ನವದೆಹಲಿ: ಬಹುಕೋಟಿ ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಶಿಕ್ಷೆ ಅನುಭವಿಸುತ್ತಿದ್ದ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ದ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಗೆ ಜಾರ್ಖಂಡ್ ಹೈಕೋರ್ಟ್ ಶನಿವಾರ(ಏ.17) ಜಾಮೀನು ನೀಡಿದೆ.
ಇದನ್ನೂ ಓದಿ:ದಾರಿ ತಪ್ಪಿ ದೆಹಲಿ ತಲುಪಿದ ವೃದ್ಧೆ;ಕರಳು ಬಳ್ಳಿಗೆ ಸೇರಿಸಿದ ಯೋಧ
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್ ಯಾದವ್ ಡುಮ್ಕಾ ಖಜಾನೆ ಪ್ರಕರಣಕ್ಕೆ(ಮೇವು ಹಗರಣ) ಸಂಬಂಧಿಸಿದಂತೆ ಜೈಲುಶಿಕ್ಷೆ ಅನುಭವಿಸುತ್ತಿದ್ದರು. ಜಾರ್ಖಂಡ್(ಹಿಂದಿನ ಬಿಹಾರ) ನಗರದಲ್ಲಿನ ಖಜಾನೆಯಿಂದ 3.13 ಕೋಟಿ ರೂಪಾಯಿ ತೆಗೆದ ಪ್ರಕರಣದಲ್ಲಿ ಲಾಲು ಪ್ರಸಾದ್ ದೋಷಿಯಾಗಿದ್ದರು.
2021ರ ಫೆಬ್ರುವರಿ 19ರಂದು ಲಾಲುಪ್ರಸಾದ್ ಯಾದವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಕಾನೂನು ಬಾಹಿರವಾಗಿ ಡುಮ್ಕಾ ಖಜಾನೆಯಿಂದ 3.13 ಕೋಟಿ ಹಣವನ್ನು ವಿತ್ ಡ್ರಾ ಮಾಡಿದ ಪ್ರಕರಣದಲ್ಲಿ ಕೋರ್ಟ್ ಏಳು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು.
ಲಾಲುಪ್ರಸಾದ್ ಯಾದವ್ ಈಗ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಮೂರು ಪ್ರಕರಣದಲ್ಲಿ ಜಾಮೀನು ಪಡೆದಿದ್ದರು. ಡುಮ್ಕಾ ಪ್ರಕರಣದಲ್ಲಿ ಜಾಮೀನು ಪಡೆದಿರುವ ಲಾಲುಪ್ರಸಾದ್ ಯಾದವ್ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದ ಮೇಲೆ ಮನೆಗೆ ತೆರಳಬಹುದಾಗಿದೆ ಎಂದು ವರದಿ ತಿಳಿಸಿದೆ.
ಕಳೆದ ಅಕ್ಟೋಬರ್ ನಲ್ಲಿ ಮೇವು ಹಗರಣಕ್ಕೆ ಸಂಬಂಧಿಸಿದ ಚೈಬಾಸಾ ಖಜಾನೆ ಪ್ರಕರಣದಲ್ಲಿ ಲಾಲುಪ್ರಸಾದ್ ಯಾದವ್ ಜಾಮೀನು ದೊರಕಿತ್ತು. 2017ರಿಂದ ಜೈಲುಶಿಕ್ಷೆ ಒಳಗಾಗಿದ್ದ ಲಾಲುಪ್ರಸಾದ್ ಯಾದವ್ ಅನಾರೋಗ್ಯದಿಂದ ಜಾರ್ಖಂಡ್ ನ ರಾಜೇಂದ್ರ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರವಾದ ಪರಿಣಾಮ ಜನವರಿಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.