ಮೈಸೂರು: ಮೈಸೂರು ನಾಗರೀಕ ವೇದಿಕೆ ವತಿಯಿಂದ ಶನಿವಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಪತ್ರಕರ್ತರಿಗೆ ಆಹಾರ ಕಿಟ್ ವಿತರಿಸಲಾಯಿತು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪತ್ರಕರ್ತರಿಗೆ ಕಿಟ್ ವಿತರಿಸಿ ಮಾತನಾಡಿ, ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಪತ್ರಕರ್ತರು ಕಾರ್ಯ ನಿರ್ವಸುತ್ತಿದ್ದಾರೆ. ಲಾಕ್‌ಡೌನ್, ಸೀಲ್‌ಡೌನ್ ಇದ್ದರೂ ತಮ್ಮ ಆರೋಗ್ಯದ ಕಡೆಗೆ ಲಕ್ಷ್ಯ ಕೊಡದೆ ವರದಿ ಮಾಡುತ್ತಾರೆ. ಹೀಗಾಗಿ ಅವರಿಗೆ ಮೈಸೂರು ನಾಗರೀಕ ವೇದಿಕೆಯಿಂದ ಆಹಾರ ಕಿಟ್ ನೀಡಲಾಗಿದೆ. ತಾಲೂಕು ಪತ್ರಕರ್ತರಿಗೂ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಆತಂಕ ಬೇಡ ಎಚ್ಚರವಿರಲಿ: ಕೋವಿಡ್ ನಿಯಂತ್ರಣಕ್ಕಾಗಿ ನಿರಂತರ ಹೋರಾಟ ನಡೆಯುತ್ತಿದೆ. ಸೋಂಕಿನಿಂದ ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕರು ಸರ್ಕಾರ ರೂಪಿಸುವ ಮಾರ್ಗಸೂಚಿ, ವಿಜ್ಞಾನಿಗಳು, ವೈದ್ಯರು ನೀಡುವ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅ.5ರಂದು ಸಾಂಕೇತಿಕವಾಗಿ ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಶಿಲಾನ್ಯಾಸದ ದಿನದಂದು ಎಲ್ಲರಿಗೂ ಅಧಿಕೃತವಾಗಿ ಆಹ್ವಾನ ನೀಡಿಲ್ಲ. ವಿವಿಧ ಸಾಧುಸಂತರು ಭಾಗವಹಿಸಬೇಕೆಂದು ಸಮಿತಿ ಸದಸ್ಯರು ಬಯಸಿದ್ದರು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ತಾವು ಭಾಗವಹಿಸುತ್ತಿಲ್ಲ. ಉಳಿದಂತೆ ಟ್ರಸ್ಟ್ ಮತ್ತು ಕೋರ್ ಕಮಿಟಿ ಸದಸ್ಯರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು ಇತರರಿದ್ದರು.