ಗದಗ: ದೇಶದಲ್ಲಿ ಅನಾದಿ ಕಾಲದಿಂದಲೂ ಜಾನಪದ ನೃತ್ಯ, ಸಂಗೀತ ಕಲೆಗಳು ನಿರಂತರವಾಗಿ ಮುನ್ನಡೆಯುತ್ತಿವೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಜಾನಪದ ಕಲಾವಿದರು ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಹೇಳಿದರು.
ಇತ್ತೀಚೆಗೆ ತಾಲೂಕಿನ ಎಚ್.ಎಸ್. ವೆಂಕಟಾಪೂರ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ನಡೆದ ಜಾನಪದ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಚೀನ ಭಾರತ ಇತಿಹಾಸದಲ್ಲಿ ಹರಪ್ಪ ಮತ್ತು ಮೆಹೆಂಜೋದಾರೋ ಎಂಬ ಸಿಂಧು ನಾಗರಿಕತೆಯ ಬಯಲಿನ ಸಂಸ್ಕೃತಿಯಲ್ಲೂ ಸಂಜೆ ವೇಳೆ ಸಭೆ, ಸಮಾರಂಭ ಮತ್ತು ಕ್ರೀಡಾಕೂಟಗಳು ನಡೆಯುತ್ತಿದ್ದವು. ಕ್ರೀಡೆಯಲ್ಲಿ ಗೆದ್ದ ಸವಿನೆನಪಿಗಾಗಿ ಸಾಂಸ್ಕೃತಿಕ ಕಾರ್ಯಗಳೊಂದಿಗೆ ವಿಜಯೋತ್ಸವವನ್ನೂ ಆಚರಿಲಾಗುತ್ತಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖವಿದೆ. ಅದರಂತೆ ಸಿಂಧು ಎಂಬ ಪದವೂ ಕಾಲಕ್ರಮೇಣ ಹಿಂದೂ ಆಗಿ ಬದಲಾಗಿದೆ ಎಂದು ಹೇಳಿದರು.
ಬೆಳಹೊಡ ಗ್ರಾಪಂ ಬಸನಗೌಡ ಗೌಡರ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮದಿಂದ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ. ಇಂದಿನ ಒತ್ತಡಮ ಜೀವನದಿಂದ ಅನೇಕ ಕಾಯಿಲೆಗಳಿಗೆ ಒಳಗಾಗುತ್ತಿದ್ದೇವೆ. ಅದರಿಂದ ಹೊರಬರಲು ಹಾಗೂ ನೆಮ್ಮದಿಯ ಜೀವನಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದರು.
ಬೆಳಹೋಡ ಗ್ರಾಪಂ ಪಿಡಿಒ ಅನಿತಾ ಎಸ್. ಕಟಗಿ ಮಾತನಾಡಿದರು. ಎಚ್.ಎಸ್. ವೆಂಕಟಾಪೂರ ಗ್ರಾಮದ ವಾಲ್ಮೀಕಿ ಸಮಾಜದ ಹಿರಿಯರಾದ ಈರಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಸದಸ್ಯರಾದ ರುದ್ರಗೌಡ ಪಾಟೀಲ, ಶ್ವೇತಾ ಹುಡೇದ, ಸಹಕಾರಿ ಸೇವಾ ಸಂಘ ವೆಂಕಟಾಪೂರದ ಸದಸ್ಯರಾದ ಯಲ್ಲವ್ವ ಹುಡೇದ, ಶಾಂತವ್ವ ಪಾಟೀಲ, ಅಂದಪ್ಪ ಗೋಶಲ್ಯನವರ, ಯಲ್ಲಪ್ಪ ಹುಡೇದ, ರೇಖಾ ಅಂಗಡಿ, ಚನ್ನಬಸಪ್ಪ ನರೇಗಲ್ಲ, ಬಿ.ಕೆ.ಗೌಡರ, ಸುಭಾಸ ಅಣ್ಣಿಗೇರಿ, ಗುರಪ್ಪ ಹೂಗಾರ, ಬಸವ್ವ ಅಂಗಡಿ, ಬಸನಗೌಡ ಗೌಡರ, ಗಂಗಾಧರ ಹಿರೇಮಠ, ನಗರಸಭೆ ಸದಸ್ಯೆ ಲಕ್ಷ್ಮೀ ಅನಿಲ ಸಿದ್ದಮ್ಮನಹಳ್ಳಿ ಭಾಗವಹಿಸಿದ್ದರು.