Advertisement

19ಕ್ಕೆ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕಿಸಿ

09:13 PM Jan 10, 2020 | Lakshmi GovindaRaj |

ಚಾಮರಾಜನಗರ: ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಲ್ಲಿ ಮೊದಲ ಹಂತದ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮ ಜ.19ರಂದು ನಡೆಯಲಿದೆ. 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕಿಸಿ, ಶೇ.100ರಷ್ಟು ಗುರಿ ಸಾಧನೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಕಳೆದ ಬಾರಿ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಶೇ.103ರಷ್ಟು ಯಶಸ್ವಿಯಾಗಿದೆ. ಈ ಬಾರಿ ಪೋಲಿಯೋ ಲಸಿಕೆ ಹಾಕುವುದನ್ನು ಹಗುರವಾಗಿ ಪರಿಗಣಿಸಬಾರದು. ಜಿಲ್ಲೆಯಲ್ಲಿ ಆಗ ತಾನೇ ಹುಟ್ಟಿದ ಮಗುವಿನಿಂದ 5 ವರ್ಷದವರೆಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಪೋಲಿಯೋ ಹನಿ ಹಾಕಿಸಬೇಕು. ಮಕ್ಕಳ ಪೋಷಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಲಸಿಕೆಯಿಂದ ಹೊರಗುಳಿಯದಂತೆ ಎಚ್ಚರವಹಿಸಿ: 2014ರಲ್ಲಿಯೇ ಭಾರತವನ್ನು ಪೋಲಿಯೋ ಮುಕ್ತ ದೇಶವಾಗಿ ಗುರುತಿಸಲಾಗಿದೆ. ಜಿಲ್ಲೆಯಲ್ಲಿ ವಲಸಿಗರು ಹೆಚ್ಚಾಗಿ ನೆಲೆಸಿರುವ ಸ್ಥಳಗಳಲ್ಲಿ ಹಾಗೂ ಕಾಡಂಚಿನ ಬುಡಕಟ್ಟು ಹಾಡಿಗಳನ್ನು ಗುರುತಿಸಿ, ಪೋಲಿಯೊ ಲಸಿಕೆಯಿಂದಾಗುವ ಉಪಯೋಗದ ಬಗ್ಗೆ ಅರಿವು ಉಂಟು ಮಾಡುವ ಕಾರ್ಯ ನಡೆಯಬೇಕಿದೆ. ಯಾವುದೇ ಮಗು ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಜಾಥಾಗಳ ಮೂಲಕ ಅರಿವು ಮೂಡಿಸಿ: ಜಿಲ್ಲೆಯಿಂದ ಇತರ ರಾಜ್ಯಗಳಿಗೆ ಕೂಲಿಗಾಗಿ ಹೊರ ಹೋಗುವ ಕುಟುಂಬಗಳ ಮಾಹಿತಿ ಪಡೆದು, ಅಂತಹ ಮಕ್ಕಳಿಗೂ ಲಸಿಕೆ ನೀಡುವ ಕೆಲಸ ಆಗಬೇಕು. ಜನರಲ್ಲಿ ಈ ಬಗ್ಗೆ ಹೆಚ್ಚು ಪ್ರಚಾರ ನೀಡಿ, ಜಾಥಾಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳು ಆಗಬೇಕು. ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಅಂಗನವಾಡಿ, ಅಶಾ ಕಾರ್ಯಕರ್ತೆಯರು ಸೇರಿದಂತೆ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಲ್ಲಾ ಇಲಾಖೆಗಳು ಕಾರ್ಯ ನಿರ್ವಹಿಸಲಿ: ಜಿಲ್ಲೆಯಲ್ಲಿ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಜನವರಿ 19ರಂದು ಹಮ್ಮಿಕೊಳ್ಳಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ರಾಷ್ಟ್ರೀಯ ಪಲ್ಸ್‌ ಪೋಲಿಯೊ ಕಾರ್ಯಕ್ರಮವು ಅತ್ಯಂತ ಮಹತ್ವದಾಗಿದೆ. ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಎಂದು ಹೇಳಿದರು.

Advertisement

ನೆರೆ ದೇಶಗಳಲ್ಲಿ ಪೋಲಿಯೋ ಸಮಸ್ಯೆ ಇನ್ನೂ ಜೀವಂತ: ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಭಾರತ ವಲಯದ ಪ್ರಾದೇಶಿಕ ತಂಡದ ಮುಖ್ಯಸ್ಥ ಡಾ.ಆಸಿಸ್‌ ಸತ್ಪತಿ ಮಾತನಾಡಿ, ಭಾರತ ಪಲ್ಸ್‌ ಪೋಲಿಯೋ ಮುಕ್ತ ರಾಷ್ಟ್ರವಾಗಿ ಘೋಷಣೆಯಾಗಿದ್ದರೂ, ನೆರೆಯ ದೇಶಗಳಲ್ಲಿ ಪೋಲಿಯೋ ಸಮಸ್ಯೆ ಇನ್ನೂ ಜೀವಂತವಾಗಿದೆ. ಆದ್ದರಿಂದ ವೈರಾಣುಗಳು ಪ್ರಯಾಣಿಕರು, ವಲಸಿಗರ ಮೂಲಕ ದೇಶಕ್ಕೆ ಬರುವ ಸಾಧ್ಯತೆ ಇದೆ. ಹೀಗಾಗಿ ಪಲ್ಸ್‌ ಪೋಲಿಯೋ ಲಸಿಕೆಯಿಂದ ಯಾವುದೇ ಮಗು ಹೊರಗುಳಿಯದಂತೆ ನೋಡಿಕೊಳ್ಳಲು ಶ್ರಮಿಸಲಾಗುತ್ತಿದೆ. ವಿಶೇಷವಾಗಿ ವಲಸೆ ಬಂದ ಮಕ್ಕಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎನ್‌ಪಿಎಸ್‌ಪಿ (ನ್ಯಾಷನಲ್‌ ಪೋಲಿಯೊ ಸರ್ವಿಲಿಯೆನ್ಸ್‌ ಪ್ರೋಗ್ರಾಮ್‌) ಯ ಸರ್ವಿಲಿಯನ್ಸ್‌ ಮೆಡಿಕಲ್‌ ಆಫೀಸರ್‌ ಡಾ. ಸುಧೀರ್‌ ನಾಯಕ್‌ ಅವರು ಪಲ್ಸ್‌ ಪೋಲಿಯೋ ಕುರಿತು ಪವರ್‌ ಪಾಯಿಂಟ್‌ ಮೂಲಕ ಪ್ರಾತ್ಯಕ್ಷಿಕೆ ನೀಡಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ, ಜಿಲ್ಲಾಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್‌, ಡಾ.ಮಹೇಶ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next