ನಾಯಕನಹಟ್ಟಿ: ಜಾತ್ರೆಯ ನಂತರ ಎರಡನೇ ದಿನವಾದ ಸೋಮವಾರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪೊಲೀಸ್ ಇಲಾಖೆ ವತಿಯಿಂದ ನೂರಾರು ಜನರಿಗೆ ದಾಸೋಹ ಆಯೋಜಿಸಲಾಗಿತ್ತು. ಜಾತ್ರೆಯ ದಿನ ಬಂದೋಬಸ್ತ್ ಒದಗಿಸಿದ್ದ ಪೊಲೀಸರು ಎರಡನೇ ದಿನ ದಾಸೋಹ ಏರ್ಪಡಿಸಿದ್ದು ವಿಶೇಷವಾಗಿತ್ತು.
ಜಾತ್ರೆಗೆ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದ 1500ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ಕಾರ್ಯಕ್ಕೆ ಆಗಮಿಸಿದ್ದರು. ಪೊಲೀಸ್ ಸಿಬ್ಬಂದಿಗೆ ಇಲಾಖೆಯ ವತಿಯಿಂದ ಊಟ, ತಿಂಡಿ ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಠಾಣೆಯ ಆವರಣದಲ್ಲಿ ಅಚ್ಚುಕಟ್ಟಾದ ಭೋಜನಾಲಯ ಸಿದ್ಧವಾಗಿತ್ತು.
15ಕ್ಕೂ ಹೆಚ್ಚು ಅಡುಗೆ ಸಿಬ್ಬಂದಿ ಅಡುಗೆ ಸಿದ್ಧಗೊಳಿಸುತ್ತಿದ್ದರು. ಬಂದೋಬಸ್ತ್ ಕಾರ್ಯದ ಪೊಲೀಸರಿಗೆ ಊಟ, ತಿಂಡಿ ಒದಗಿಸಿದ್ದರು. ಎರಡನೇ ದಿನವಾದ ಸೋಮವಾರ ಪೊಲೀಸ್ ಸಂಖ್ಯೆ ಕಡಿಮೆಯಿತ್ತು. ಸುತ್ತಲಿನ ಠಾಣೆ ಹಾಗೂ ಜಿಲ್ಲೆಯ ಪೊಲೀಸರು ಮಾತ್ರ ಕಾರ್ಯನಿರ್ವಹಿಸುತ್ತಿದ್ದರು. ಪಟ್ಟಣದ ಪೊಲೀಸ್ ಠಾಣೆಗೆ 15 ಪ್ರೊಬೇಷನರಿ ಪಿಎಸ್‌ಐಗಳನ್ನು ತರಬೇತಿಗೆ ನಿಯೋಜಿಸಲಾಗಿತ್ತು. ಜಾತ್ರೆಯ ಡ್ನೂಟಿಯ ಜತೆಗೆ 15 ಪ್ರೊಬೇಷನರಿ ಪಿಎಸ್‌ಐಗಳು ಭಕ್ತರಿಗೆ ಊಟ ಬಡಿಸಿದ್ದು ಗಮನ ಸೆಳೆಯಿತು.
ಎರಡನೇ ದಿನ ಜಾತ್ರೆಗೆ ಆಗಮಿಸಿದ ಭಕ್ತಾಧಿಗಳಿಗೆ ಪಾಯಸ, ಅನ್ನ ಸಾಂಬಾರ್. ಪಲ್ಯ ನೀಡಲಾಯಿತು. ಪಟ್ಟಣದ ಠಾಣೆಯ ಪಿಎಸ್‌ಐ ಮಹೇಶ್ ಲಕ್ಷ್ಮಣ ಹೊಸಪೇಟಿ, ಎಎಸ್‌ಐ ಗಳಾದ ನಾಗರಾಜ, ತಿಪ್ಪೇಸ್ವಾಮಿ, ಧನಂಜಯ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಊಟ ವಿತರಿಸಿದರು.
ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ಊಟ ಸವಿದರು. ಜಾತ್ರೆಗೆ ಬಂದ ಸಂದರ್ಭದಲ್ಲಿ ಹೋಟೆಲ್‌ಗಳು ದೊರೆಯುವುದು ಕಷ್ಟ. ಜತೆಗೆ ಬೆಲೆ ಹೆಚ್ಚು. ಜಾತ್ರೆಯಲ್ಲಿ ದೇವಾಲಯದ ದಾಸೋಹ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಜಾತ್ರೆಗೆ ಬಂದ ಭಕ್ತರು ಊಟ ಮಾಡಿ ದಾಸೋಹ ಒದಗಿಸಿದ ಪೊಲೀಸರಿಗೆ ವಂದನೆ ಸಲ್ಲಿಸಿದ್ದು ಕಂಡುಬಂತು.