Advertisement

Delhi: ದೆಹಲಿಗೆ “ಮಂಜಿನ ಹೊದಿಕೆ”: ಗಂಭೀರ ಸ್ಥಿತಿಗೆ ತಲುಪಿದ ಮಾಲಿನ್ಯ

09:44 PM Jan 14, 2024 | Team Udayavani |

ನವದೆಹಲಿ: ವಿಪರೀತ ಚಳಿಯು ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತವಾಗಿಸಿದೆ. ಭಾನುವಾರ ನವದೆಹಲಿಯಲ್ಲಿ 3.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದ್ದು, ತೀವ್ರ ಚಳಿಯ ಪರಿಣಾಮವೆಂಬಂತೆ, ದಟ್ಟ ಮಂಜಿನ ಹೊದಿಕೆ ದೆಹಲಿಯನ್ನು ಮುಚ್ಚಿಬಿಟ್ಟಿದೆ.

Advertisement

ಮಂಜಿನಿಂದಾಗಿ ಗೋಚರತೆ ಸಮಸ್ಯೆ ಉಂಟಾಗಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ 10 ವಿಮಾನಗಳ ಪಥ ಬದಲಿಸಲಾಗಿದ್ದು, ಸುಮಾರು 100 ವಿಮಾನಗಳ ಸಂಚಾರ ವಿಳಂಬವಾಗಿದೆ. ಇನ್ನೂ ಕೆಲವು ವಿಮಾನಗಳ ಸಂಚಾರವನ್ನೇ ರದ್ದು ಮಾಡಲಾಗಿದೆ. ಇನ್ನೊಂದೆಡೆ, ಚಳಿಗಾಲದ ರಜೆ ಭಾನುವಾರಕ್ಕೆ ಮುಗಿದಿದ್ದು, ಸೋಮವಾರದಿಂದ ದೆಹಲಿಯಲ್ಲಿ ಶಾಲೆಗಳು ಆರಂಭವಾಗಲಿವೆ. ಆದರೆ, ಶೀತ ಗಾಳಿ ಹೆಚ್ಚಿರುವ ಕಾರಣ ಬೆಳಗ್ಗೆ 9 ಗಂಟೆಯ ನಂತರವೇ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ.

ಸರಣಿ ಅಪಘಾತ:

ಇದೇ ವೇಳೆ, ಗ್ರೇಟರ್‌ ನೋಯ್ಡಾದ ಪೂರ್ವ ಪೆರಿಫೆರಲ್‌ ಎಕ್ಸ್‌ಪ್ರಸ್‌ವೇನಲ್ಲಿ ಮಂಜಿನಿಂದಾಗಿ ಮುಂದಿರುವ ವಾಹನಗಳು ಕಾಣದೇ ಹಲವು ಟ್ರಕ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಪರಿಣಾಮ, ಒಬ್ಬ ವ್ಯಕ್ತಿ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.

ಬೆಚ್ಚಗಾದ ಕಾಶ್ಮೀರಕ್ಕೆ “ಹಿಮದ ಪಟ್ಟ” ಕಳೆದುಕೊಳ್ಳುವ ಭೀತಿ!

Advertisement

ಚಳಿಗಾಲದಲ್ಲಿ “ಹಿಮ ನಗರಿ’ಯಾಗಿ ಬದಲಾಗುವ ಕಾಶ್ಮೀರ ಈ ಬಾರಿ ಅಚ್ಚರಿಯ ಹವಾಗುಣಕ್ಕೆ ಸಾಕ್ಷಿಯಾಗಿದೆ. ಜನವರಿ ತಿಂಗಳಲ್ಲಿ ಬೀಳುವ ಹಿಮ ಮಳೆಯಲ್ಲಿ ಈ ಬಾರಿ ಶೇ.100ರಷ್ಟು ಕೊರತೆ ಕಂಡುಬಂದಿದೆ. ಶ್ರೀನಗರದಲ್ಲಿ ಭಾನುವಾರ ಗರಿಷ್ಠ ತಾಪಮಾನ 15 ಡಿ.ಸೆ. ದಾಖಲಾಗಿದ್ದು, ಕಳೆದ 20 ವರ್ಷಗಳಲ್ಲೇ ಜನವರಿಯಲ್ಲಿ ದಾಖಲಾದ ಅತಿ ಗರಿಷ್ಠ ತಾಪಮಾನ ಇದಾಗಿದೆ. ಕಣಿವೆಯ ಹಲವು ಭಾಗಗಳಲ್ಲಿ ತಾಪಮಾನ ವಾಡಿಕೆಗಿಂತ 6-8 ಡಿ.ಸೆ. ಹೆಚ್ಚಾಗಿದೆ. ಇದು ಕಾಶ್ಮೀರದಲ್ಲಿ ಪ್ರವಾಸೋದ್ಯಮದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ.

 

ಬಾಕ್ಸ್‌

ದೆಹಲಿಯಲ್ಲಿ ನಿರ್ಮಾಣ ಕಾಮಗಾರಿಗೆ ನಿರ್ಬಂಧ

ದೆಹಲಿ ಮತ್ತು ಎನ್‌ಸಿಆರ್‌ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಅನಗತ್ಯ ನಿರ್ಮಾಣ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಭಾನುವಾರ ನಿರ್ಬಂಧ ಹೇರಿದೆ. ಜತೆಗೆ, ಬಿಎಸ್‌-3 ಮತ್ತು ಬಿಎಸ್‌-4 ಡೀಸೆಲ್‌ ವಾಹನಗಳ ಸಂಚಾರಕ್ಕೂ ನಿಷೇಧ ಹೇರಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (458) “ಗಂಭೀರ’ ಮಟ್ಟಕ್ಕೆ ತಲುಪಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. 2024ರಲ್ಲಿ ವಾಯು ಗುಣಮಟ್ಟ ಗಂಭೀರ ಸ್ಥಿತಿಗೆ ತಲುಪಿರುವುದು ಇದೇ ಮೊದಲು.

 

Advertisement

Udayavani is now on Telegram. Click here to join our channel and stay updated with the latest news.

Next