Advertisement

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

12:30 AM May 25, 2024 | Team Udayavani |

ಬೆಳ್ತಂಗಡಿ: ಚಾರ್ಮಾಡಿ ಘಾಟಿ ಸಹಿತ ಗಡಾಯಿಕಲ್ಲು, ಪಶ್ಚಿಮ ಘಟ್ಟದುದ್ದಕ್ಕೂ ಶುಕ್ರವಾರ ಮೋಡ ಕವಿದ ವಾತಾವರಣದ ನಡುವೆ ದಿನವಿಡೀ ಮಂಜಿನ ವಾತಾವರಣ ಕಂಡು ಬಂದಿತು.

Advertisement

ಚಾರ್ಮಾಡಿ ಘಾಟಿ ಪರಿಸರದ 25 ಕಿ.ಮೀ. ವ್ಯಾಪ್ತಿಯಲ್ಲಿನ ಮಂಜು ಮುಸುಕಿದ ವಾತಾವರಣದ ಹಿನ್ನೆಲೆ ವಾಹನ ಸವಾರರು ಫಾಗ್‌ ಲ್ಯಾಂಪ್‌ ಹಾಗೂ ಹೆಡ್‌ಲೈಟ್‌ ಬಳಸಿ ವಾಹನ ಚಲಾಯಿಸಿದರು. ಬೆಳಗ್ಗಿನಿಂದಲೇ ಭಾರಿ ಮಂಜು ಕವಿದ ವಾತಾವರಣವಿತ್ತು.

ಒಂದು ವಾರದಿಂದ ಘಾಟಿ ಪರಿಸರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಶುಕ್ರವಾರವೂ ಆಗಾಗ ತುಂತುರು ಮಳೆಯಾಗಿದೆ. ಪ್ರಸ್ತುತ ಶಾಲಾ ರಜಾ ದಿನಗಳಾದ ಕಾರಣ ಅನೇಕ ಪ್ರಯಾಣಿಕರು ಘಾಟಿಯಲ್ಲಿ ಸಂಚರಿಸುವುದು ಕಂಡುಬಂದಿತು.

ಚಿಕ್ಕಮಗಳೂರು ವಿಭಾಗದಲ್ಲಿ ಘಾಟಿಯ ತಡೆಗೋಡೆ ಕಟ್ಟುವ ಕಾಮಗಾರಿ ಪೂರ್ಣಗೊಳ್ಳದೆ ಅಲ್ಲಲ್ಲಿ ಕೆಲವು ಅಪಾಯಕಾರಿ ಜಾಗಗಳಿವೆ. ಈ ಪರಿಸರದಲ್ಲಿ ಅತಿ ಹೆಚ್ಚಿನ ಮಂಜು ಕವಿದಿತ್ತು. ಇಲ್ಲೆಲ್ಲ ತೀರಾ ಎಚ್ಚರಿಕೆಯಿಂದ ವಾಹನಗಳನ್ನು ಮುನ್ನಡೆಸಬೇಕಾಗಿದೆ.

ಕಾಮಗಾರಿಗೆ ಆಧ್ಯತೆ
ದ. ಕ. ಘಾಟಿ ವಿಭಾಗದ ವ್ಯಾಪ್ತಿಯಲ್ಲಿ ಮಳೆಗಾಲದ ನಿರ್ವಹಣೆ ಕಾಮಗಾರಿ ಆರಂಭವಾಗಿದ್ದು ರಸ್ತೆಯ ಇಕ್ಕೆಲಗಳ ಚರಂಡಿಗಳ ಹೂಳೆತ್ತುವ ಕೆಲಸ ನಡೆಯುತ್ತಿದೆ. ಜೆಸಿಬಿ ಮೂಲಕ ಕಾಮಗಾರಿ ನಡೆಯುತ್ತಿದ್ದು ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಘಾಟಿಯ ಕೆಲವು ಭಾಗಗಳಲ್ಲಿ ರಸ್ತೆಯು ಜಾರುತ್ತಿದೆ. ರಸ್ತೆ ಬದಿಯಲ್ಲಿ ಮಣ್ಣು ಕೆಸರು ತುಂಬಿದ್ದು ಆ ಪರಿಸರಗಳಲ್ಲಿ ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ.

Advertisement

ಘಾಟಿ ಪರಿಸರದ ಮಳೆಗಾಲದ ನಿರ್ವಹಣೆ ಕಾಮಗಾರಿ ಆರಂಭಿಸಲಾಗಿದೆ ಘಾಟಿಯಲ್ಲಿ ಚರಂಡಿ ದುರಸ್ತಿ ಹಾಗೂ ಇನ್ನಿತರ ಅಗತ್ಯ ಕಾಮಗಾರಿಗಳನ್ನು ತ್ವರಿತವಾಗಿ ನಡೆಸಲು ಸೂಚಿಸಲಾಗಿದೆ. ಘಾಟಿಯ ಸಂಪರ್ಕ ರಸ್ತೆಯಾದ ಪುಂಜಾಲಕಟ್ಟೆ-ಚಾರ್ಮಾಡಿ ಮಧ್ಯೆ ರಸ್ತೆ ಅಭಿವೃದ್ಧಿ ಹೊಂದುತ್ತಿದ್ದು, ಮಳೆಗಾಲಕ್ಕೆ ತೊಂದರೆಯಾಗದಂತೆ ಡಾಮರೀಕರಣ ನಡೆಸಲಾಗುತ್ತಿದೆ.
-ಶಿವಪ್ರಸಾದ್‌ ಅಜಿಲ, ಕಾರ್ಯನಿರ್ವಾಹಕ ಅಭಿಯಂತರ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next