ್ಥಾನ ಪಡೆಯುತ್ತಿರುವುದು. ಪರಿಣಾಮ, ಅವು ಗಳನ್ನು ವಿಘಟಿಸಲು ಮತ್ತು ವಿಸರ್ಜಿಸಲು ನಾಳದ ಅಂಗಾಂಶ ಮತ್ತು ಗ್ರಂಥಿಗಳು ಹರಸಾಹಸವನ್ನೇ ಮಾಡಬೇಕಿರುತ್ತದೆ. ಕೆಲವೊಮ್ಮೆ ದೇಹದೊಳಗೆ ರಾಸಾಯನಿಕಗಳ ಪ್ರತಿಕ್ರಿಯೆಗಳಿಂದ ಮುಖ್ಯವಾಗಿ ಜೀರ್ಣನಾಳ, ಲಿವರ್‌ ಮತ್ತು ಕಿಡ್ನಿಗಳು ಹಾನಿಗೊಳ ಗಾಗಿ ಸಹಜ ಚಟುವಟಿಕೆ ನಡೆಸದಾಗುತ್ತವೆ.

ಹಾಗಾಗಿ ಮನುಷ್ಯನನ್ನು ಅನುವಂಶೀಯ ದೋಷ ಮತ್ತು ಬಾಹ್ಯ ರೋಗಾಣುಗಳಿಗಿಂತ ಹೆಚ್ಚು ಬಾಧಿಸುತ್ತಿರುವುದು ವಿಷಯುಕ್ತ ಆಹಾರ ಸೇವನೆಯ ಪರಿಣಾಮವೇ. ಆಹಾರೋತ್ಪಾದನೆಯ ವಿವಿಧ ಹಂತಗಳಾದ ಬೀಜ ಮೊಳೆಯುವ, ಗಿಡ ಬೆಳೆಯುವ, ಫ‌ಸಲು ಪಡೆಯುವ, ಸಂಸ್ಕರಣೆ, ಶೇಖರಣೆ, ಸಾಗಾಣಿಕೆ ಮತ್ತು ವಿತರಣ ಹಂತಗಳಲ್ಲೆ ಆಹಾರವು ವಿಷಮಯಗೊಳ್ಳುತ್ತಿದೆ. ಕಲಬೆರಕೆ ಯದ್ದು ದೊಡ್ಡ ಸಮಸ್ಯೆಯೇ. ಆರೋಗ್ಯವೇ ಭಾಗ್ಯವೆಂದು ಅರಿತ ಮೇಲೆ ಆಹಾರ ಮತು ಔಷಧ ಕ್ಕೆಂದು ನಾವೀಗ ದುಪ್ಪಟ್ಟು ವಿನಿಯೋಗಿಸಬೇಕಾಗಿದೆ. ಅತ್ಯಾಧುನಿಕ ಆಸ್ಪತ್ರೆ ಸೌಲಭ್ಯಗಳ ಹೊರತಾಗಿಯೂ ಸಾರ್ವಜನಿಕ ಆರೋಗ್ಯದ ಮಟ್ಟವೀಗ ಮೊದಲಿಗಿಂತ ಕುಸಿದಿದೆ. ಎಲ್ಲ ವಯೋಮಾನದವರನ್ನೂ ಈಗ ಒಂದಿಲ್ಲೊಂದು ಅನಾರೋಗ್ಯ ಕಾಡುತ್ತಿದೆ. ಕ್ಯಾನ್ಸರ್‌, ಜಾಂಡೀಸ್‌, ರಕ್ತದೊತ್ತಡ, ಮಧುಮೇಹಗಳಿಂದಾಗಿ ಜೀವನ ಹೈರಾಣಾಗಿದೆ.

1958ರ ಮೇ 29ರಂದು ಜೀರ್ಣಾಂಗದ ಮಹತ್ವ ವನ್ನು ಸಾರುವ ಸಲುವಾಗಿ ಪ್ರೊ| ಹೆನ್ರಿ ಕೋವೆನ್‌ ಮುಂದಾಳತ್ವದಲ್ಲಿ ನಡೆದ ಪ್ರಥಮ ವಿಶ್ವಮಟ್ಟದ ಗ್ಯಾಸ್ಟ್ರೋಎಂಟೆರಾಲಜಿ ಸಮಾವೇಶದ ಸ್ಮರಣಾರ್ಥ 2003ರಿಂದೀಚೆಗೆ ಪ್ರತೀ ವರ್ಷವೂ ಮೇ 29ರಂದು ಅಂತಾರಾಷ್ಟ್ರೀಯ ಜೀರ್ಣಾಂಗ ಆರೋಗ್ಯದ ದಿನ ವನ್ನಾಗಿ ಆಚರಿಸಲಾಗುತ್ತಿದೆ. “ಜೀರ್ಣನಾಳದ ಸೂûಾ¾ಣು ಪರಿಸರ’ ಈ ವರ್ಷದ ಘೋಷ ವಾಕ್ಯ.

ಮನುಷ್ಯನನ್ನು ಕಾಡುವ ರೋಗಗಳಲ್ಲಿ ಜೀರ್ಣಾಂಗ ಸಂಬಂಧೀ ರೋಗಗಳದ್ದೇ ಸಿಂಹ ಪಾಲು. ಜೀರ್ಣನಾಳವೀಗ ದೇಹಕ್ಕೆ ಬೇಡದ ತ್ಯಾಜ್ಯ ಮತ್ತು ಹಾನಿಕಾರಕ ರಾಸಾಯನಿಕಗಳನ್ನು ತುಂಬುವ ಕಸದ ತೊಟ್ಟಿಯಾಗಿ ಬಿಟ್ಟಿರುವುದೇ ಇದಕ್ಕೆ ಕಾರಣ. ದೇಹಕ್ಕೆ ಅವಶ್ಯವಾದ ಕೆಲವು ಗ್ರಾಂ ಪೌಷ್ಟಿಕ ಆಹಾರ ವ‌ನ್ನು ಸೇವಿಸಬೇಕಾದ ನಾವು ಮೂರು ಹೊತ್ತೂ ಕೆ.ಜಿ.ಗಟ್ಟಲೆ ಅನುಪಯುಕ್ತ ಮತ್ತು ಅಪಾಯಕಾರಿ ಪದಾರ್ಥಗಳನ್ನು ನಮ್ಮ ಜೀರ್ಣಾಂಗದೊಳಗೆ ತುಂಬುತ್ತಿರುತ್ತೇವೆ. ನಾವು ಕಡೇಪಕ್ಷ ಆರೋಗ್ಯಕರ ಬದುಕಿಗೊಂದು ಆಹಾರ ಪ್ರಜ್ಞೆ ಹೊಂದಬೇಕಾದ್ದು ಅತ್ಯವಶ್ಯ. ಹಾಗಾಗಿ ಜೀರ್ಣಾಂಗ ಸ್ವಾಸ್ಥ್ಯದ ನೆಪದಲ್ಲಿ ದೈಹಿಕ ಕ್ಷಮತೆ ಕಾಪಾಡುವುದು, ಅತಿಯಾದ ಧೂಮ ಪಾನ, ಮದ್ಯಸೇವನೆ ತಡೆಯುವುದು, ಮಾಂಸಾ ಹಾರ ಮಿತಿಗೊಳಿಸುವುದು, ಆಹಾರದಲ್ಲಿ ರಾಸಾ ಯನಿಕಗಳನ್ನು ನಿಯಂತ್ರಿಸಿ, ನಾರಿನಾಂಶವನ್ನು ಉತ್ತೇಜಿಸುವುದು ಮುಖ್ಯವಾಗಿದೆ. ಧಾವಂತದ ಬದುಕಿನ ಭಾಗವಾಗಿರುವ ಫಾಸ್ಟ್‌ಫ‌ುಡ್‌ ಮತ್ತು ಜಂಕ್‌ಫ‌ುಡ್‌ಗಳು ತತ್‌ಕ್ಷಣದ ಅಗತ್ಯಗಳನ್ನೂ ಬಾಯಿ ಚಪಲವನ್ನೂ ನೀಗುತ್ತವಾದರೂ ಹಾಗೆಯೇ ನಿಧಾನ ವಿಷವನ್ನೇ ಉಣ್ಣುತ್ತಿರುವ ಪರಿಣಾಮ ದೇಹ ನಂಜಾ ಗುತ್ತಿದೆ. ಕಾರ್ಪೋರೆಟ್‌ ಕಂಪೆನಿಗಳು ಹೊತ್ತು ತರುವ ಬಣ್ಣಬಣ್ಣದ ಜಾಹೀರಾತು ಮೋಡಿಗೆ ಬಲಿ ಬೀಳುವುದೆಲ್ಲ ಎಂದೋ ನಮ್ಮ ಖಯಾಲಿಯಾಗಿ ಹೋಗಿದೆ. ತಿನ್ನುವ ಪದಾರ್ಥಗಳ ಉತ್ಪಾದನೆ, ಸಂಸ್ಕರಣೆಯ ಹಂತದಲ್ಲಿ ಕಾಪಾಡಬೇಕಾದ ಶುಚಿತ್ವ ಮತ್ತು ಗುಣಮಟ್ಟದ ಬಗ್ಗೆಯೂ ನಾವ್ಯಾರೂ ತಲೆ ಕೆಡಿಸಿಕೊಳ್ಳುವವರಲ್ಲ. ಆಹಾರ ಇಲಾಖೆಗೂ ಗುಣ ಮಟ್ಟ ಪರೀಕ್ಷೆಯ ಜವಾಬ್ದಾರಿಗಳು ನೆನಪಿದ್ದಂತಿಲ್ಲ. ಹೊಟೇಲ್‌ಗ‌ಳು ಹೆಚ್ಚಿರುವ ಜಾಗದಲ್ಲಿ ಆಸ್ಪತ್ರೆಗಳೂ ಹೆಚ್ಚಿರುತ್ತವೆ. ಒಟ್ಟಾರೆ ಮನೆಯ ಹೊರಗಿನ ಆಹಾರ ವಲಂಬನೆ ಹೆಚ್ಚಿದಷ್ಟೂ ಆರೋಗ್ಯ ಹದಗೆಡುತ್ತಿರು ವುದಂತೂ ಸುಳ್ಳಲ್ಲ.

– ಸತೀಶ್‌ ಜಿ.ಕೆ., ತೀರ್ಥಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next