Advertisement
ಹೆಚ್ಚಾಗಿ ಆಡುವ ಪ್ರಸಂಗವೇ ಆದರೂ ಭಾವಪೂರ್ಣ ಅಭಿನಯ ಹಾಗೂ ಶ್ರವ್ಯಸುಖ ಗಾಯನದಿಂದಾಗಿ ಆಟ ರೈಸಿದ್ದು ಪಿಪಿಸಿ ಅಡಿಟೋರಿಯಂನಲ್ಲಿ. ಪದ್ಯಾಣ ಗಣಪತಿ ಭಟ್ ಹಾಗೂ ರವಿಚಂದ್ರ ಕನ್ನಡಿಕಟ್ಟೆಯ ದ್ವಂದ್ವಗಾಯನ ಪ್ರಸಂಗದ ಸೌಂದರ್ಯ ಹೆಚ್ಚಿಸಿತು. ಗೇಯಪರಂಪರೆಯಲ್ಲಿ ತಮ್ಮದೇ ಶೈಲಿ ಉಳಿಸಿ ಬೆಳೆಸಿಕೊಂಡಿರುವ ಪದ್ಯಾಣರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ದೊಡ್ಡ ಕೊಡುಗೆಗಳಲ್ಲಿ ರವಿಚಂದ್ರ ಕೂಡಾ ಒಬ್ಬರು. ಗುರುಶಿಷ್ಯರು ಒಂದೇ ಮೇಳದಲ್ಲಿ ಯಕ್ಷಗಾನದ ವ್ಯವಸಾಯ ಮಾಡುತ್ತಾ ಶೈಲಿಯೊಂದರ ಬೆಳವಣಿಗೆಗೆ ಕಾರಣರಾಗಿದ್ದಾರೆ. (ದಿವಾಕರ ರೈ ಸಂಪಾಜೆ) ಅಭಿಮನ್ಯುವಿಗೆ ಸುಭದ್ರೆಯಾಗಿ ಜತೆಗೂಡಿದ್ದು ತೆಂಕುಬಡಗಿನ ಪಾತ್ರಧಾರಿ ಕೋಳ್ಯೂರರಂತಹ ಹಿರಿ ತಲೆಮಾರಿನ ಪಾತ್ರಗಾರಿಕೆಯನ್ನು ಅಳವಡಿಸಿಕೊಂಡು ಹೊಸತನ ಹಾಗೂ ಪರಂಪರೆ ಎರಡರಲ್ಲೂ ಮೇಲ್ಮೆ ಸಾಧಿಸಿರುವ ಶಶಿಕಾಂತ ಶೆಟ್ಟಿ ಕಾರ್ಕಳ. ಗರತಿ ಪಾತ್ರಕ್ಕಿಂತಲೂ ಭಾವಪೂರ್ಣ ಅಭಿನಯಕ್ಕೆ ಆಪ್ತರು. Related Articles
Advertisement
ಚಕ್ರವ್ಯೂಹದ ಬಳಿಕ ಪದ್ಮವ್ಯೂಹ ನಡೆಯಿತು. ಪರಂಪರೆಯ ಶೈಲಿಯಲ್ಲಿ ಬಲಿಪ ಪ್ರಸಾದ ಭಾಗವತರು ಏರುಶ್ರುತಿಯಲ್ಲಿ ಸೈಂಧವ ವಧೆ ಕಥಾಭಾಗವನ್ನು ನಡೆಸಿದರು. ಸಂಶಪ್ತಕರನ್ನು ಸದೆಬಡಿದ ಕೃಷ್ಣಾರ್ಜುನರು ಮರಳಿ ಬರುವಾಗ ಅಭಿಮನ್ಯುವಿನ ಮರಣದ ದಾರುಣ ವಾರ್ತೆ ಕೇಳಿ ಸಹಿಸಿಕೊಳ್ಳಲು ಕೃಷ್ಣ (ವಾಸುದೇವ ರಂಗ ಭಟ್) ಪಾರ್ಥ(ಸುಬ್ರಾಯ ಹೊಳ್ಳ)ನನ್ನು ಸನ್ನದ್ಧಗೊಸುತ್ತಾನೆ. ಇಲ್ಲಿಯೂ ಸುಭದ್ರೆಯಾಗಿ ಮಿಂಚಿದವರು ಶಶಿಕಾಂತ್ ಶೆಟ್ಟರು. ಮಗನ ಅಗಲುವಿಕೆಯ ನೋವಿನ ವಾರ್ತೆಯನ್ನು ಪತಿಯ ಬಳಿ ಹೇಳುವ ಭಾವನಾತ್ಮಕ ಸನ್ನಿವೇಶ ಮನಮುಟ್ಟಿತು. ಸೂರ್ಯಾಸ್ತದೊಳಗೆ ಸೈಂಧವ(ಶಶಿಕಿರಣ ಕಾವು)ನನ್ನು ವಧಿಸುವ ಮನಸ್ಸಂಕಲ್ಪ ಮಾಡಿ ಹೊರಡುವುದು, ದ್ರೋಣ (ಸುನಿಲ್ ಪಲ್ಲೆಮಜಲು) ಕೌರವ (ಲಕ್ಷ್ಮಣ ಮರಕಡ)ನ ಕೊಂಕುನುಡಿಗಳು, ಸೈಂಧವನಿಗೆ ಮರಣಭೀತಿಯಾಗುವುದು, ಪದ್ಮವ್ಯೂಹದ ರಚನೆ, ಯುದ್ಧ, ಸೂರ್ಯನಿಗೆ ಅಡ್ಡಲಾಗಿ ಸುದರ್ಶನ ಚಕ್ರ ಹಿಡಿದ ಕೃಷ್ಣ ಕತ್ತಲೆಯ ವಾತಾವರಣ ನಿರ್ಮಿಸಿ ಸೈಂಧವನ ವಿಜಯೋತ್ಸವಕ್ಕೆ ಅನುವು ಮಾಡಿಕೊಡುವುದು, ಹೇಳಿದ್ದನ್ನು ಮಾಡಲಾಗದೇ ಅರ್ಜುನ ಅಗ್ನಿಗಮನಗೈಯುವ ಮನ ಮಾಡಿದಾಗ ಕೃಷ್ಣನ ಆಜ್ಞೆಯಂತೆ ಸೈಂಧವ ವಧೆ ಕಥಾಹಂದರ. ಸಾತ್ಯಕಿಯಾಗಿ ಲೋಕೇಶ್ ಮುಚ್ಚಾರು ಉತ್ತಮ ಅಭಿನಯ. ಹರಿರಾಜ ಕಟೀಲು, ಅಜಿತ್ ಪುತ್ತಿಗೆ, ಪ್ರಜ್ವಲ್ ಇರುವೈಲು, ಶ್ರೀನಿಧಿ, ಶಶಾಂಕ್, ಶಿವಾನಂದ ಪೆರ್ಲ, ವೆಂಕಟೇಶ್ ಕಲ್ಲುಗುಂಡಿ, ಆದಿತ್ಯ ಹಾಗೂ ಶಿವರಾಜ್ ಕಲಾವಿದರಾಗಿ ಯಶಸ್ವಿಯಾಗಿದ್ದರು. ಚೈತನ್ಯ ಪದ್ಯಾಣರ ಚೆಂಡೆ, ಕೃಷ್ಣ ಪ್ರಕಾಶ ಉಳಿತ್ತಾಯರ ಮದ್ದಳೆ ಹಿಮ್ಮೇಳದ ಹೈಲೈಟ್.
ಲಕ್ಷ್ಮೀ ಮಚ್ಚಿನ