ಉಡುಪಿ: ಪಾಶ್ಚಾತ್ಯ ಸಂಸ್ಕೃತಿಯತ್ತ ಮಾರುಹೋಗುತ್ತಿರುವ ಈ ಆಧುನಿಕ ಯುಗದಲ್ಲಿ ನಮ್ಮ ಜನಪದ ಕಲೆ- ಸಂಸ್ಕೃತಿಗಳನ್ನು ಉಳಿಸಿ- ಬೆಳೆಸುವ ಅಗತ್ಯವಿದೆ. ಯುವ ಜನಾಂಗಕ್ಕೆ ಇವುಗಳ ಕುರಿತುತಿಳಿಸಿಕೊಡುವುದರಿಂದ ಇಂತಹ ವಿಶಿಷ್ಟ ಕಲೆಗಳನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಲು ಸಾಧ್ಯ ಎಂದು ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ| ಕುಸುಮಾ ಕಾಮತ್ ಹೇಳಿದರು.
ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ವಿವಿ ಇದರ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಹೊಸದಾಗಿ ಆರಂಭಿಸಲಾದ ಪ್ರಾದೇಶಿಕ ಜನಪದ ಕಲೆಗಳ ಕುರಿತು ಸರ್ಟಿಫಿಕೇಟ್ ಕೋರ್ಸನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಎಂಜಿಎಂ ಕಾಲೇಜಿನ ಸಂಬಂಧ ಹಿಂದಿನಿಂದಲೂ ಇತ್ತು. ಈಗ ಈ ಸಂಬಂಧ ಇನ್ನಷ್ಟು ಬಲವರ್ಧನೆಯಾಗಿದೆ ಎಂದರು.
ಜನಪದ ಕಲೆಗಳ ಕೋರ್ಸ್‌ಗಳನ್ನು ಬಹಳ ಹಿಂದೆಯೇ ಆರಂಭಿಸಲು ಕು. ಶಿ. ಹರಿದಾಸ್ ಭಟ್ ಚಿಂತಿಸಿದ್ದರು. ಈಗ 33 ವರ್ಷಗಳ ಹಿಂದಿನ ಕನಸು ನನಸಾಗುತ್ತಿದೆ. ಪಠ್ಯಕ್ರಮದಲ್ಲಿ ಪ್ರಾದೇಶಿಕ ಜನಪದ ಕಲೆಗಳ ಉಗಮ ಮತ್ತು ಬೆಳವಣಿಗೆ, ಭೂತಾರಾಧನೆ, ಸಿರಿ, ನಾಗಾರಾಧನೆ, ಜನಪದ ನೃತ್ಯ ಮತ್ತು ಆಟಗಳ ಕುರಿತ ಪ್ರಾಯೋಗಿಕವಾದ ಶಿಕ್ಷಣವನ್ನು ನೀಡಲಾಗುವುದು ಎಂದು ಕೇಂದ್ರದ ಸಹ ಸಂಯೋಜಕ ಡಾ| ಅಶೋಕ್ ಆಳ್ವ ಹೇಳಿದರು.
ಕೇಂದ್ರದ ಕಾಲೇಜು ಪರ ಸಂಯೋಜಕ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಹೊಸತನ ಮೂಡಿಸುವುದರ ಜತೆಗೆ ಅಧ್ಯಯನ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ನಮ್ಮ ಉದ್ದೇಶ ಎಂದರು.
ಮತ್ತೋರ್ವ ಸಂಯೋಜಕ ಪುತ್ತಿ ವಸಂತ ಕುಮಾರ್ ಉಪಸ್ಥಿತರಿದ್ದರು. ವೆಂಕಟೇಶ್ ಸ್ವಾಗತಿಸಿ, ಲಚ್ಚೇಂದ್ರ ವಂದಿಸಿದರು. ಸುಲೋಚನಾ ಕಾರ್ಯಕ್ರಮ ನಿರ್ವಹಿಸಿದರು.