Advertisement

ಜಾನಪದಕ್ಕಿದೆ ವಿಶಿಷ್ಟ ಇತಿಹಾಸ

03:10 PM Jul 24, 2018 | |

ಮಸ್ಕಿ: ಕನ್ನಡ ಸಾರಸ್ವತ ಲೋಕದಲ್ಲಿ ಜಾನಪದ ಸಾಹಿತ್ಯಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಆದರೆ ಆಧುನಿಕ ದೃಶ್ಯ
ಮಾಧ್ಯಮ ಭರಾಟೆಯಲ್ಲಿ ಹಳ್ಳಿ ಸೊಗಡಿನ ಜಾನಪದ ಸಂಸ್ಕೃತಿ ನಶಿಸಿ ಹೋಗುತ್ತಿದೆ ಎಂದು ರಾಯಚೂರು ಜಿಲ್ಲಾ ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಶರಣಪ್ಪ ಗೋನಾಳ ಕಳವಳ ವ್ಯಕ್ತಪಡಿಸಿದರು.

Advertisement

ಪಟ್ಟಣದ ಭ್ರಮರಾಂಬ ದೇವಸ್ಥಾನದ ಆವರಣದಲ್ಲಿ ನಡೆದ ನೂತನ ಮಸ್ಕಿ ತಾಲೂಕು ಕನ್ನಡ ಜಾನಪದ ಪರಿಷತ್‌ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾನಪದ ಹಾಡು, ಕಲೆ, ನೃತ್ಯ, ಆಚರಣೆಗಳಲ್ಲಿ ಹಳ್ಳಿ ಬದುಕಿನ ಸಂಸ್ಕೃತಿ, ಆಚಾರ ವಿಚಾರ, ಸೊಗಡು ಕಾಣಬಹುದಾಗಿದೆ. 

ಬೀಸುವ ಪದ, ಕುಟ್ಟುವ ಪದ, ಜೋಗುಳ ಪದ, ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿದಾಗ ಬೇಸರ ಕಳೆದುಕೊಳ್ಳಲು
ಹಂತಿ ಪದ ಮುಂತಾದ ಗೀತೆಗಳನ್ನು ಹಾಡುತ್ತಿದ್ದರು. ಮಹಿಳೆಯರು ಹಾಡುವ ಪದಗಳಲ್ಲಿ ಜಾನಪದ ಸಾಹಿತ್ಯ ಅಡಕವಾಗಿದೆ. ಜಾನಪದ ಲೋಕದಲ್ಲಿ ಬುಹುತೇಕ ಗ್ರಾಮೀಣ ಪ್ರದೇಶಗಳಲ್ಲಿನ ಬದುಕನ್ನು ಚಿತ್ರಿಸುವ ಹಾಡುಗಳ ಸಂಗ್ರಹವನ್ನು ಕಾಣಬಹುದು ಎಂದರು.

ಮಸ್ಕಿ ತಾಲೂಕು ಕನ್ನಡ ಜಾನಪದ ಸಾಹಿತ್ಯ ಪರಿಷತ್‌ ಉದ್ಘಾಟನೆಯಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಜಾನಪದ ಸಾಹಿತ್ಯ ಪರಿಷತ್‌ ಸಮಾವೇಶ ನಡೆಯಲಿ ಎಂದರು. ಕನ್ನಡ ಜಾನಪದ ಪರಿಷತ್‌ ಕಾರ್ಯಕ್ರಮಗಳಿಂದ ಹಳ್ಳಿಗಾಡಿನ ಪ್ರತಿಭೆಗಳು ಹೊರ ಬರುವಂತಾಗಲಿ ಎಂದರು.

ಶಾಸಕ ಪ್ರತಾಪಗೌಡ ಪಾಟೀಲ ಡೊಳ್ಳು ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಜಾಪ ಕಾರ್ಯಕ್ರಮಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು. ಆಧುನಿಕ ಬದುಕಿನ ಶೈಲಿಯಲ್ಲಿ ಇಂದಿನ ಯುವ ಪೀಳಿಗೆಗೆ ಜಾನಪದ ಲೋಕವು ಕಾಣದಂತಾಗಿರುವುದು ದೈರ್ದೈವದ ಸಂಗತಿಯಾಗಿದೆ ಎಂದರು.

Advertisement

ಶಿಕ್ಷಕ ವೆಂಕನಗೌಡ ವಟಗಲ್‌ ಮಾತನಾಡಿ, ಕನ್ನಡ ಜಾನಪದ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಚಿತ್ರಣವನ್ನು ಎಳೆಎಳೆಯಾಗಿ ಕಟ್ಟಿಕೊಡಲಾಗಿದೆ ಎಂದರು. ಜಾನಪದ ಸಾಹಿತ್ಯದ ಬಗ್ಗೆ ವಿವರಿಸಿದರು.

ಡಾ| ಶಿವಶರಣಪ್ಪ ಇತ್ಲಿ, ಮಹಾಂತೇಶ ಮಸ್ಕಿ ಮಾತನಾಡಿದರು. ಗಚ್ಚಿನಮಠದ ಶ್ರೀ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಜಾಪ ಮಸ್ಕಿ ಘಟಕ ಅಧ್ಯಕ್ಷ ನಾಗಭೂಷಣ ನಂದಿಹಾಳ, ಕಸಾಪ ಅಧ್ಯಕ್ಷ ಘನಮಠದಯ್ಯ, ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಪ್ರಕಾಶ ಶೇಠ ದಾರಿವಾಲ, ಶಿಕ್ಷಕ ಗುಂಡುರಾವ್‌, ಸುರೇಶ ಬಾಗಲವಾಡ, ಆದಪ್ಪ ಹೆಂಬಾ, ಬಸವರಾಜ ಬಾಗೋಡಿ, ನಾಗರಾಜ ಬ್ಯಾಳಿ, ಶಿವರಾಜ ಪ್ಯಾಟಾಳ, ಮನೋಹರ ಬುಳ್ಳಾ ಇತರರು ಇದ್ದರು. ನೂರಾರು ಜನ ಪಾಲ್ಗೊಂಡಿದ್ದರು. ಸ್ಥಳೀಯ ಕಲಾವಿದರಿಂದ ಡೊಳ್ಳಿನ ಪದ, ಜನಪದ ಗೀತೆ, ಭಜನೆ ಪದ, ಮುಂತಾದ ಕಾರ್ಯಕ್ರಮ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next