Advertisement

ಎಸ್ಸೆಸ್ಸೆಲ್ಸಿ ಕಡ್ಡಾಯ ತೇರ್ಗಡೆಗೆ ನಿಗಾವಹಿಸಿ

09:17 PM Feb 28, 2020 | Team Udayavani |

ಹುಣಸೂರು: ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲಾ ಮಕ್ಕಳು ತೇರ್ಗಡೆಯಾಗಲು ಹಾಗೂ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ ಇಟ್ಟು ಸೂಕ್ತ ತರಬೇತಿ ನೀಡಬೇಕು ಎಂದು ಶಿಕ್ಷಕರಿಗೆ ತಹಶೀಲ್ದಾರ್‌ ಬಸವರಾಜ್‌ ಸೂಚಿಸಿದರು.

Advertisement

ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫಲಿತಾಂಶ ಹೆಚ್ಚಳದ ಕುರಿತು ಶುಕ್ರವಾರ ಶಿಕ್ಷಕರ ಸಭೆ ನಡೆಸಿ, ವಿದ್ಯಾರ್ಥಿಗಳ ಪ್ರಗತಿ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಎಲ್ಲಾ ಸೌಲಭ್ಯಗಳುಳ್ಳ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಇದಾಗಿದ್ದು, ಇಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಲೇಬೇಕು. ಇದಕ್ಕಾಗಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ, ವಿಶೇಷ ಕ್ರಮಗಳನ್ನು ಅಳವಡಿಸಿಕೊಂಡು ಶೇ.100ರಷ್ಟು ಫಲಿತಾಂಶ ಪಡೆಯಬೇಕು ಎಂದು ಸಲಹೆ ನೀಡಿದರು.

ದತ್ತು ಪಡೆಯಿರಿ: ಕಲಿಕೆಯಲ್ಲಿ ಅತೀ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಬೇಕು. ಇಂತಹ ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕು. ಅವರನ್ನು ನಿಂದಿಸದೆ ಪ್ರೀತಿಯಿಂದ ಕಲಿಕೆಗೆ ಒಗ್ಗಿಕೊಳ್ಳುವಂತೆ ಪ್ರೇರೇಪಿಸಬೇಕು. ಉತ್ತಮ ಕಲಿಕೆಯ ಗುಂಪಿನವರೊಂದಿಗೆ ಸೇರಿಸಬೇಕು. ಅವರಿಗೆ ಜೀವನದ ಬಗ್ಗೆ ಹಾಗೂ ಪೋಷಕರು ಶ್ರಮದ ಬಗ್ಗೆ ತಿಳಿಸಿಕೊಡಬೇಕು, ಪ್ರತಿ ವಿಷಯವಾರು ಶಿಕ್ಷಕರು ಪ್ರಿಪರೇಟರಿಯ ಹಾಗೂ ಹಳೇ ಪ್ರಶ್ನೆ ಪತ್ರಿಕೆಯನ್ನು ಬಳಸಿಕೊಂಡು ಕನಿಷ್ಠ 40 ಅಂಕಗಳನ್ನು ಪಡೆದು ತೇರ್ಗಡೆ ಹೊಂದುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಬರವಣಿಗೆ, ಮನನ: ಇನ್ನು ಜ್ಞಾಪಕ ಶಕ್ತಿ ಕಡಿಮೆ ಇರುವ, ಅಕ್ಷರಜ್ಞಾನ, ವ್ಯಾಕರಣದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಬರೆಸುವ ಮೂಲಕ ಮನನ ಮಾಡಿಸಬೇಕು. ಅವರನ್ನು ವಿದ್ಯಾರ್ಥಿಗಳ ಮುಂದೆ ಹೀಯಾಳಿಸದೆ, ಪರೀಕ್ಷೆ ಭಯ ಹೋಗಲಾಡಿಸಿ ಧೈರ್ಯದಿಂದ ಪರೀಕ್ಷೆ ಎದುರಿಸುವಂತೆ ಉತ್ತೇಜಿಸಿ ಎಂದು ಹೇಳಿದರು.

ಕಲಿಕೆಯಲ್ಲಿ ಅತಿ ಹಿಂದುಳಿದಿದ್ದ ಮೂವರು ವಿದ್ಯಾರ್ಥಿಗಳನ್ನು ಕರೆಸಿ, ಕೌನ್ಸಿಲಿಂಗ್‌ ನಡೆಸಿದ ತಹಶೀಲ್ದಾರ್‌ ಬಸವರಾಜು, “ನಿಮ್ಮ ಪೋಷಕರು ಕಷ್ಟಪಟ್ಟು ಓದಿಸುತ್ತಿದ್ದಾರೆ, ನೀವು ಇಷ್ಟಪಟ್ಟು ಓದಿದ್ದೇ ಆದಲ್ಲಿ ಖಂಡಿತ ಉತ್ತಮ ಫ‌ಲಿತಾಂಶ ಪಡೆಯುತ್ತೀರಿ’ ಎಂದು ಕಿವಿಮಾತು ಹೇಳಿದರು. ಇವರ ಪೋಷಕರನ್ನು ಕರೆಸಿ ಮನೆಯಲ್ಲಿ ಉತ್ತಮ ಪರಿಸರ ಇರುವಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು.

Advertisement

ಆದರ್ಶ ಶಾಲಾ ಮುಖ್ಯ ಶಿಕ್ಷಕ ಚಂದ್ರಕುಮಾರ್‌ ಮಾತನಾಡಿ, ಪ್ರತಿವರ್ಷವೂ ಕಲಿಕೆಯಲ್ಲಿ ಹಿಂದುಳಿಯುವ ಮೂರ್‍ನಾಲ್ಕು ವಿದ್ಯಾರ್ಥಿಗಳಿಂದಾಗಿ ಶೇ.100ರಷ್ಟು ಫಲಿತಾಂಶ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿಶೇಷ ಕ್ರಮಗಳನ್ನು ವಹಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಎಲ್ಲಾ ಶಿಕ್ಷಕರು ಹಾಗೂ ಅಧಿಕಾರಿಗಳು ಹಾಜರಿದ್ದರು.

ತಾಲೂಕಾದ್ಯಂತ ವಿಶೇಷ ತರಗತಿ: ಹುಣಸೂರು ತಾಲೂಕಿನಾದ್ಯಂತ ಈ ವರ್ಷ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ಪರೀಕ್ಷೆಯಲ್ಲಿ ಎಲ್ಲಾ ಮಕ್ಕಳು ತೇರ್ಗಡೆ ಹೊಂದುವಂತೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮಕ್ಕಳಿಗೆ ಪರೀಕ್ಷಾ ಭಯ ಹೋಗಲಾಡಿಸಲು ತರಬೇತಿ ಸಹ ನೀಡಲಾಗುತ್ತಿದೆ. ಪೋಷಕರ ಸಭೆ ನಡೆಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next