Advertisement

Follow-up ಬಾಂಗ್ಲಾ; ಬಂಧಿತನ ತೀವ್ರ ವಿಚಾರಣೆ: ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಮಾಣಿಕ್‌

12:44 AM Oct 15, 2024 | Team Udayavani |

ಮಂಗಳೂರು: ನಕಲಿ ಪಾಸ್‌ಪೋರ್ಟ್‌ ಮೂಲಕ ದುಬಾೖಗೆ ತೆರಳಲು ಯತ್ನಿಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದು ಬಜಪೆ ಪೊಲೀಸರ ವಶದಲ್ಲಿರುವ ಬಾಂಗ್ಲಾ ಪ್ರಜೆ ಮೊಹಮ್ಮದ್‌ ಮಾಣಿಕ್‌ ಹುಸೇನ್‌ನ ವಿಚಾರಣೆ ತೀವ್ರವಾಗಿ ನಡೆಯುತ್ತಿದೆ. ಆದರೆ ಆತನಿಂದ ಹೆಚ್ಚಿನ ಮಾಹಿತಿಗಳು ಪೊಲೀಸರಿಗೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

Advertisement

ಮಾಣಿಕ್‌ನನ್ನು ಒಂದು ವಾರ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದ್ದು, ಆತನಿಂದ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ಆತ ಚೆನ್ನೈಯಿಂದ ಮಂಗಳೂರಿಗೆ ಬಂದಿರುವುದು, ಇಲ್ಲಿಂದ ಮೂಡುಬಿದಿರೆಗೆ ತೆರಳಿರುವುದು ಅಲ್ಲಿಂದ ಉಡುಪಿಗೆ ಹೋಗಿರುವುದು ಮುಂತಾದವುಗಳ ಕುರಿತೂ ಬಾಯಿ ಬಿಡಿಸಲಾಗುತ್ತಿದೆ. ಮುಖ್ಯವಾಗಿ ಕಮಿಷನರೆಟ್‌ ವ್ಯಾಪ್ತಿ ಅಥವಾ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಆತನ ಪರಿಚಯಸ್ಥ ಬಾಂಗ್ಲಾವಾಸಿಗಳು ಇದ್ದಾರೆಯೇ ಎನ್ನುವ ಬಗ್ಗೆ ವಿಚಾರಿಸಲಾಗುತ್ತಿದೆ. ಆ ಮೂಲಕ ಮಹತ್ವದ ಸುಳಿವು ಪಡೆಯುವ ಕೆಲಸವನ್ನೂ ಪೊಲೀಸರು ಮಾಡುತ್ತಿದ್ದಾರೆ.

ಕಸ್ಟಡಿ ಅವಧಿ ಇನ್ನೂ ನಾಲ್ಕು ದಿನಗಳು ಬಾಕಿ ಇರುವುದರಿಂದ ಆತನಿಂದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ವಿಚಾರಣೆ

ಈ ನಡುವೆ ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಬಿಹಾರ ರಾಜ್ಯದ ಆಧಾರ್‌ ಕಾರ್ಡ್‌ ಹೊಂದಿದ್ದ ಕೆಲವು ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಅವರ ದಾಖಲೆಗಳೆಲ್ಲ ಸರಿಯಾಗಿದ್ದುದರಿಂದ ಕೆಲವು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

Advertisement

ನಿತ್ಯ ನೂರಾರು ಮಂದಿ ಬಂದರೂ ತಪಾಸಣೆ ಇಲ್ಲ

ಮಂಗಳೂರು ನಗರ ವ್ಯಾಪ್ತಿಯ ಬಸ್ಸು, ರೈಲು ನಿಲ್ದಾಣಗಳಲ್ಲಿ ಪ್ರತಿ ನಿತ್ಯ ಲಗೇಜುಗಳು ಸಹಿತ ಸಾಕಷ್ಟು ಮಂದಿ ಹೊರರಾಜ್ಯದ ಕಾರ್ಮಿಕರು ಕಂಡುಬರುತ್ತಾರೆ. ಮಂಗಳೂರು ಜಂಕ್ಷನ್‌, ಸೆಂಟ್ರಲ್‌ ರೈಲು ನಿಲ್ದಾಣಗಳ ಮೂಲಕ ಬರುವ ಇವರು ಬಸ್ಸು ನಿಲ್ದಾಣಕ್ಕೆ ಬಂದು ಅಲ್ಲಿಂದ ವಿವಿಧ ಕಡೆಗಳಿಗೆ ತೆರಳುತ್ತಾರೆ. ಅವರು ಯಾರು, ಎಲ್ಲಿಂದ ಬಂದಿದ್ದಾರೆ, ಯಾಕೆ ಬಂದಿದ್ದಾರೆ? ಬ್ಯಾಗ್‌ಗಳಲ್ಲಿ ಏನಿದೆ? ಅವರನ್ನು ಕರೆಸಿಕೊಂಡಿರುವುದು ಯಾರು? ಎಂದು ವಿಚಾರಣೆ ನಡೆಸುವ ಕೆಲಸ ರೈಲು ನಿಲ್ದಾಣ ಅಥವಾ ಬಸ್ಸು ನಿಲ್ದಾಣದಲ್ಲಿ ಆಗುತ್ತಿಲ್ಲ.

ಚಾಲಕ – ನಿರ್ವಾಹಕರು ಗಮನ ಹರಿಸಬೇಕಿದೆ

ಹಿಂದಿ ಹೊರತಾಗಿ ಕೆಲವು ಸ್ಥಳೀಯ ಭಾಷೆಗಳನ್ನು ಇಂತಹವರು ಮಾತನಾಡುತ್ತಾರೆ. ಅದು ಯಾವ ಭಾಷೆ ಎಂದು ಇಲ್ಲಿನವರಿಗೆ ಅರ್ಥವಾಗುವುದಿಲ್ಲ. ಇಲ್ಲಿನ ಊರುಗಳ ಉಚ್ಚಾರವೂ ಸರಿಯಾಗಿ ಇರುವುದಿಲ್ಲ. ಹಾಗಾಗಿ ಬಸ್ಸು ಚಾಲಕ- ನಿರ್ವಾಹಕರು, ಆಟೋ ಚಾಲಕರು ಇಂಥವರ ಬಗ್ಗೆ ಹೆಚ್ಚಿನ ಗಮನ ಹರಿಸಿ ಪೊಲೀಸರಿಗೆ ಮಾಹಿತಿ ನೀಡುವುದರಿಂದ ಬಾಂಗ್ಲಾ ಅಥವಾ ಇತರ ದೇಶಗಳಿಂದ ಅಕ್ರಮವಾಗಿ ಬರುವವರ ಬಗ್ಗೆ ನಿಗಾ ವಹಿಸಲು ಸಾಧ್ಯ.

ಗದ್ದೆ-ತೋಟದ ಕೆಲಸಕ್ಕೂ ಹಿಂದಿಯವರು!

ಕೈಗಾರಿಕೆ, ಮೀನುಗಾರಿಕೆ ಮಾತ್ರವಲ್ಲದೆ ಗ್ರಾಮಾಂತರ ಭಾಗದಲ್ಲಿ ಗದ್ದೆ ತೋಟದ ಕೆಲಸದಲ್ಲೂ ಹಿಂದಿ ಮಾತನಾಡುವವರು ಕಂಡುಬರುತ್ತಿದ್ದಾರೆ. ಸ್ಥಳೀಯರು ಇಂತಹ ಕೆಲಸದಿಂದ ವಿಮುಖರಾಗಿರುವುದರಿಂದ ಹಿಂದಿ ಮಾತನಾಡುವವರು ಅಂತಹ ಕೆಲಸ ಮಾಡುತ್ತಿದ್ದಾರೆ. ಇವರು ಎಲ್ಲಿಯವರೆಂದು ಪರಿಶೀಲಿಸುವ ಕೆಲಸ ಆಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next