Advertisement

ಸಾಂಕ್ರಾಮಿಕ ರೋಗ ತಡೆಗೆ ಮಾರ್ಗಸೂಚಿ ಪಾಲಿಸಿ

11:50 AM Feb 22, 2021 | Team Udayavani |

ಬೆಂಗಳೂರು: ನೆರೆಯ ಮಹಾರಾಷ್ಟ್ರ ಮತ್ತುಕೇರಳದಲ್ಲಿ ಕೋವಿಡ್‌ ಎರಡನೇ ಅಲೆ ತೀವ್ರವಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಭಾನುವಾರ ಎಲ್ಲ ಎಂಟೂ ವಲಯಗಳಿಗೆ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕೆ ಹಲವು ಮಾರ್ಗಸೂಚಿಗಳ ಪಾಲನೆಗೆ ನಿರ್ದೇಶನ ನೀಡಿದೆ.

Advertisement

ವಿಶೇಷ ಆಯುಕ್ತ (ಆರೋಗ್ಯ ಮತ್ತು ಐಟಿ) ಪಿ. ರಾಜೇಂದ್ರ ಚೋಳನ್‌, ಪಾಲಿಕೆ ವ್ಯಾಪ್ತಿಯ ಎಲ್ಲ ವಲಯಗಳ ಜಂಟಿ ಆಯುಕ್ತರು, ಆರೋಗ್ಯ ಅಧಿಕಾರಿಗಳೊಂದಿಗೆ ವರ್ಚುವಲ್‌ ಸಭೆ ನಡೆಸಿ, ಶಂಕಿತರ ಸೋಂಕಿತರನ್ನು ನಿರ್ಲಕ್ಷಿಸದೆ ಗುರುತಿಸಿದ 24 ಗಂಟೆಗಳಲ್ಲಿ ಸೋಂಕಿನ ಬಗ್ಗೆ ದೃಢಪಡಿಸಿ ಕೊಳ್ಳಬೇಕು. ಅಲ್ಲದೆ, ಸಂಪರ್ಕಿತರನ್ನು ತ್ವರಿತವಾಗಿ ಪತ್ತೆಹಚ್ಚಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸೋಂಕು ನಿಯಂತ್ರಣದಲ್ಲಿ ಅಧಿಕಾರಿ ಗಳು, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಕೀಯ ಸಿಬ್ಬಂದಿ ಪಾತ್ರಗಳ ಬಗ್ಗೆ ಪ್ರತ್ಯೇಕ ನಿರ್ದೇಶನ ನೀಡಲಾಗಿದೆ.

ಪಿಎಚ್‌ಸಿ ಹಂತದಲ್ಲಿ ಕಣ್ಗಾವಲು :

  • ಪಿಎಚ್‌ಸಿಯಲ್ಲಿ ಪರೀಕ್ಷೆ ಸೌಲಭ್ಯ ಕಡ್ಡಾಯ ವಾಗಿರಬೇಕು.
  • ಸಂಭವನೀಯ ಅಥವಾ ದೃಢಪಟ್ಟ ಸೋಂಕಿತರು ಪತ್ತೆಯಾದ 24 ಗಂಟೆಗಳಲ್ಲಿ ಅಧಿಸೂಚಿಸಬೇಕು
  • ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳಲ್ಲಿ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಸಾಧ್ಯವಾದಷ್ಟು ತ್ವರಿತ ಗತಿಯಲ್ಲಿ ಸೋಂಕಿತರ ಪತ್ತೆ ಮಾಡಬೇಕು.
  • ಯಾವುದೇ ಪ್ರಕರಣಗಳು ಪತ್ತೆ ಆಗಿಲ್ಲದಿದ್ದರೂ ಆ ಮಾಹಿತಿಯನ್ನೂ ಸಂಬಂಧಪಟ್ಟ ವೆಬ್‌ಸೈಟ್‌ಗಳಲ್ಲಿ ನಿತ್ಯ ಅಪ್‌ಲೋಡ್‌ ಮಾಡಬೇಕು.

ಶಾಲಾ-ಕಾಲೇಜುಗಳಲ್ಲಿ ನಿಯಮಿತ ಪರೀಕ್ಷೆ  :  ಕಳೆದ 14 ದಿನಗಳಲ್ಲಿ ಸೋಂಕಿತರನ್ನು ಸಂಪರ್ಕಿಸಿದ್ದರೆ, ಆ ವ್ಯಕ್ತಿಯನ್ನೂ ಶಂಕಿತ ಪ್ರಕರಣ ಎಂದು ಪರಿಗಣಿಸಲಾಗುವುದು. ಹಿಂದಿನ 14 ದಿನಗಳಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದರೆ ಅಥವಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದರೆ ಆ ವ್ಯಕ್ತಿ ಅಥವಾ ವಿದ್ಯಾರ್ಥಿಯನ್ನು ಶಂಕಿತ ಎಂದು ಪರಿಗಣಿಸಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ನಿರ್ವಹಣೆ ಮಾಡಬೇಕು. ಇನ್ನು ಯಾವೊಂದು ಶಿಕ್ಷಣ ಸಂಸ್ಥೆಯಲ್ಲಿ ಯಾವುದಾದರೂ ಸೋಂಕಿತ ಪ್ರಕರಣ ಪತ್ತೆಯಾದರೆ, ಆ ಶಾಲೆ ಅಥವಾ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಪಟ್ಟಿ ಹಾಗೂ ತರಗತಿಯ ವಿವರಗಳನ್ನು ಕೋವಿಡ್‌ ಪತ್ತೆ ಕಾರ್ಯಕ್ಕೆ ನಿಯೋಜನೆಗೊಂಡ ಬಿಬಿಎಂಪಿ ತಂಡಕ್ಕೆ ನೀಡಬೇಕು. ಸೋಂಕಿತರು ಮತ್ತು ಸಂಪರ್ಕಿತರ ಪತ್ತೆಗೆ ಅಲ್ಲಿನ ಸಿಬ್ಬಂದಿ ನೆರವಾಗಬೇಕು. ಸಾರ್ಸ್‌ ಅಥವಾ ಕೋವಿಡ್‌ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದರೂ ಈ ಬಗ್ಗೆ ಬಿಬಿಎಂಪಿ ತಂಡಕ್ಕೆ ಮಾಹಿತಿ ನೀಡಬೇಕು.

ಮರಣ ಪ್ರಕರಣ :

Advertisement

ಕೋವಿಡ್ ಅಥವಾ ಇನ್ನಿತರ ಕಾರಣಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಯಾವುದೇ ರೋಗಿಸಾವನ್ನಪ್ಪಿದರೂ, ಅದು ವರದಿ ಆಗತಕ್ಕದ್ದು. ದೀರ್ಘಾವಧಿ ಅನಾರೋಗ್ಯದಿಂದ ಬಳಲುತ್ತಿದ್ದು, ರೋಗಿ ಸಾವನ್ನಪ್ಪಿದ್ದರೂ ಆ ಬಗ್ಗೆ ವರದಿ ದಾಖಲಿಸಬೇಕು ಎಂದು ಸೂಚಿಸಲಾಗಿದೆ

ಗುಂಪು ಸೇರುವ ಸ್ಥಳ :

  • ಮದುವೆ ಮತ್ತಿತರ ಸಮಾರಂಭಗಳು, ಕಾರಾಗೃಹ, ಅಂಗವಿಕಲರ ಆರೈಕೆ ಕೇಂದ್ರಗಳು, ವೃದ್ಧಾಶ್ರಮಗಳಂತಹ ಕಡೆಗಳಲ್ಲಿ ಸೋಂಕು ಭೀತಿ ಹೆಚ್ಚು. ಇಂತಹ ಕಡೆಗಳಲ್ಲಿ ವಿಶೇಷ ನಿಗಾ ಇಡಬೇಕು.
  • ವೈದ್ಯಕೀಯ ಸಿಬ್ಬಂದಿ ಇಂತಹ ಸ್ಥಳಗಳಲ್ಲಿ ನಿಯಮಿತವಾಗಿ ಭೇಟಿ ನೀಡಿ, ಸಮರ್ಪಕ ಪರೀಕ್ಷೆ ನಡೆಸಬೇಕು.
  • ದೇಹದ ಉಷ್ಣಾಂಶ ಪರೀಕ್ಷೆ, ನಿತ್ಯ ಪ್ರಕರಣಗಳ ಬಗ್ಗೆ ವೆಬ್‌ಸೈಟ್‌ ಗಳಲ್ಲಿ ಅಪ್‌ಲೋಡ್‌ ಮಾಡುವುದು ಸೇರಿ ಹಲವು ಕ್ರಮ ಅಗತ್ಯ.
Advertisement

Udayavani is now on Telegram. Click here to join our channel and stay updated with the latest news.

Next