Advertisement

ಬದಲಾಗುತ್ತಿರುವ ತಂತ್ರಜ್ಞಾನ ಕೌಶಲ ರೂಢಿಸಿಕೊಳ್ಳಿ: ಡಾ|ಎ.ಎಸ್‌. ಬಾಲಸುಬ್ರಹ್ಮಣ್ಯ

10:14 AM Jun 13, 2022 | Team Udayavani |

ಹುಬ್ಬಳ್ಳಿ: ಇಂಟರ್‌ನೆಟ್‌ ಕ್ರಾಂತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗಿದೆ. ಇದರೊಂದಿಗೆ ಹಲವು ಅವಕಾಶಗಳನ್ನು ಕೂಡ ಸೃಷ್ಟಿಸಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಯುವ ಪತ್ರಕರ್ತರು ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕು ಎಂದು ಕವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ| ಎ.ಎಸ್‌. ಬಾಲಸುಬ್ರಹ್ಮಣ್ಯ ಹೇಳಿದರು.

Advertisement

ರವಿವಾರ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಮಾಧ್ಯಮ ವೃತ್ತಿ ಕೌಶಲಾಭಿವೃದ್ಧಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನದಲ್ಲಾದ ಬದಲಾವಣೆಯಿಂದ ಮಾಧ್ಯಮ ಕ್ಷೇತ್ರದ ಬೆಳವಣಿಗೆ ಊಹೆಗೂ ನಿಲುಕುವುದಿಲ್ಲ. ಕಳೆದ ಮೂರು ದಶಕಗಳಲ್ಲಿ ಗಣನೀಯ ಬದಲಾವಣೆ ಕಂಡಿದೆ. ಇತ್ತೀಚಿನ ಹೊಸ ಆವಿಷ್ಕಾರ ಒಟಿಟಿ, ವೆಬ್‌ ಸಿರೀಸ್‌ ಅವಕಾಶಗಳ ಗುಚ್ಛವನ್ನೇ ನೀಡಿದೆ. ಇವುಗಳಿಗೆ ಪೂರಕವಾಗಿ ಪತ್ರಕರ್ತರು ಹೊಸತನ್ನು ರೂಢಿಸಿಕೊಳ್ಳುವ ಅವಶ್ಯಕತೆ ತಂದೊಡ್ಡಿವೆ. ಕಲಿಕೆಯನ್ನು ಕೇವಲ ಪತ್ರಿಕೆ, ನ್ಯೂಸ್‌ ಚಾನೆಲ್‌ಗೆ ಸೀಮಿತಗೊಳಿಸದೆ ವಿಸ್ತರಿಸಿಕೊಳ್ಳಬೇಕು. ಮಾಧ್ಯಮಗಳು ಸಮಾಜದಲ್ಲಿ ವಿಚಾರ, ವಿಮರ್ಶೆಯನ್ನು ಹುಟ್ಟುಹಾಕಬೇಕು. ನಿರ್ದಿಷ್ಟ ವಿಷಯವನ್ನು ಜನರಿಗೆ ನೇರವಾಗಿ ಮುಟ್ಟಿಸುವ ಕೆಲಸ ಆಗಬೇಕು. ವಿಷಯಗಳಲ್ಲಿ ಪತ್ರಕರ್ತನ ಅಭಿಪ್ರಾಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬಾರದು ಎಂದರು.

ಇಂಟರ್‌ನೆಟ್‌ ಬಳಕೆ ವಿಸ್ತಾರಗೊಳ್ಳುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳೂ ಸುದ್ದಿಮೂಲಗಳಾಗಿ ಬದಲಾಗಿವೆ. ಜನಪ್ರತಿನಿಧಿಗಳು, ಪ್ರಮುಖರು ಮಾಡುವ ಟ್ವೀಟ್‌ಗಳು ಇಂದು ಸಹಜವಾಗಿಯೇ ಎಲ್ಲ ಪತ್ರಿಕೆಗಳಲ್ಲಿ ಸುದ್ದಿಗಳಾಗುತ್ತಿವೆ. ಇದು ತಂತ್ರಜ್ಞಾನದಿಂದ ಆಗಿರುವ ಬದಲಾವಣೆ. ಸಾಮಾಜಿಕ ಜಾಲತಾಣಗಳಿಂದ ಇಂದು ಸುದ್ದಿಗಳು ಹೆಚ್ಚು ವೇಗವಾಗಿ ಜನರನ್ನು ತಲುಪುತ್ತಿವೆ. ಈ ಸವಾಲುಗಳನ್ನು ಮೆಟ್ಟಿ ನಿತ್ಯವೂ ಪತ್ರಿಕೆಗಳನ್ನು ಕೊಂಡುಕೊಳ್ಳುವಂತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಕೇಶವ ಪ್ರೊಡಕ್ಷನ್‌ ಪ್ರೈವೇಟ್‌ ಲಿಮಿಟೆಡ್‌ ಸಿಇಒ ರಿಚಾ ಖಂಡೇಲವಾಲ್‌ ಭಟ್‌ ಮಾತನಾಡಿ, ಇಂಟರ್‌ ನೆಟ್‌ ಕ್ರಾಂತಿಯಿಂದಾಗಿ ಸಣ್ಣ ನಗರದಲ್ಲಿದ್ದರೂ ವಿಪುಲ ಅವಕಾಶಗಳನ್ನು ಪಡೆಯಬಹುದಾಗಿದೆ. ಬದಲಾಗುತ್ತಿರುವ ತಂತ್ರಜ್ಞಾನದ ಕೌಶಲವನ್ನು ಮೈಗೂಡಿಸಿಕೊಳ್ಳುವ ಕೆಲಸ ಆಗಬೇಕು. ಇದರಿಂದ ಪತ್ರಿಕೆಗಳಲ್ಲಿ ಅಷ್ಟೇ ಅಲ್ಲದೇ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಹಲವು ಉದ್ಯೋಗ ಸೃಷ್ಟಿಸಿಕೊಳ್ಳಬಹುದು. ಯುಟ್ಯೂಬ್‌ ನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡುವುದು, ವಿಡಿಯೊ ಎಡಿಟಿಂಗ್‌, ವೆಬ್‌ ಸಿರೀಸ್‌ಗಳಿಗೆ ಹಿನ್ನೆಲೆ ಧ್ವನಿ ಹಾಗೂ ಸಂಭಾಷಣೆ ಬರೆಯುವುದು ಸೇರಿದಂತೆ ಪತ್ರಿಕೋದ್ಯಮ ಮುಗಿಸಿದವರಿಗೆ ಹಲವು ಅವಕಾಶಗಳು ಲಭ್ಯವಿದೆ ಎಂದರು.

Advertisement

ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಮಾತನಾಡಿ, ಎಲ್ಲಾ ಬದಲಾವಣೆಗೆ ತಂತ್ರಜ್ಞಾನ ಕಾರಣವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಆಗುತ್ತಿರುವ ಪ್ರಗತಿ ಹಾಗೂ ಬದಲಾವಣೆಯಂತೆ ಪತ್ರಿಕೋದ್ಯಮದಲ್ಲೂ ನಡೆಯುತ್ತಿದೆ. ಸಾಮಾಜಿಕ ಜಾಲತಾಣ ಎಷ್ಟೇ ಬೆಳೆದರೂ ಜನರಲ್ಲಿ ನಿಖರತೆಯ ಪ್ರಶ್ನೆ ಎದುರಾಗುತ್ತದೆ. ಆಗ ಪತ್ರಿಕೆ, ಸುದ್ದಿವಾಹಿನಿಗಳು ಅಂತಿಮ ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಇದನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು ಎಂದು ಹೇಳಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ, ಖಜಾಂಚಿ ಬಸವರಾಜ ಹೂಗಾರ ಸೇರಿದಂತೆ ಮಂಡಳಿ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next