Advertisement

ಆಧುನೀಕರಣದಲ್ಲಿ ನಲಗುತ್ತಿದೆ ಜಾನಪದ: ಸ್ವಾಮಿ

04:49 PM Feb 09, 2021 | Team Udayavani |

ಬೀದರ: ಜಾನಪದ ಸಾಹಿತ್ಯದಲ್ಲಿ ವಿಜ್ಞಾನ, ಅಧ್ಯಾತ್ಮ ಹಾಗೂ ನೈತಿಕ ಮೌಲ್ಯ ಪ್ರತಿಪಾದನೆ ಇದೆ. ತಲೆಮಾರುಗಳಿಂದ ಕೊಡುಗೆಯಾಗಿ ಬಂದಿರುವ ಶ್ರೀಮಂತ ಜಾನಪದ ಸಂಸ್ಕೃತಿ ಇಂದು ಆಧುನೀಕರಣ ಭರಾಟೆಯಲ್ಲಿ ನಲಗುತ್ತಿದೆ. ಜಾನಪದ ಸಾಹಿತ್ಯ ಉಳಿದರೆ ನಾವು ಉಳಿದವು, ಜಾನಪದ ನಾಶವೇ ನಮ್ಮ ನಾಶ. ಸಂಘ-ಸಂಸ್ಥೆಗಳು, ಸಾಹಿತಿಗಳು ಉತ್ಕೃಷ್ಟ ಸಾಹಿತ್ಯ ಉಳಿಸುವ ಕಾರ್ಯ ಮಾಡಬೇಕಿದೆ ಎಂದು ಯುವ ಸಾಹಿತಿ ನಾಗಯ್ಯ ಸ್ವಾಮಿ ಹೇಳಿದರು.

Advertisement

ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಸೋಮವಾರ ಜಿಲ್ಲಾ ಜಾನಪದ ಪರಿಷತ್‌ ಹಮ್ಮಿಕೊಂಡಿರುವ ಜಿಲ್ಲಾ ದ್ವಿತೀಯ ಜಾನಪದ ಸಮ್ಮೇಳನದ ಜಾನಪದ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಯಿಂದ ವಿಶ್ವ ಜಾನಪದ ಸಾಹಿತ್ಯವಾಗಿ ಬೆಳೆದಿದೆ. ಮಕ್ಕಳಿಗೆ ಬಾಲ್ಯದಿಂದಲೇ ಜನಪದ ಸಂಸ್ಕೃತಿ ತಿಳಿಸಿಕೊಡುವ ಪ್ರಯತ್ನ ಪಾಲಕರು ಮಾಡಬೇಕು ಎಂದು ಸಲಹೆ ನೀಡಿದರು.

ಬ್ರಿಮ್ಸ್‌ ಪ್ರಾಧ್ಯಾಪಕಿ ಡಾ| ಶ್ರೇಯಾ ಮಹೇಂದ್ರಕರ್‌ ಮಾತನಾಡಿ, ಜನಪದ ಬಾಯಿಂದ ಬಾಯಿಗೆ ಪಾರಂಪರಿಕವಾಗಿ ಬಂದ ಪದಗಳಾಗಿವೆ. ಜನಪದದಲ್ಲಿ ಪುರಾಣ, ಗಾದೆ, ಒಗಟುಗಳು, ದೇವರ ಒಡಪುಗಳು ಕಲೆ ಇನ್ನಿತರ ಆಚರಣೆಗಳು ಬರುತ್ತವೆ. ಇದರ ಸೃಷ್ಟಿಕರ್ತ ಯಾರು ಎಂಬುದು ಗೊತ್ತಿಲ್ಲ. ಜನಪದದಲ್ಲಿ ಹೆಣ್ಣಿನ ಅಳಲು, ಭಾವನೆ, ಮಾನಸಿಕ ತಲ್ಲಣಗಳು, ಹಬ್ಬ ಹರಿದಿನಗಳ ಸಂಭ್ರಮ, ರೈತರ ಸುಗ್ಗಿ, ತವರು ಮನೆ, ಗೆಳತಿಯ ನೆನಪು, ಅಣ್ಣ-ತಮ್ಮ ಸಂಬಂಧ, ಹಳ್ಳಿಯ ಸೊಗಡು, ಬರುತ್ತವೆ. ಜಾನಪದ ಹಾಡುಗಳು ಸರಳ ರೀತಿಯಲ್ಲಿವೆ. ಕೇಳಲು ಮಧುರ, ಪ್ರಾಸಬದ್ಧವಾಗಿವೆ. ಎಲ್ಲಾ ಸಾಹಿತ್ಯದ ತಾಯಿಬೇರು ಜಾನಪದ ಸಾಹಿತ್ಯವಾಗಿದೆ ಎಂದರು.

ಸಾಹಿತಿ ಬಸವರಾಜ ಮೂಲಗೆ, ಶ್ರೀಕಾಂತ ಬಿರಾದಾರ, ಮಹಿಳಾ ಸಾಹಿತಿ ಶೈಲಜಾ ಹುಡಗೆ, ಸ್ವರೂಪಾ ಪಾಟೀಲ ಮಾತನಾಡಿದರು. ಮಲ್ಲಮ್ಮ ಸಂತಾಜಿ ಸ್ವಾಗತಿಸಿದರು. ಮೀರಾ ಖೇಣಿ ನಿರೂಪಿಸಿದರು. ಗಂಗಮ್ಮ ಫುಲೆ ವಂದಿಸಿದರು. ಈ ಸಂದರ್ಭದಲ್ಲಿ ರಮೇಶ ಸಲಗರ, ಲಕ್ಷ್ಮಣರಾವ ಕಾಂಚೆ, ಶಿವರಾಜ ಮೇತ್ರೆ, ಸಂಗಮೇಶ್ವರ ಮುರ್ಕೆ, ನಾಗಮ್ಮ ಭಂಗರಗಿ, ಓಂಕಾರ ಪಾಟೀಲ, ಅರವಿಂದ ಕುಲಕರ್ಣಿ, ರವಿದಾಸ ಕಾಂಬಳೆ, ಪ್ರಾರ್ಥನಾ ಇನ್ನಿತರರು ಸ್ವರಚಿತ ಕವನ ವಾಚನ ಮಾಡಿದರು.

ಜಾನಪದ ಶ್ರೀಮಂತಿಕೆಗೆ ಸ್ತ್ರೀಯರ ಕೊಡುಗೆ ಅನನ್ಯ 

Advertisement

ಜಾನಪದ ಕಲೆ ಮತ್ತು ಸಂಸ್ಕೃತಿ ಶ್ರೀಮಂತಿಕೆಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ಯುವ ಸಾಹಿತಿ ಡಾ| ಮಹೇಶ್ವರಿ ಹೇಡೆ ಅಭಿಪ್ರಾಯಪಟ್ಟರು.  ನಗರದ ಕರ್ನಾಟಕ ಸಾಹಿತ್ಯದ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾ ಘಟಕ ಹಮ್ಮಿಕೊಂಡಿರುವ ಜಿಲ್ಲಾ ದ್ವಿತೀಯ ಜಾನಪದ ಸಾಹಿತ್ಯ ಸಮ್ಮೇಳನದ ಪ್ರಥಮ ಗೋಷ್ಠಿಯಲ್ಲಿ “ಜನಪದ ಸಂಸ್ಕೃತಿ ಹಾಗೂ ಮಹಿಳೆ’ ಕುರಿತು ಮಾತನಾಡಿದ ಅವರು, ಮಹಿಳೆಯರು ಜನಪದ ಹಾಡುಗಳ ಮೂಲಕ ಮನೆ ನಿರ್ವಹಣೆ ಜತೆಗೆ ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದರು. ಗ್ರಾಮೀಣ ಸಂಸ್ಕೃತಿಯನ್ನು ನಿಜವಾದ ಜಾನಪದ ಸಂಸ್ಕೃತಿಯನ್ನಾಗಿಸಿದ ನಮ್ಮ ಪೂರ್ವಜರ ಬದುಕನ್ನು ಇಂದಿನ ಯುವ ಪೀಳಿಗೆ ಅನುಕರಿಸಬೇಕಿದೆ ಎಂದರು.

ಸಾಹಿತಿ ಪಾರ್ವತಿ ಸೊನಾರೆ ಮಾತನಾಡಿದರು. ಹಿರಿಯ ಸಾಹಿತಿ ವಿ.ಎಂ. ಡಾಕುಳಗಿ ಅಧ್ಯಕ್ಷತೆ ವಹಿಸಿದ್ದರು. ಬಸವ ದಳದ ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ಸಂಸ್ಕೃತಿ ಚಿಂತಕ ಸಂಜೀವರೆಡ್ಡಿ, ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಚನ್ನಪ್ಪ ಸಂಗೊಳಗಿ, ಮದರ್‌ ತೇರೆಸಾ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಸಂಜೀವಕುಮಾರ ಸ್ವಾಮಿ ಕಾರ್ಯಕ್ರಮದಲ್ಲಿದ್ದರು. ಉಪನ್ಯಾಸಕಿ ಡಾ| ಮಹಾನಂದಾ ಮಡಕಿ ಸ್ವಾಗತಿಸಿದರು. ಡಾ| ಸುನಿತಾ ಕೂಡ್ಲಿಕರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next