Advertisement

ಆದರ್ಶ ಪಾಲಿಸಿದರೆ ರಂಗಭೂಮಿ ಉತ್ತುಂಗಕ್ಕೆ

01:26 PM Feb 17, 2017 | |

ಧಾರವಾಡ: ಕನ್ನಡ ರಂಗಭೂಮಿಯಲ್ಲಿ ಹಿಂದೆ ಇದ್ದ ಆದರ್ಶಗಳನ್ನು ರೂಢಿಸಿಕೊಂಡರೆ ಮತ್ತೆ ಆ ಗತವೈಭವ ಮರುಕಳಿಸಲು ಸಾಧ್ಯ ಎಂದು ಕನ್ನಡದ ಹಿರಿಯ ವೃತ್ತಿರಂಗಭೂಮಿ ಕಲಾವಿದೆ ಮತ್ತು ಡಾ| ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಬಾಯಿ ಏಣಗಿ ಅಭಿಪ್ರಾಯಪಟ್ಟರು. 

Advertisement

ಅವರು ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಹಮ್ಮಿಕೊಂಡಿದ್ದ ಅನನ್ಯ ಮಹಿಳೆಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. 50ರ ದಶಕದಲ್ಲಿ ಕನ್ನಡ ರಂಗಭೂಮಿಯಲ್ಲಿ ಪ್ರಾಮಾಣಿಕತೆ, ವಿಶ್ವಾಸ, ಉತ್ತಮ ನಟನೆ, ಪ್ರೇಕ್ಷಕನನ್ನ ಪೂಜ್ಯಭಾವದಿಂದ ನೋಡುವುದು ಸೇರಿದಂತೆ ಅನೇಕ ಉತ್ತಮ ಆದರ್ಶಗಳಿದ್ದವು. ಹೀಗಾಗಿ ಜನರು ರಂಗಭೂಮಿಯನ್ನ ಇಷ್ಟ ಪಡುತ್ತಿದ್ದರು. 

ಉತ್ತಮ ನಟರಾಗಿ ಹೊರ ಹೊಮ್ಮಲು ದಶಕಗಳ ಸಮಯ ಬೇಕಿತ್ತು. ಆದರೆ ಇಂದು ಎಲ್ಲರೂ ತರಾತುರಿಯಲ್ಲೇ ನಡೆದು ಮೇಲಕ್ಕೇರಿ, ಕೇಳಕ್ಕಿಳಿದು ಬಿಡುವ ಕಾಲ ಬಂದಿದೆ. ಹೀಗಾಗಿ ರಂಗಭೂಮಿ ಕೊಂಚ ಸಂಕಷ್ಟದಲ್ಲಿದೆ ಎನ್ನಬಹುದು. ಆದರೆ ಉತ್ತಮ ಆದರ್ಶಗಳನ್ನು ಇಂದಿನ ರಂಗಭೂಮಿ ಪಾಲಿಸಿದರೆ ಮತ್ತೆ ಕನ್ನಡ ರಂಗಭೂಮಿ ಗತವೈಭವಕ್ಕೆ ಏರಲಿದೆ ಎಂದು ಹೇಳಿದರು. 

ಆತ್ಮಚರಿತ್ರೆ ಬೇಡ: ತಮ್ಮ ಜೀವನದಲ್ಲಿ ಕಹಿ ಘಟನೆಗಳನ್ನ ಮೆಲಕು ಹಾಕಿದ ಲಕ್ಷ್ಮೀಬಾಯಿ ಅವರು, ನನ್ನೊಳಗಿ ನೋವು ನನ್ನಲ್ಲಿಯೇ ಇರಬೇಕು. ಅದನ್ನು ಬೇರೆಯವರಿಗೆ ಹೇಳಿ ದೊಡ್ಡದು ಮಾಡುವುದು ನನಗೆ ಇಷ್ಟವಿಲ್ಲ. ಹೀಗಾಗಿ ನಾನು ನನ್ನ ಆತ್ಮಚರಿತ್ರೆ ಬರೆದು ಕೊಡುತ್ತೇನೆ ಎಂದು ಬಂದವರಿಗೆ ಬೇಡ ಎಂದು ಹೇಳಿದ್ದೇನೆ.

ಆತ್ಮಚರಿತ್ರೆ ಬೇಡವೇ ಬೇಡ. ನನ್ನ ಮೊಮ್ಮಕ್ಕಳಿಗೆ ನಾನು ಮೊದಲು ಓದಿ ನೌಕರಿ ಹಿಡಿಯಿರಿ, ಆ ಮೇಲೆ ರಂಗಕ್ಕೆ ಬನ್ನಿ ಎಂದು ಸಲಹೆ ನೀಡಿದ್ದೇನೆ. ಕಾರಣ, ನಾವು ಅನುಭವಿಸಿದ ಕಷ್ಟ, ನೋವುಗಳನ್ನು ನನ್ನ ಮುಂದಿನ ಪೀಳಿಗೆ ಅನುಭವಿಸುವುದು ಬೇಡ ಎಂದು ಹೇಳಿದರು. 

Advertisement

ಬಸವಣ್ಣನಿಗೆ ನಮಸ್ಕಾರ: ತಮ್ಮ ರಂಗಭೂಮಿ ನೆನಪುಗಳನ್ನು ಹಂಚಿಕೊಂಡ ಅವರು, ಮುಂಬೈನಲ್ಲಿ ಪೃಥ್ವಿರಾಜ್‌ಕಪೂರ ಅವರ “ಪೈಸೇ ಹೀ ಪೈಸೆ’ ನಾಟಕ ನೋಡಿ ಬಂದು ಇಲ್ಲಿ ನಾವು ಜಗಜ್ಯೋತಿ ಬಸವೇಶ್ವರ ನಾಟಕವನ್ನು ಆರಂಭ ಮಾಡಿದೇವು. ಈ ನಾಟಕದಿಂದ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ಬಸವಣ್ಣನ ಜನ್ಮಭೂಮಿ ಬಸವ ಕಲ್ಯಾಣದ ಅಭಿವೃದ್ಧಿಗೆ ಕಳುಹಿಸಿ ಕೊಡುತ್ತಿದ್ದೇವು.

ನಾಟಕ ಮುಗಿದ ಮೇಲೆ ನಾಡೋಜ ಏಣಗಿ ಬಾಳಪ್ಪ ಮತ್ತು ನನ್ನ ಕಾಲಿಗೆ ಜನರು ನಮಸ್ಕರಿಸುತ್ತಿದ್ದರು. ನಾವು ಬೇಡ ಎಂದರೂ ಕೇಳುತ್ತಿರಲಿಲ್ಲ. ಕನ್ನಡದ ಜನರು ತೋರಿದ ಪ್ರೀತಿ, ಅಭಿಮಾನ ಎಂದಿಗೂ ಮರೆಯಲಾರದ್ದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ| ಹೇಮಾ ಪಟ್ಟಣಶೆಟ್ಟಿ,

ಲಕ್ಷ್ಮೀಬಾಯಿ ಏಣಗಿ ಅಂತಹ ಕಲಾವಿದೆಯರು ಒಬ್ಬ ಮಹಿಳೆಯಾಗಿ ಸಮಾಜದ ಎಲ್ಲಾ ಶೋಷಣೆಗಳನ್ನು ತಾಳ್ಮೆಯಿಂದ ಎದುರಿಸಿ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಸರ್ಕಾರಗಳು ಅವರಿಗೆ ನೀಡಬೇಕಾದ ಆದ್ಯತೆ ಇನ್ನೂ ನೀಡದಿರುವುದು ವಿಷಾದನೀಯ ಎಂದು ಹೇಳಿದರು. ಲಲಿತಾ ಪಾಟೀಲ ವಚನ ಪ್ರಾರ್ಥನೆ ಸಲ್ಲಿಸಿದರು. ಸಂಸ್ಕೃತಿ ಬೋಸ್ಲೆ ಸ್ವಾಗತಿಸಿದರು. ಸುಜಾತಾ ಹಡಗಲಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next