ಮೈಸೂರು: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ(ಸಿಎಫ್ಟಿಆರ್‌ಐ)ದಲ್ಲಿ ನಡೆಯುವ ಸಂಶೋಧನೆಗಳು, ಕಾರ್ಯವೈಖರಿಗಳ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಮುಕ್ತ ದಿನಕ್ಕೆ ಮೊದಲ ದಿನದಂದು ಉತ್ತಮ ಪ್ರತಿಕ್ರಿಯೆ ದೊರೆಯಿತು.
ಸಿಎಫ್‌ಟಿಆರ್‌ಐನ ಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಸೋಮವಾರ ನಡೆದ ಮುಕ್ತ ದಿನದ ಹಿನ್ನೆಲೆಯಲ್ಲಿ ಸಿಎಫ್‌ಟಿಆರ್‌ಐ ಭೇಟಿ ನೀಡಿದ ವಿದ್ಯಾರ್ಥಿಗಳು, ಜನಸಾಮಾನ್ಯರು, ಆಹಾರ ಸಂಶೋಧನೆಯಲ್ಲಿ ಸಂಸ್ಥೆ ನಡೆಸುತ್ತಿರುವ ವಿಜ್ಞಾನ-ತಂತ್ರಜ್ಞಾನದ ಆವಿಷ್ಕಾರ, ಕಾರ್ಯ ವಿಧಾನದ ಬಗ್ಗೆ ಮಾಹಿತಿ ಪಡೆದರು.
ಅಲ್ಲದೇ ಸಿಎಫ್‌ಟಿಆರ್‌ಐನ 20 ನಾನಾ ವಿಭಾಗದಿಂದ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆ, ವಸ್ತುಪ್ರದರ್ಶನ, ಪ್ರಯೋಗಾಲಯಗಳ ವಿವರಣೆ, ಯಂತ್ರಗಳ ಕಾರ್ಯ ವಿಧಾನವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಮುಕ್ತ ದಿನದ ಅಂಗವಾಗಿ ಪ್ರದರ್ಶನಕ್ಕಿಡಲಾಗಿದ್ದ ಸ್ಥಳದಲ್ಲೇ ದೋಸೆ ಮಾಡುವ ವಿಧಾನ ನೋಡುಗರ ಪ್ರಮುಖ ಆಕರ್ಷಣೆಗೆ ಕಾರಣವಾಯಿತು.
ಮುದ್ದೆ-ಉಪ್ಸಾರು ರುಚಿ: ಓಪನ್ ಡೇ ಹಿನ್ನೆಲೆಯಲ್ಲಿ ಸಿಎಫ್ಟಿಆರ್‌ಐ ವತಿಯಿಂದ ಸಂಶೋಧನೆ ಮಾಡಲಾಗಿರುವ ರಾಗಿ ಮುದ್ದೆ ತಯಾರಿಕೆ ಯಂತ್ರ ಪ್ರದರ್ಶನದ ಕೇಂದ್ರಬಿಂದುವಾಗಿತ್ತು. ಸ್ಥಳದಲ್ಲೇ ಮುದ್ದೆ ಮಾಡುವ ವಿಧಾನವನ್ನು ಕಣ್ಣಾರೆ ಕಂಡು ಅಗತ್ಯ ಮಾಹಿತಿ ಪಡೆದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು, ಮುದ್ದೆ-ಉಪ್ಸಾರು ಸವಿದು ಬಾಯಿಚೆಪ್ಪರಿಸಿದರು.
ಯಂತ್ರದಲ್ಲಿ ಯಾವುದೇ ಗಂಟಿಲ್ಲದೆ ಹೊರ ಬಂದ 100 ಗ್ರಾಂನ ಮೆತ್ತನೆ ಮುದ್ದೆಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಹೀಗಾಗಿ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಮುದ್ದೆ ಮಾಡುವ ವಿಧಾನ ತಿಳಿದುಕೊಳ್ಳುವ ಜತೆಗೆ ಮುದ್ದೆ ಸವಿದರು. ಸಿಎಫ್ಟಿಆರ್‌ಐ ಸಿಬ್ಬಂದಿ ಗಂಟೆಗೆ 250 ಮುದ್ದೆಯನ್ನು ಸ್ಥಳದಲ್ಲೇ ಮಾಡಿ ತೋರಿಸಿದ ಪರಿಣಾಮ, ಕೇವಲ ಒಂದೂವರೆ ಗಂಟೆಯಲ್ಲೇ ಅಂದಾಜು 700 ಮುದ್ದೆ ಖಾಲಿ ಆಯಿತು. ಸಂಜೆಯೊಳಗೆ ಸಾವಿರಕ್ಕೂ ಹೆಚ್ಚು ಮುದ್ದೆಗಳು ಖಾಲಿಯಾಗಿತ್ತು.
6 ಸೆಕೆಂಡಿಗೆ 1 ದೋಸೆ: ಕಳೆದ 10 ವರ್ಷದ ಹಿಂದೆಯೇ ಸಿಎಫ್‌ಟಿಆರ್‌ಐ ಕಂಡು ಹಿಡಿದಿರುವ ದೋಸೆ ತಯಾರಿಕೆ ಯಂತ್ರ ಪ್ರದರ್ಶನದಲ್ಲಿ ಗಮನ ಸೆಳೆಯಿತು. ಆರು ಸೆಕೆಂಡಿಗೆ 1 ಹಾಗೂ ಗಂಟೆಗೆ 380 ದೋಸೆ ಹೊರ ಬರುತ್ತಿದ್ದ ವಿಶೇಷ ಪ್ರಯೋಗವನ್ನು ಕಂಡು ವಿದ್ಯಾರ್ಥಿಗಳು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.
ಉಳಿದಂತೆ ಸಿಎಫ್‌ಟಿಆರ್‌ಐ ವತಿಯಿಂದ ತಯಾರಿಸಿದ ಸೇಬು, ಸೀಬೆಹಣ್ಣು , ದಾಳಿಂಬೆ, ಕಿತ್ತಲೆ, ದ್ರಾಕ್ಷಿ ಜ್ಯೂಸ್ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಉಳಿದಂತೆ ಮೊಟ್ಟೆಯಲ್ಲಿ ಮಾಡಿದ 10ಕ್ಕೂ ಬಗೆಯ ತಿನಿಸು, ಕ್ಯಾರೆಟ್ ಹಲ್ವಾ, ಲಸ್ಸಿ, ಚಕೂಲಿ ಮುರುಕು, ಪಸ್ತಾ ಮಾಡುವ ಬಗೆ ಸಾರ್ವಜನಿಕರು ಮಾಹಿತಿ ಪಡೆದರು.