ಮುಧೋಳ: ಜನಪದವೇ ಜೀವನ ಎಂದು ಬದುಕು ನಡೆಸುತ್ತಿರುವ ಗ್ರಾಮೀಣ ಭಾಗದಲ್ಲಿರುವ ಜನಪದರು ಜೀವಂತ ವಿಶ್ವವಿದ್ಯಾಲಯ ಎಂದು ಸಾಹಿತಿ ಡಾ| ಸಿದ್ದು ದಿವಾಣ ಬಣ್ಣಿಸಿದರು. ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಸ್ಥಳೀಯ ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಐ.ಎಸ್. ಮಂಟೂರ ಗ್ರಾಮೀಣಾಭಿವೃದ್ಧಿ ಜನಸೇವಾ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬಾಗಲಕೋಟೆ ಇವರ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಸ್ಮರಣೋತ್ಸವದ ನಿಮಿತ್ತ ನಡೆದ ‘ಜನಪದ ವಾಣಿ’ ಸಾಂಸ್ಕೃತಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಜನಪದ ಎಂದರೆ ಸತ್ ಸಂಪ್ರದಾಯ, ಜನಪದಕ್ಕೆ ಜೀವಾಗಿರುವ ಜನಪದರನ್ನು ಗುರುತಿಸಿ ಹಾಗೂ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಮಾತನಾಡಿ, ಸ್ತುತಿ, ನಿಂದೆಗಳ ಮಧ್ಯೆ ಜನಪದವೇ ಜೀವನವೆಂದು ನಂಬಿರುವ ಗ್ರಾಮೀಣ ಪ್ರದೇಶದ ಜನಪದರು ಕಲೆ, ಸಾಹಿತ್ಯ, ಸಂಸ್ಕೃತಿ, ಸಂಸ್ಕಾರಗಳ ನಿಜವಾದ ಕಾವಲುಗಾರರು. ಜನಪದರು ಸಂಸ್ಕೃತಿಯ ಸಂಕೇತ ಎಂದು ಅಭಿಪ್ರಾಯಪಟ್ಟರು. ಹಿರಿಯ ಪಾರಿಜಾತ ಕಲಾವಿದ ಮಲ್ಲಿಕಾರ್ಜುನ ಮುದಕವಿ ಹಾಗೂ ಮೆಟಗುಡ್ಡದ ಅಪ್ಪಣ್ಣ ಶರಣರು ಆಧ್ಯಾತ್ಮಿಕ ವಿಷಯಗಳನ್ನು ವಿವರಿಸಿದರು. ಹಿರಿಯ ತಲೆಮಾರಿನ ಜನಪದ ಕಲಾವಿದೆ ನಿಂಬೆವ್ವ ಜಗದಾಳ ಅವರಿಗೆ ‘ಜನಪದ ಸಿರಿ-2018’ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಸ್.ಜಿ. ಪರಸನ್ನವರ ಡೊಳ್ಳು ನುಡಿಸಿ ಜನಪದವಾಣಿ ಸಮಾರಂಭವನ್ನು ಉದ್ಘಾಟಿಸಿದರು. ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ಯಾಮಲಾ ಲಕ್ಷ್ಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕೂರ ಗ್ರಾಮದ ಹೊಳಬಸಪ್ಪ ಬದಾಮಿ, ಚಿಮ್ಮಡದ ಯಲ್ಲಪ್ಪ ಜಬ್ಬರಕಿ, ಮೆಳ್ಳಿಗೇರಿಯ ರಾಯಪ್ಪ ಮುಗಳಿ, ಮುಗಳಖೋಡದ ತೇಜಸ್ವಿನಿ ಲಕ್ಷ್ಮೇಶ್ವರ ಇವರಿಂದ ಡೊಳ್ಳಿನ ಪದ, ಕುಳಲಿಯ ಯಲ್ಲಪ್ಪ ಬನಾಜಗೋಳ ಭಜನೆ, ಜಯಶ್ರೀ ನಡುವಿನಕೇರಿ ಸಂಗಡಿಗರಿಂದ ಚೌಡಕಿ ಪದ, ಸುಮವ್ವ ಮಠಪತಿ ಸಂಗಡಿಗರಿಂದ ಸಂಪ್ರದಾಯದಿಂದ ಮುಧೋಳದ ಗಂಗವ್ವ ನಾವಿ ಮುಂತಾದ ಕಲಾ ತಂಡಗಳಿಂದ ಜನಪದ ಧ್ವನಿ ಕೇಳಿ ಬಂದಿತು. ಚಿದಾನಂದ ಹುಂಡೇಕಾರ, ಶಿವು ಜೋಗಿ, ಸುರೇಶ ಹುಂಡೇಕಾರ, ರಮೇಶ ಎಸ್. ಇದ್ದರು.