ರಾಯಚೂರು: ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರವೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿ, ಮೇ 17ರ ವರೆಗೆ ಯಾವುದೇ ಕೋವಿಡ್ ಪಾಸಿಟಿವ್ ಇರಲಿಲ್ಲ. ಆದರೆ, ಈಗ ನಗರದಲ್ಲಿಯೇ 25 ಪ್ರದೇಶಗಳನ್ನು ಹಾಟ್‌ಸ್ಟಾಟ್ ಎಂದು ಗುರುತಿಸಲಾಗಿದೆ. ನಿತ್ಯ 150 ರಿಂದ 200 ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿ ಗಣೇಶ ಚತುರ್ಥಿ ಆಚರಣೆಗೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ ಎಂದರು.
ಪಟಾಕಿ ಸಿಡಿಸುವಂತಿಲ್ಲ, ಡಿಜೆ-ಮೈಕ್ ಬಳಸುವಂತಿಲ್ಲ, ಪಾರಂಪರಿಕವಾಗಿ ಆಚರಿಸಲ್ಪಡುವಲ್ಲಿ ಮಾತ್ರ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದು. ಪೆಂಡಾಲ್‌ಗಳಲ್ಲಿ 20ಕ್ಕೂ ಹೆಚ್ಚು ಜನರು ಇರುವಂತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರತಿದಿನ ಆ ಸ್ಥಳವನ್ನು ಸ್ಯಾನಿಟೈಜ್ ಮಾಡಬೇಕು. ಇದಕ್ಕೆ ಗಣೇಶ ಮಂಡಳಿಗಳ ಸಹಕಾರ ಅಗತ್ಯ ಎಂದರು.
ಸದರ ಬಜಾರ್ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಏಕಗವಾಕ್ಷಿ ಪದ್ಧತಿಯಲ್ಲಿ ಜೆಸ್ಕಾಂ, ಪೊಲೀಸ್, ಅಗ್ನಿ ಶಾಮಕ ಹಾಗೂ ನಗರಸಭೆ ಅಧಿ ಕಾರಿಗಳಿಂದ ಅನುಮತಿ ನೀಡಲಾಗುವುದು. ನಗರದ ಖಾಸ್‌ಬಾವಿಯಲ್ಲಿ ಈ ಬಾರಿಯೂ ಗಣೇಶ ವಿಸರ್ಜನೆಗೆ ಅವಕಾಶವಿದ್ದು, ಷರತ್ತು ವಿಧಿಸಲಾಗುವುದು. ನಗರಸಭೆಯಿಂದ ಕಳುಹಿಸಲಾಗುವ ವಾಹನಗಳಿಗೆ ಗಣೇಶ ಮೂರ್ತಿ ನೀಡಬೇಕು. ನಂತರ ಆ ವಾಹನಗಳಲ್ಲಿ ಗಣೇಶ ಮೂರ್ತಿಯನ್ನು ಖಾಸ್‌ಬಾವಿಗೆ ತಂದು ಅಲ್ಲಿ ಪುರೋಹಿತರಿಂದ ವಿಸರ್ಜನಾ ಕ್ರಮವಹಿಸಲಾಗುವುದು. ಅಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು ತಿಳಿಸಿದರು. ಐದು ದಿನ ಮಾತ್ರ ಮೂರ್ತಿ ಕೂಡಿಸಬೇಕು. ಇದಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ನಗರದಲ್ಲಿರುವ ಕಂಟೈನ್ಮೆಂಟ್ ಜೋನ್‌ನಲ್ಲಿ ಮನೆಗಳಲ್ಲಿಯೇ ಆಚರಿಸಬೇಕು ಎಂದರು.
ಎಸ್‌ಪಿ ಅಮೃತ್ ಪ್ರಕಾಶ್ ನಿಕಮ್ ಮಾತನಾಡಿ, ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಕಡ್ಡಾಯವಾಗಿ ಸಿಸಿ ಟಿ.ವಿ ಅಳವಡಿಸಬೇಕು ಎಂದರು. ಈ ವೇಳೆ ಜಿಪಂ ಸಿಇಒ ಲಕ್ಮೀಕಾಂತ ರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ವಿವಿಧ ಸಮುದಾಯಗಳ ಮುಖಂಡರಿದ್ದರು.