Advertisement

ಹಿಜಾಬ್‌ ವಿಷಯದಲ್ಲಿ ಕೋರ್ಟ್‌ ತೀರ್ಪು ಪಾಲಿಸಿ- ಸಚಿವ ಬಿ.ಸಿ. ನಾಗೇಶ

02:30 PM May 29, 2022 | Team Udayavani |

ಕೊಪ್ಪಳ: ಶಾಲೆಗೆ ಯಾವುದೇ ಕಾರಣಕ್ಕೂ ಹಿಜಾಬ್‌ ಧರಿಸಿ ಬರಲು ಅವಕಾಶವಿಲ್ಲ. ಈ ವಿಚಾರದಲ್ಲಿ ಹೈಕೋರ್ಟ್‌ ಈಗಾಗಲೇ ತೀರ್ಪು ಕೊಟ್ಟಿದೆ. ಈ ದೇಶದ ಎಲ್ಲ ಪ್ರಜೆಗಳು ಕೋರ್ಟ್‌ ಆದೇಶ ಪಾಲನೆ ಮಾಡಬೇಕು. ಪಾಲಿಸದವರಿಗೆ ಶಾಲೆಯೊಳಗೆ ಪ್ರವೇಶವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಲೆಯೊಳಗೆ ಹಿಜಾಬ್‌ ಧರಿಸಿ ಪ್ರವೇಶಿಸಲು ಅವಕಾಶವಿಲ್ಲ. ಈ ದೇಶವನ್ನು ಅಶಾಂತಿಯತ್ತ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಯೋಲ್ಲ. ಕೋವಿಡ್‌ನಿಂದ ಶಾಲೆಯಲ್ಲಿ ಮಕ್ಕಳ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿತ್ತು. ಅದರ ಸುಧಾರಣೆಗೆ ಒತ್ತು ಕೊಡುವ ವೇಳೆಗೆ ಶಿಕ್ಷಣ ಕ್ಷೇತ್ರದಲ್ಲಿ ಅಶಾಂತಿ ಮೂಡಿಸುವ ದುರುದ್ದೇಶದಿಂದ ಈ ಕೆಲಸ ಮಾಡಲಾಗುತ್ತಿದೆ. ಕೋರ್ಟ್‌ ತೀರ್ಪಿನ ನಂತರವೂ ಹಿಜಾಬ್‌ ಪರವಾಗಿ ರಸ್ತೆಯಲ್ಲಿ ನಿಂತು, ಅಧಿವೇಶನದಲ್ಲಿ ನಿಂತು ವಿರೋಧ ಪಕ್ಷಗಳು ಮಾತನಾಡಿದವು. ವಿರೋಧ ಪಕ್ಷದ ರೀತಿ ನೀತಿ ಏನೆಂಬುದು ರಾಜ್ಯದ ಜನತೆಗೆ ಗೊತ್ತಿದೆ. ಶಿಕ್ಷಣ ಕಾಯ್ದೆ ವಿರುದ್ಧವೂ ಮಾತನಾಡಿದ್ದಾರೆ. ವಿರೋಧ ಪಕ್ಷಗಳು ಎಲ್ಲ ವಿಚಾರದಲ್ಲೂ ಮತ ಬ್ಯಾಂಕ್‌ ರಾಜಕೀಯ ಮಾಡಲು ಮುಂದಾಗಿವೆ ಎಂದರು.

ದೇವನೂರು ಜತೆ ಮಾತನಾಡುವೆ: ಪಠ್ಯದಿಂದ ಯಾವುದೇ ವಿಷಯವನ್ನು ತೆಗೆದಿಲ್ಲ. ಬಸವಣ್ಣ, ಭಗತ್‌ ಸಿಂಗ್‌, ನಾರಾಯಣಗುರು ಸೇರಿ ಹಲವು ಹೋರಾಟಗಾರರ ಯಾವ ವಿಷಯವನ್ನೂ ಕೈಬಿಡಲಾಗಿಲ್ಲ. ದೇವನೂರು ಮಹಾದೇವ ಒಳ್ಳೆಯ ಸಾಹಿತಿಗಳು. ತುಂಬ ತಿಳಿದವರು. ಅವರು ಬರೆದ ವಿಷಯ ಇರಲಿ ಎಂದು ಪಠ್ಯದಲ್ಲಿ ಮುದ್ರಣ ಮಾಡಿದ್ದೇವೆ. ಪಠ್ಯ ಪುಸ್ತಕ ಶೇ.90ರಷ್ಟು ಮುದ್ರಣವಾಗಿವೆ. ಈ ಬಗ್ಗೆ ದೇವನೂರು ಅವರ ಜೊತೆ ಮಾತನಾಡುವೆ ಎಂದರು.

ಬ್ರಿಟಿಷರ ಇತಿಹಾಸವನ್ನು ತೆಗೆದು ಹಾಕಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ದೇಶದಲ್ಲಿ ಸೋಲಿನ ಇತಿಹಾಸ ಬರೆಯಲಾಗಿದೆ. ಬ್ರಿಟಿಷರು ತಂದ ಪಠ್ಯ ವಿಷಯವನ್ನೇ ಕಾಂಗ್ರೆಸ್‌ನವರು ಇಟ್ಟುಕೊಂಡು ಕುಳಿತಿದ್ದರು. ದೇಶದ ಪ್ರಗತಿಗೆ ಬಿಜೆಪಿ ಜನ್ಮ ತಾಳಿದೆ. ಬಿಜೆಪಿ ಬಂದ ಮೇಲೆ ದೇಶದಲ್ಲಿ ಬದಲಾವಣೆಯಾಗುತ್ತದೆ ಎಂದು ದೇವನೂರು ಮಹಾದೇವ ಅವರೇ ಬರೆದಿದ್ದಾರೆ.

ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ರಸ್ತೆ ಸೇರಿ ಹಲವು ಅಭಿವೃದ್ಧಿ ನಡೆದಿದೆ. ನಾವು ಹೊರಟಿರೋದೇ ಪರಿವರ್ತನೆ ಮಾಡಲು ಎಂದರು. ಶಾಲೆಯಲ್ಲಿ ಪಠ್ಯ ಆರಂಭಿಸಲು ಇನ್ನೊಂದು ತಿಂಗಳು ಆಗುತ್ತೆ. ಶೇ. 90ರಷ್ಟು ಪಠ್ಯಪುಸ್ತಕ ಸಿದ್ಧವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಇಒ ಕಚೇರಿಗೆ ಪೂರೈಕೆಯಾಗಲಿವೆ. ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳಿಗೆ ಏನು ಬೇಕೋ ಆ ತರದ ಶಿಕ್ಷಣ ಕೊಡುತ್ತೇವೆ ಎಂದಿದ್ದೇವೆ. ಅದರಂತೆ ಜಾರಿ ಮಾಡುತ್ತೇವೆ ಎಂದರು.

Advertisement

ಆರ್‌ಎಸ್‌ಎಸ್‌ನವರು ಭಾರತದವರಲ್ಲ ಎನ್ನುವ ಸಿದ್ದರಾಮಯ್ಯರಿಗೆ 70 ವರ್ಷ ವಯಸ್ಸಾಗಿದೆ ಎಂದುಕೊಂಡಿದ್ದೆ. ಆದರೆ 74 ವರ್ಷವಾಗಿದೆ ಎಂದು ಈಗ ತಾನೇ ಕೇಳಿದ್ದೇನೆ. ಹಿರಿಯರು, ಅನುಭವಿಗಳು, ಅವರ ಬಗ್ಗೆ ಏನು ಹೇಳ್ಳೋಣ ಎಂದೇ ತಿಳಿಯುತ್ತಿಲ್ಲ. ಈ ದೇಶದ ವಿಜ್ಞಾನಿಗಳೇ ಕಟ್ಟಕಡೆಯ ಡಿಎನ್‌ಎ ಟೆಸ್ಟ್‌ ಮಾಡಿ, ಇದು ಕಾಮನ್‌ ಡಿಎನ್‌ಎ ಇದೆ ಎಂದು ಹೇಳಿದ್ದಾರೆ. ವಿಜ್ಞಾನಿಗಳಿಗೆ ಇದು ಅರ್ಥವಾಗುತ್ತದೆ.ಆದರೆ ಇವರಿಗೆ ಆಗುತ್ತಿಲ್ಲ ಎಂದರು.

ನೆಹರು ಅವರನ್ನು ಮೋದಿಗೆ ಹೋಲಿಸಲು ಸಾಧ್ಯವೇ ಇಲ್ಲ. ನರೇಂದ್ರ ಮೋದಿ ಅವರು ಪ್ರಪಂಚ ಮಟ್ಟಕ್ಕೆ ಹೋಗಿದ್ದಾರೆ. ನೆಹರು ಕೇವಲ ರಾಷ್ಟ್ರಮಟ್ಟದಲ್ಲಿದ್ದರು. ಅವರನ್ನು ಇವರನ್ನು ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಆರ್‌ಎಸ್‌ ಎಸ್‌ ಇಟಲಿ ಮೂಲದ್ದಲ್ಲ ಎಂದು ಕುಟುಕಿದರು.

ಈ ದೇಶದ ಇತಿಹಾಸವನ್ನು ಮಕ್ಕಳಿಗೆ ತಿಳಿಸುವುದರಲ್ಲಿ ಯಡವಟ್ಟಾಗಿದೆ ಎಂದೆನಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಗ್ರಾಮಗಳಿಂದ ಭಾಗಿಯಾಗಿದ್ದಾರೆ. ಅವುಗಳನ್ನು ಈಗ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್‌ ರಾಷ್ಟ್ರೀಯತೆ, ಹಿಂದುತ್ವ ಸಹಿಸಲ್ಲ. ಹೀಗಾಗಿ ಇದೀಗ ಪಠ್ಯ ಪುಸ್ತಕ ವಿಚಾರದಲ್ಲೂ ವಿವಾದ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಗೆ ಏನೂ ವಿಷಯ ಇರದಿದ್ದರೆ ಜಾತಿ ಬಗ್ಗೆ ಮಾತಾಡ್ತಾರೆ. ಈ ದೇಶದ ಜನತೆಗೆ ಯಾವುದು ನಿಜ, ಯಾವುದು ಸುಳ್ಳು ಎನ್ನುವುದು ಗೊತ್ತಿದೆ. ಜನತೆಗೆ ಸುಳ್ಳು ಹೇಳಿ ಹಿಂದೂ ಸಮಾಜ ಒಡೆಯುವ ಕೆಲಸ ನಡೆದಿದೆ. ಬ್ರಿಟಿಷರಿಂದ ಅಧಿಕಾರ ವಹಿಸಿಕೊಂಡ ಬಳಿಕ ಕಾಂಗ್ರೆಸ್‌ ಇದನ್ನೇ ಮಾಡುತ್ತಿದೆ. –ಬಿ.ಸಿ. ನಾಗೇಶ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next