Advertisement

ಬಜೆಟ್‌ ಅನುಷ್ಠಾನದಲ್ಲಿ ಹಿಂದೇಟು

12:34 PM Dec 12, 2018 | Team Udayavani |

ಬೆಂಗಳೂರು: ಪ್ರತಿವರ್ಷ ಬಜೆಟ್‌ನಲ್ಲಿ ಬೆಂಗಳೂರು ಜನರಿಗೆ ಆಕಾಶ ತೋರಿಸುವ ಬಿಬಿಎಂಪಿಯು, ಅದರಲ್ಲಿನ ಯೋಜನೆಗಳನ್ನು ಅನುಷ್ಠಾನಗೊಳಿಸದೆ ಮತ್ತೆ ಮತ್ತೆ ಜನರನ್ನು ವಂಚಿಸುತ್ತಿದೆ. ಆ ಸಾಲಿಗೆ ಪಾಲಿಕೆಯ 2018-19ನೇ ಸಾಲಿನ ಬಜೆಟ್‌ ಸೇರಿದ್ದು, ಹತ್ತು ತಿಂಗಳು ಕಳೆದರೂ ಈವರೆಗೆ ಶೇ.50ರಷ್ಟು ಅನುಷ್ಠಾನಗೊಂಡಿಲ್ಲ. ಉಳಿದ ಮೂರು ತಿಂಗಳಲ್ಲಿ ಬಜೆಟ್‌ ಅನುಷ್ಠಾನ ವೇಗ ಪಡೆಯುವುದೇ ಎಂಬ ಅನುಮಾನ ಕಾಡಿದೆ.

Advertisement

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎಂ.ಮಹದೇವ್‌ ಅವರು 2018ರ ಫೆಬ್ರವರಿಯಲ್ಲಿ ಬಜೆಟ್‌ ಮಂಡಿಸಿದ್ದರು. ಆದರೆ, ರಾಜ್ಯ ಸರ್ಕಾರ ಬಜೆಟ್‌ಗೆ ಅನುಮೋನೆ ನೀಡಲು ಮೂರು ತಿಂಗಳು ವಿಳಂಬ ಮಾಡಿತ್ತು. ಇದೀಗ ಆರ್ಥಿಕ ವರ್ಷ ಮುಗಿಯಲು ಕೇವಲ ಮೂರು ತಿಂಗಳು ಬಾಕಿಯಿದ್ದು, ಪೂರ್ಣ ಪ್ರಮಾಣದಲ್ಲಿ ಬಜೆಟ್‌ ಅನುಷ್ಠಾನವಾಗುವ ಸಾಧ್ಯತೆ ಕಡಿಮೆ.

ಜನಪರ ಆಯವ್ಯಯ ಮಂಡಿಸಿದ್ದೇವೆ ಎಂದು ಬೀಗುವ ಆಡಳಿತ ಪಕ್ಷಗಳಿಗೆ ವರ್ಷ ಕಳೆದರೂ ಯೋಜನೆಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಬಜೆಟ್‌ ಮಂಡನೆ ವೇಳೆ ಜನಪ್ರತಿನಿಧಿಗಳು ತೋರುವ ಆಸಕ್ತಿ, ಅದರ ಅನುಷ್ಠಾನದ ವೇಳೆ ತೋರದ ಹಿನ್ನೆಲೆಯಲ್ಲಿ ಹತ್ತಾರು ಸಾವಿರ ಕೋಟಿಯ ಯೋಜನೆಗಳು ಜನರನ್ನು ತಲುಪದಂತಾಗಿದೆ.

ಜನಪ್ರತಿನಿಧಿಗಳೊಂದಿಗೆ ಪಾಲಿಕೆಯ ಅಧಿಕಾರಿಗಳು ಸಹ ಬಜೆಟ್‌ ಅನುಷ್ಠಾನಗೊಳಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಇದರಿಂದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ ಯೋಜನೆಗಳ ಅನುಕೂಲ ಪಡೆಯಲು ಕಾಯುತ್ತಿರುವ ಜನರು ನಿರಾಸೆ ಅನುಭವಿಸುವಂತಾಗಿದೆ.

ಕಾಗದ ರಹಿತ ಆಡಳಿತಕ್ಕಾಗಿ ಪಾಲಿಕೆ ಸದಸ್ಯರಿಗೆ ಟ್ಯಾಬ್‌ ನೀಡುವ ಯೋಜನೆ ಬಜೆಟ್‌ಗೆ ಅನುಮೋದನೆ ದೊರೆಯುವ ಮೊದಲೇ ಅನುಷ್ಠಾನವಾಗುತ್ತದೆ. ಆದರೆ, ಜನಸಾಮಾನ್ಯರಿಗೆ ಘೋಷಣೆಯಾಗಿರುವ ಯೋಜನೆಗಳು ಮಾತ್ರ ಸರ್ಕಾರದ ಅನುಮೋದನೆ ದೊರೆತ ನಂತರವೂ ಜಾರಿಗೊಳ್ಳದಿರುವುದು ದುರಾದೃಷ್ಟಕರ ಸಂಗತಿಯಾಗಿದೆ.

Advertisement

ಜಾರಿಯಾಗದ ಕಲ್ಯಾಣ ಯೋಜನೆಗಳು: ಪಾಲಿಕೆಯ ಬಜೆಟ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಹೊರತುಪಡಿಸಿದರೆ, ಸಿಂಹಪಾಲು ಅನುದಾನವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಒದಗಿಸಲಾಗಿದೆ. ಅದರಂತೆ ಪೌರಕಾರ್ಮಿಕರಿಗೆ ಸುರಕ್ಷಿತ ಸಾಧನಗಳ ಕಿಟ್‌, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದವರು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ವರ್ಗದ ಹಿಂದುಳಿದವರಿಗೆ ಒಂಟಿ ಮನೆ ನಿರ್ಮಿಸಿಕೊಳ್ಳಲು ನೀಡುವ ಅನುದಾನ ಪ್ರಮಾಣವನ್ನು 4 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡವರು ವಾಸಿಸುವ ಪ್ರದೇಶಗಳಲ್ಲಿ ಮೂಲಸೌಲಭ್ಯ ಒದಗಿಸಲು ಅನುದಾನ ಮೀಸಲಿಡಲಾಗಿದೆ. ಜತೆಗೆ ಪೌರಕಾರ್ಮಿಕರು, ಡಿ ದರ್ಜೆ ಸಿಬ್ಬಂದಿಗಳ ಕೌಶಲ್ಯ ಅಭಿವೃದ್ಧಿ ಸೇರಿ ಹಲವಾರು ಕಲ್ಯಾಣ ಕಾರ್ಯಕ್ರಮಗಳು ಘೋಷಣೆಯಾದರೂ ಜಾರಿಯಾಗಿಲ್ಲ.

ರಚನೆಯಾಗದ ಜಾಗೃತ ದಳ: ನಗರದಲ್ಲಿ ತೆರಿಗೆ ಸೋರಿಕೆ ತಡೆಯುವ ಉದ್ದೇಶದಿಂದ ವಿಶೇಷ ಆಯುಕ್ತರ ಮೇಲುಸ್ತುವಾರಿಯಲ್ಲಿ ಕಂದಾಯ ಜಾಗೃತದಳ ರಚಿಸುವುದಾಗಿ ಘೋಷಿಸಲಾಗಿತ್ತು. ಆ ಮೂಲಕ ತೆರಿಗೆ ವಂಚಕರ ಪತ್ತೆ ಮಾಡಿ ಪಾಲಿಕೆ ಸಂಪನ್ಮೂಲ ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು. ಆದರೆ, ಈವರೆಗೆ ಜಾಗೃತ ದಳ ರಚನೆಗೆ ಪಾಲಿಕೆ ಮುಂದಾಗಿಲ್ಲ. ಇದರೊಂದಿಗೆ 800 ಕಟ್ಟಡಗಳನ್ನು ಟೋಟಲ್‌ ಸ್ಟೇಷನ್‌ ಸರ್ವೆಗೆ ಒಳಪಡಿಸಿಲ್ಲ. ಜತೆಗೆ 3,317 ಕೋಟಿ ಆಸ್ತಿ ತೆರಿಗೆ ಸೇರಿದಂತೆ ಒಎಫ್ಸಿ, ಸುಧಾರಣ ಶುಲ್ಕ ಇನ್ನಿತರ ಮೂಲಗಳಿಂದ ಆದಾಯ ಸಂಗ್ರಹಕ್ಕೆ ಆದ್ಯತೆ ನೀಡುತ್ತಿಲ್ಲ.

ಬಲಗೊಳ್ಳದ ಕಾನೂನು ವಿಭಾಗ: ಶೀಘ್ರ ಪ್ರಕರಣಗಳ ವಿಲೇವಾರಿಗೆ ಕಾನೂನು ವಿಭಾಗವನ್ನು ವಿಚಾರಣಾ ನ್ಯಾಯಾಲಯ, ನ್ಯಾಯಾಲಯ ಹಾಗೂ ನಾನ್‌ ಲಿಟಿಗೇಷನ್‌ ವಿಭಾಗವೆಂದು ವಿಂಗಡಿಸುವುದಾಗಿ ಘೋಷಿಸಿದರೂ ಈವರೆಗೆ ಜಾರಿಯಾಗಿಲ್ಲ. ಇದರೊಂದಿಗೆ ವಕೀಲರಿಗೆ ರೋಸ್ಟರ್‌ ಕಂ ರೊಟೇಷನ್‌ ಆಧಾರದ ಮೇಲೆ ಪ್ರಕರಣಗಳ ಹಂಚಿಕೆಯಾಗುತ್ತಿಲ್ಲ. ಜತೆಗೆ ಆನ್‌ಲೈನ್‌ ಕಾನೂನು ಮಾಹಿತಿ ವ್ಯವಸ್ಥೆ ಜಾರಿಯ ಬಗ್ಗೆ ಪ್ರಸ್ತಾಪವನ್ನೂ ಮಾಡುತ್ತಿಲ್ಲ.

ನಿರ್ಮಾಣವಾಗಿಲ್ಲ ಕನ್ನಡ ಬಸ್‌ತಾಣಗಳು: ನಗರದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳಸಲು ಪ್ರಮುಖ ಸ್ಥಳಗಳಲ್ಲಿ ಕನ್ನಡ ಸೊಗಡನ್ನು ಸೂಸುವ ಸಂಸ್ಕೃತಿಯ ಪರಿಚಯ, ಜ್ಞಾನಪೀಠ ಪ್ರಶಸ್ತಿ ವಿಜೇತರು, ಕವಿಗಳು, ಮೇರು ನಟರು, ದಾರ್ಶನಿಕರು, ಗಣ್ಯರ ಛಾಯಚಿತ್ರಗಳಿರುವ ಕನ್ನಡ ಬಸ್‌ ನಿಲ್ದಾಣ ಘೋಷಣೆಯಾಗಿಯೇ ಉಳಿದೆ. ಇದರೊಂದಿಗೆ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ, ಶುದ್ಧ ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ಹಾಗೂ ಇತರೆ ವ್ಯವಸ್ಥೆಗೆ ಬಜೆಟ್‌ನಲ್ಲಿ 5 ಕೋಟಿ ರೂ. ಮೀಸಲಿಡಲಾಗಿದೆ.

10 ತಿಂಗಳಲ್ಲಿ ಜಾರಿಯಾದ ಅಂಶಗಳು 
– ಎಲ್ಲ ಪಾಲಿಕೆ ಸದಸ್ಯರಿಗೆ ಟ್ಯಾಬ್‌ ವಿತರಣೆ
– ಹೊಸ ಮೇಯರ್‌ಗೆ ಸಾಂಕೇತಿಕವಾಗಿ ಬೆಳ್ಳಿ ಕೀ ಮತ್ತು ಬ್ಯಾಟನ್‌ ಹಾಗೂ ನೂತನ ಆಯುಕ್ತರಿಗೆ ಕೆಎಂಸಿ ಕಾಯ್ದೆ ಪುಸ್ತಕ ನೀಡಿ ಸ್ವಾಗತ ಕೋರುವುದು
– 2018-19ನೇ ಸಾಲಿನಲ್ಲಿ ಕನಿಷ್ಠ ಎರಡು ಆಸ್ತಿಗಳ ಅಡಮಾನ ಮುಕ್ತ 
– ಜಾಹೀರಾತು ಉಪವಿಧಿಗಳಿಗೆ ತಿದ್ದುಪಡಿ, ಅನಧಿಕೃತ ಜಾಹೀರಾತು ಫ‌ಲಕಗಳ ತೆರವು
– ಪಾಲಿಕೆ ಶಾಲಾ-ಕಾಲೇಜು ವಿದ್ಯಾರ್ಥಿಗಳ ಚಿಕಿತ್ಸಾ ವೆಚ್ಚ ಭರಿಸಲು 2 ಕೋಟಿ ರೂ. ಠೇವಣಿ 
– ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನಿನಿಂದ ಬಿಸಿಯೂಟ

ತೆರಿಗೆ ಸೋರಿಕೆ ತಡೆಗೆ ಈಗಾಗಲೇ ಕ್ರಮಕೈಗೊಂಡಿದ್ದು, ಅಭಿಯಾನದ ಮೂಲಕ ತೆರಿಗೆ ಹೆಚ್ಚಳಕ್ಕೆ ಮುಂದಾಗಿದ್ದೇವೆ. ವಿಧಾನಸಭಾ ಚುನಾವಣೆ, ಸ್ಥಾಯಿ ಸಮಿತಿ ಚುನಾವಣೆಯಿಂದಾಗಿ ಅನುಷ್ಠಾನ ಸ್ವಲ್ಪ ತಡವಾಗಿದ್ದು, ಸಮಿತಿ ಅಧ್ಯಕ್ಷ ಚುನಾವಣೆ ಮುಗಿದ ಕೂಡಲೇ ಏಕಗವಾಕ್ಷಿ ವ್ಯವಸ್ಥೆ ಮೂಲಕ ಎಲ್ಲ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಿ ಶೀಘ್ರ ಜಾರಿಗೆ ಪ್ರಯತ್ನಿಸಲಾಗುವುದು.
-ಗಂಗಾಂಬಿಕೆ, ಮೇಯರ್‌

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next