ರಾಮನಗರ: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯ ಟಿಕೆಟ್‌ಗಾಗಿ ಜೆಡಿಎಸ್- ಮಾಜಿ ಸಚಿವ ಯೋಗೇಶ್ವರ್ ನಡುವೆ ಹಗ್ಗಜಗ್ಗಾಟ ಮುಂದುವರಿದಿದ್ದು, ಕ್ಷೇತ್ರವನ್ನು ಜೆಡಿಎಸ್‌ಗೇ ಉಳಿಸಿಕೊಂಡು ನಿಖಿಲ್ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ಆಗ್ರಹಿಸಿ ಮಂಗಳವಾರ ಶಕ್ತಿಪ್ರದರ್ಶನ ನಡೆಸಲು ಜೆಡಿಎಸ್ ಮುಖಂಡರು ನಿರ್ಣಯ ಕೈಗೊಂಡಿದ್ದಾರೆ.
ರವಿವಾರ ಸಂಜೆ ಚನ್ನಪಟ್ಟಣದ ಹೊರ ವಲಯದಲ್ಲಿ ಅನೌಪಚಾರಿಕ ಸಭೆ ನಡೆಸಿದ ಚನ್ನಪಟ್ಟಣ ಜೆಡಿಎಸ್ ಮುಖಂಡರು, ಕುಮಾರಸ್ವಾಮಿ ಅವರು ಗೆದ್ದಿರುವ ಕ್ಷೇತ್ರವನ್ನು ನಾವೇ ಉಳಿಸಿಕೊಳ್ಳೋಣ. ನಮಗೆ ಸೋಲು ಗೆಲುವಿಗಿಂತ ಪಕ್ಷ ಸಂಘಟನೆ ಮುಖ್ಯ ಎಂದರು.
ನಿಖಿಲ್ ಅವರನ್ನೇ ಕಣಕ್ಕಿಳಿಸಬೇಕು ಎಂಬುದು ನಮ್ಮ ಮೊದಲ ಆದ್ಯತೆ. ಅವರನ್ನು ಕಣಕ್ಕಿಳಿಸಲಿಲ್ಲ ಎಂದಾದಲ್ಲಿ ಪಕ್ಷದ ಯಾವುದೇ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೂ ನಾವು ಚುನಾವಣೆಯಲ್ಲಿ ಒಗ್ಗೂಡಿ ಕೆಲಸ ಮಾಡುತ್ತೇವೆ. ಸಿ.ಪಿ.ಯೋಗೇಶ್ವರ್ ಅವರ ವಿಧಾನಪರಿಷತ್ ಸದಸ್ಯತ್ವದ ಅವಧಿ ಇನ್ನು 2 ವರ್ಷವಿರುವುದರಿಂದ ಜೆಡಿಎಸ್‌ಗೆ ಬಿಟ್ಟುಕೊಡುವ ಮೂಲಕ ಮೈತ್ರಿ ಧರ್ಮ ಪಾಲನೆಗೆ ಮುಂದಾಗಬೇಕು ಎಂದರು.
ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ನಾಗರಾಜು ಮತ್ತಿತರರಿದ್ದರು.