ಉಡುಪಿ: ಜನಪದ ದಾಖಲೀಕರಣಕ್ಕೆ ಗ್ರಾಮೀಣ ಸೊಗಡಿನ ಸಂಸ್ಕೃತಿ ಬಿಂಬಿಸುವ ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹಿರಿಯ ಲೇಖಕ ಸುಮುಖಾನಂದ ಜಲವಳ್ಳಿ ಆಶಯ ವ್ಯಕ್ತಪಡಿಸಿದರು.
ಎಂಜಿಎಂ ಸಂಧ್ಯಾ ಕಾಲೇಜು ವತಿಯಿಂದ ಶನಿವಾರ ನೂತನ ರವೀಂದ್ರ ಮಂಟಪ ಸಭಾಂಗಣದಲ್ಲಿ ಜರಗಿದ ಕಾಲೇಜಿನ ಬುಲೆಟಿನ್ “ದಿ ಹಾರಿಝಾನ್’ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ ಕೂಜಳ್ಳಿ ಅವರ “ಕದಂಬ ವೃಕ್ಷ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಂಜಿಎಂ ಕಾಲೇಜು ಟ್ರಸ್ಟ್‌ನ ಅಧ್ಯಕ್ಷ ಟಿ. ಸತೀಶ್ ಯು. ಪೈ ಅವರು ಕಾಲೇಜಿನ ಬುಲೆಟಿನ್ ಮತ್ತು ಕದಂಬ ವೃಕ್ಷ ಕೃತಿ ಲೋಕರ್ಪಣೆ ಮಾಡಿದರು.
ಕದಂಬ ವೃಕ್ಷ ಕೃತಿಯಲ್ಲಿ ಜನಪದ ಸಂಸ್ಕೃತಿ, ಗ್ರಾಮೀಣ ಬದುಕಿನ ಚಿತ್ರಣವನ್ನು ಲೇಖಕರು ಅದ್ಭುತವಾಗಿ ಚಿತ್ರಿಸಿದ್ದಾರೆ. ಜನಪದ ಸಂಸ್ಕೃತಿಯನ್ನು ದಾಖಲಿಸುವ ಕಳಕಳಿ ಈ ಕೃತಿಯಲ್ಲಿ ಕಂಡು ಬರುತ್ತದೆ. ಕೃತಿಯಲ್ಲಿ ಕೃಷಿ ಬದುಕಿನ ನೋಟವನ್ನು ಸ್ಥೂಲವಾಗಿ ಚಿತ್ರಿಸಲಾಗಿದೆ ಎಂದು ಜಲವಳ್ಳಿ ಕೃತಿಯ ಬಗ್ಗೆ ಸಮಗ್ರ ವಿಶ್ಲೇಷಣೆ ಮಾಡಿದರು.
ಲೇಖಕ ಸಂಸ್ಕೃತಿ ಸುಬ್ರಹ್ಮಣ್ಯ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯ ಜ್ಞಾನ ಪಡೆಯಲು ಹೆಚ್ಚು ಪುಸ್ತಕಗಳನ್ನು ಓದಬೇಕು. ಕದಂಬ ವೃಕ್ಷ ಕೃತಿಯನ್ನು ಎಲ್ಲ ವಿದ್ಯಾರ್ಥಿಗಳು ಆಸಕ್ತಿಯಿಂದ ಓದುವಂತೆ ಸಲಹೆ ನೀಡಿದರು. ಎಂಜಿಎಂ ಕಾಲೇಜು ಪ್ರೊ| ಲಕ್ಷ್ಮೀನಾರಾಯಣ ಕಾರಂತ್ ಮಾತನಾಡಿ, ಕೃತಿಯಲ್ಲಿ ಹಳ್ಳಿ ಬದುಕಿನ ಸುಂದರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಟಿ. ಮೋಹನದಾಸ್ ಪೈ ಕೌಶಲ ಸಂಸ್ಥೆ ನಿರ್ದೇಶಕ ಟಿ. ರಂಗ ಪೈ, ಆಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ ಮಾತನಾಡಿದರು.
ಸುಮುಖಾನಂದ ಜಲವಳ್ಳಿ, ಸಂಸ್ಕೃತಿ ಸುಬ್ರಹ್ಮಣ್ಯ ಅವರನ್ನು ಟಿ. ಸತೀಶ್ ಯು. ಪೈ ಅವರು ಸಮ್ಮಾನಿಸಿದರು. ಡಾ| ದೇವಿದಾಸ ನಾಯ್ಕ ಕೂಜಳ್ಳಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸತೀಶ್ ನಾಯ್ಕ ನಿರೂಪಿಸಿದರು.