Advertisement

ಒಲಿಂಪಿಕ್ಸ್‌ನಲ್ಲಿ ಜಾನಪದ ನೃತ್ಯ ವೈಭವ

12:47 PM Feb 04, 2017 | |

ಧಾರವಾಡ: ಝೇಂಕರಿಸುತ್ತ ಶಬ್ದ ಮಾಡುವ ಕಹಳೆಗಳು… ಬುಡಕಟ್ಟು ಶೈಲಿಯಲ್ಲಿಯೇ ನಗಾರಿ ಬಡಿಯುವ ಯುವಕರು…, ತಲೆಯ ಮೇಲೆ ನಂದಿಕೋಲು ಇಟ್ಟುಕೊಂಡು ಕುಣಿಯುವ ಕಲಾವಿದರು…, ಎಲ್ಲದಕ್ಕೂ ಕಳಸವಿಟ್ಟಂತೆ ಧಾರವಾಡದ ಪ್ರಸಿದ್ಧ ಕಲೆ ಕೆಲಗೇರಿ ಜಗ್ಗಲಿಗೆ ಮೇಳದ ಕುಣಿತ…ಒಂದು ಜಾನಪದ ಲೋಕವೇ ಸೃಷ್ಟಿಯಾದ ಅನುಭವ… 

Advertisement

ಇಲ್ಲಿನ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಜಾನಪದ ಜಾತ್ರೆ ಕಾರ್ಯಕ್ರಮವು ಕ್ರೀಡಾಪಟುಗಳು ಮತ್ತು ನೆರೆದಿದ್ದ ವಿದ್ಯಾರ್ಥಿಗಳ ಎದುರು ಜಾನಪದ ದೃಶ್ಯಕಾವ್ಯ ವೈಭವವನ್ನೇ ತಂದು ನಿಲ್ಲಿಸಿಬಿಟ್ಟಿತು. ನಗಾರಿ, ಜಗ್ಗಲಗಿ, ಕಹಳೆ ಮತ್ತು ತಮಟೆ ಸದ್ದು ಇಡೀ ಕ್ರೀಡಾಂಗಣವನ್ನು ಆವರಿಸಿಕೊಂಡು ನೋಡುಗರ ಮೈ ನವಿರೇಳಿಸುವಂತೆ ಮಾಡಿತು. ಜಾನಪದ ಕಲಾವಿದರ ಕುಣಿತ, ವಾದ್ಯ ಬಾರಿಸುವ ಪರಿಗಳು, ಹಾಕುವ ಹೆಜ್ಜೆ, ಹೊರ ಹೊಮ್ಮುವ ಸದ್ದಿಗೆ ಎಲ್ಲರೂ ಬೆರಗಾಗಿದ್ದು ಮಾತ್ರ ಸತ್ಯ. 

ನಾಗರಾಜಮೂರ್ತಿಗೆ ಜೈ: ಜಾನಪದ ಜಾತ್ರೆ ಮತ್ತು ಜಾನಪದ ಕಲಾ ಮೆರವಣಿಗೆ ಮಾಡಿ ರಾಜ್ಯಾದ್ಯಂತ ಹೆಸರು ಮಾಡಿರುವ ರಂಗಕರ್ಮಿ ನಾಗರಾಜಮೂರ್ತಿ ಅವರು, ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಈ ಬಾರಿ 550 ಜಾನಪದ ಕಲಾವಿದರನ್ನು ಒಂದೇ ಸಮಯಕ್ಕೆ ಕುಣಿಸುವ ಮೂಲಕ ವಿಭಿನ್ನ ಜಾನಪದ ಲೋಕವನ್ನೇ ಧರೆಗೆ ಇಳಿಸಿದ್ದು ವಿಶೇಷವಾಗಿತ್ತು. ಅವರ ಈ ಜಾನಪದ ಕಾರ್ಯಕ್ರಮ ನೋಡಿದ ಜನರೆಲ್ಲರೂನಾಗರಾಜ ಮೂರ್ತಿ ಅವರಿಗೆ ಚಪ್ಪಾಳೆ  ಮೂಲಕ ಅಭಿನಂದಿಸಿದರು.

ಒಲಿಂಪಿಕ್ಸ್‌ ಉದ್ಘಾಟನೆ-ಘೋಷಣೆ
ಧಾರವಾಡದಲ್ಲಿ ಆರಂಭಗೊಂಡ ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಕೇಸರಿ ಬಿಳಿ ಹಸಿರು ಬಣ್ಣದ ಬಲೂನ್‌ಗಳನ್ನು ಹಾರಿ ಬಿಡಲಾಯಿತು.

ಮುಖ್ಯಮಂತ್ರಿಗಳು ಸಂಪ್ರದಾಯದಂತೆ, ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟ-2017 ಉದ್ಘಾಟಿಸಲ್ಪಟ್ಟಿದೆ ಎಂದು ಘೋಷಿಸಿದರು. ರಾಜ್ಯ ಒಲಿಂಪಿಕ್ಸ್‌ ಧ್ವಜಾರೋಹಣ ನೆರವೇರಿಸಿದರು. 12 ಕ್ರೀಡಾ ತಂಡಗಳು ಪಥ ಸಂಚಲನ ನಡೆಸಿ, ಮುಖ್ಯಮಂತ್ರಿಗಳಿಗೆ ಕ್ರೀಡಾವಂದನೆ ಸಲ್ಲಿಸಿದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next