ಬೆಂಗಳೂರು: ಬರಪೀಡಿತ ತಾಲೂಕುಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ಮೇವು ಬ್ಯಾಂಕ್ ಹಾಗೂ ಗೋಶಾಲೆ ತೆರೆಯಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಬುಧವಾರ ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಉದ್ಯೋಗ ಖಾತರಿ ಯೋಜನೆಯಡಿ 150 ದಿನ ಕೆಲಸ ನೀಡುವಂತೆ ಸೂಚನೆ ನೀಡಲಾಗಿದೆ. ಮೇವು ಖರೀದಿಗೆ ಪಶು ಸಂಗೋಪನೆ ಇಲಾಖೆಗೆ ಹಿಂದೆ 10 ಕೋಟಿ ರೂ.ನೀಡಲಾಗಿತ್ತು. ಇದೀಗ ಮತ್ತೆ 10 ಕೋಟಿ ರೂ.ನೀಡಲಾಗಿದೆ.
ಬೆಳಗಾವಿ, ಕೋಲಾರ, ಬಳ್ಳಾರಿ, ಕೊಪ್ಪಳ, ಗದಗ ಜಿಲ್ಲಾಧಿಕಾರಿಗಳಿಗೆ ಮೇವು ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ. 283 ಗ್ರಾಮಗಳಿಗೆ 524 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. 315 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಗಳನ್ನು ಗುತ್ತಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ 226.60 ಕೋಟಿ ರೂ.ಇದ್ದು ಬರ ನಿರ್ವಹಣೆಗೆ ಯಾವುದೇ ರೀತಿಯಲ್ಲೂ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಒಟ್ಟು ಮಳೆ ಕೊರತೆ ಶೇ.49ರಷ್ಟಿದೆ. ಹಿಂಗಾರು ಬೆಳೆಗಳ ಪೈಕಿ ಶೇ.90ರಷ್ಟು ಬಿತ್ತನೆ ನಡೆಯುವ ಒಳನಾಡಿನಲ್ಲಿ ಶೇ.66ರಷ್ಟು ಮಳೆ ಕೊರತೆಯಿದೆ. ಹಿಂಗಾರು ಹಂಗಾಮಿನ 31.80 ಲಕ್ಷ ಹೆಕ್ಟೇರ್ ಪ್ರದೇಶದ ಗುರಿಗೆ ಎದುರಾಗಿ ಡಿಸೆಂಬರ್ 21ರವರೆಗೆ ಶೇ.26.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಅಂದರೆ, ಶೆ.81.89ರಷ್ಟು ಬಿತ್ತನೆಯಾಗಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಗೆ 29.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ವರ್ಷ ಅಂದಾಜು 5.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ ಎಂದು ವಿವರಿಸಿದರು.
323 ಕೋಟಿ ರೂಪಾಯಿ ಇನ್‌ಪುಟ್ ಸಬ್ಸಿಡಿ ಪ್ರವಾಹ ಪೀಡಿತ ಎಂಟು ಜಿಲ್ಲೆಗಳಿಗೆ ಕೇಂದ್ರ ಸರ್ಕಾರದಿಂದ 546 ಕೋಟಿ ರೂ.ಬಿಡುಗಡೆಯಾಗಿತ್ತು. ರಾಜ್ಯ ಸರ್ಕಾರವು ಬೆಳೆನಷ್ಟವುಂಟಾಗಿದ್ದ 1,53,587 ರೈತರ ಮಾಹಿತಿ ಸಂಗ್ರಹಿಸಿ 323 ಕೋಟಿ ರೂ.ಇನ್ ಪುಟ್ ಸಬ್ಸಿಡಿಯನ್ನು ಡಿಬಿಟಿ ಮೂಲಕ ರೈತರ ಖಾತೆಗಳಿಗೆ ಜಮೆ ಮಾಡುತ್ತಿದ್ದು, 10 ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 214.03 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲೇ 6,343 ರೈತರಿಗೆ ಇನ್‌ಪುಟ್ ಸಬ್ಸಿಡಿ ಪಾವತಿಸಲಾಯಿತು.
ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಶೇ.33ರಷ್ಟು ಮಳೆ ಕೊರತೆ ಇದ್ದರೆ ಬೆಳೆನಷ್ಟಕ್ಕೆ ಇನ್‌ಪುಟ್ ಸಬ್ಸಿಡಿ ಕೊಡಬೇಕು. ಆದರೆ, ಕೇಂದ್ರ ಸರ್ಕಾರವು ಇತ್ತೀಚೆಗೆ ಶೇ.50ರಷ್ಟು ಬೆಳೆನಷ್ಟ ಆಗಿದ್ದರೆ ಮಾತ್ರ ಪರಿಗಣಿಸಿ ಎಂದು ಹೇಳಿದೆ. ಆ ರೀತಿ ಮಾಡಲು ಸಾಧ್ಯವಾಗದು. ಕೇಂದ್ರ ಗೃಹ ಸಚಿವರ ಬಳಿ ಶೀಘ್ರದಲ್ಲೇ ನಿಯೋಗದಲ್ಲಿ ತೆರಳಿ ಮನವರಿಕೆ ಮಾಡಿಕೊಡಲಾಗುವುದು.
● ಆರ್.ವಿ.ದೇಶಪಾಂಡೆ, ಕಂದಾಯ ಸಚಿವ