ರಾಜಧಾನಿ ಬೆಂಗಳೂರಿನ ಕೆಲವು ಶಾಲೆಗಳಲ್ಲಿ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್ಸ್, ಗರ್ಭಪಾತ ಗುಳಿಗೆ, ಮದ್ಯ ಮಿಶ್ರಿತ ನೀರು ಪತ್ತೆ ಪ್ರಕರಣ ನಿಜಕ್ಕೂ ಆಘಾತಕಾರಿ.
ಹದಿಮೂರರಿಂದ ಹದಿನೈದು ವರ್ಷದ ಒಳಗಿನ ಮಕ್ಕಳ ಬ್ಯಾಗ್‌ನಲ್ಲಿ ಇಂತಹ ವಸ್ತುಗಳು ಪತ್ತೆಯಾಗಿರುವುದು ಪೋಷಕ ವಲಯಕ್ಕೂ ಆತಂಕ ಮೂಡಿಸಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಯೋಚಿ ಸುವಂತಾಗಿದೆ. ರಾಜ್ಯ ಸರಕಾರ ಅದರಲ್ಲೂ ಶಿಕ್ಷಣ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಜತೆ ಚರ್ಚಿಸಿ ನಿಯಂತ್ರಣ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.ಎಲ್ಲದಕ್ಕಿಂತ ಹೆಚ್ಚಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗರೂಕತೆ ವಹಿಸಬೇಕು. ಮಕ್ಕಳ ಚಲನ ವಲನಗಳ ಬಗ್ಗೆ ನಿಗಾ ಇಡಬೇಕು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳು ಮಕ್ಕಳಲ್ಲಿ ಹೆಚ್ಚುತ್ತಿದೆ. ನಾನಾ ಆ್ಯಪ್‌ಗ್ಳು, ಅಶ್ಲೀಲ ವೆಬ್‌ಸೈಟ್ ವೀಕ್ಷಣೆಯೂ ಹೆಚ್ಚುತ್ತಿದೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ. ಶಾಲಾ-ಕಾಲೇಜು ಸಮೀಪ ಮಾದಕ ವಸ್ತು ಮಾರಾಟ ಪತ್ತೆ ಒಂದು ರೀತಿಯಲ್ಲಿ ಆತಂಕ ಮೂಡಿಸಿದರೆ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್, ಗರ್ಭಪಾತ ಗುಳಿಗೆ ಅನಾಹುತಕಾರಿಯೇ.
ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಸುಮ್ಮನಾಗುವಂತಿಲ್ಲ. ಹಾಗೆಂದು ಎಲ್ಲ ಮಕ್ಕಳ ಮೇಲೂ ಸಂಶಯ ಸಲ್ಲ. ಸರಕಾರ ಈಗಲಾದರೂ ಎಚ್ಚೆತ್ತು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡಲು ಮುಂದಾಗುವುದು ಸರಿ ಯಾದ ಕ್ರಮ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹಲವು ದೇಶಗಳಲ್ಲಿ ಇದು ಜಾರಿಯಲ್ಲಿದ್ದು ಅಂತಾರಾಷ್ಟ್ರೀಯ ಸಂಸ್ಥೆ ಗಳಾದ ಯುನಿಸೆಫ್ ಮತ್ತು ಯುನೆಸ್ಕೊ ಸಂಸ್ಥೆಗಳು ಇದಕ್ಕೆ ಸೂಕ್ತ ಪಠ್ಯಕ್ರಮ ಹಾಗೂ ಮಾಡ್ನೂಲ್‌ಗಳನ್ನು ತಯಾರಿಸಿವೆ ಎಂಬುದನ್ನೂ ಉಲ್ಲೇಖಿಸಿದ್ದಾರೆ. ಆದರೆ ಲೈಂಗಿಕ ಶಿಕ್ಷಣ ನೀಡುವುದು ಸರಿಯಾದರೂ ಅದರಿಂದ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಲಾಗದು. ಶಿಕ್ಷಣ ಇಲಾಖೆ ಈ ಕುರಿತು ಜಾಗೃತಿ ಅಭಿಯಾನ ಅಥವಾ ಶಾಲಾ-ಕಾಲೇಜುಗಳಲ್ಲಿ ಕಾರ್ಯಾಗಾರ ದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಲ್ಲಿ ವಿದ್ಯಾರ್ಥಿ- ಪೋಷಕರನ್ನು ಕರೆದು ಮುಕ್ತವಾಗಿ ಚರ್ಚೆಗೆ ಅವಕಾಶ ಕೊಡಬೇಕು. ಜತೆಗೆ ಅಪ್ರಾಪ್ತ ವಯಸ್ಸಿನಲ್ಲಿ ಲೈಂಗಿಕ ಸಂಪರ್ಕ, ಗರ್ಭಪಾತ ಗುಳಿಗೆ ಸೇವ ನೆಯಿಂದ ಭವಿಷ್ಯದಲ್ಲಿ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಬೇಕಾಗಿದೆ. ಈ ಕೆಲಸ ತತ್‌ಕ್ಷಣವೇ ಆಗಬೇಕು.
ಜತೆಗೆ ಶಾಲಾ ಮಕ್ಕಳಿಗೆ ಕಾಂಡೋಮ್ಸ್, ಗರ್ಭಪಾತ ಗುಳಿಗೆ ಮಾರಾ ಟಕ್ಕೂ ನಿಯಂತ್ರಣ ಹೇರಬೇಕು. ಅಪ್ರಾಪ್ತರಿಗೆ ಮದ್ಯ, ಕಾಂಡೋಮ್ಸ್, ಗರ್ಭಪಾತ ಗುಳಿಗೆ ಸುಲಭವಾಗಿ ಸಿಗುತ್ತಿದೆ ಎಂದರೆ ಶಾಲಾ-ಕಾಲೇಜು ಸುತ್ತಮುತ್ತಲ ಮಾದಕ ವಸ್ತು ಸೇರಿ ಅಪ್ರಾಪ್ತರಿಗೆ ಇಂತಹ ವಸ್ತು ಮಾರಾಟ ಮಾಡುವ ಜಾಲವೂ ಇರಬಹುದು. ಈ ಬಗ್ಗೆ ಪೊಲೀಸ್ ಇಲಾಖೆಯೂ ಗಮನಹರಿಸಬೇಕು. ರಾಜಧಾನಿ ಬೆಂಗಳೂರು ಐಟಿ-ಬಿಟಿ ಸಿಟಿ, ಗ್ರೀನ್ ಸಿಟಿ ಎಂದೆಲ್ಲ ಖ್ಯಾತಿ ಪಡೆದಿದೆ. ಆದರೆ ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ ಕಾಂಡೋಮ್, ಗರ್ಭಪಾತ ಗುಳಿಗೆ ಸಿಗುತ್ತಿವೆ, ಶಾಲಾ-ಕಾಲೇಜುಗಳ ಸಮೀಪ ಮಾದಕ ವಸ್ತು ಮಾರಾಟವಾಗುತ್ತಿದೆ ಎಂದರೆ ಬೇರೆ ರೀತಿಯ ಸಂದೇಶ ಹೋಗುತ್ತದೆ. ಹೀಗಾಗಿ, ಸರಕಾರ ತತ್‌ಕ್ಷಣ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು. ಶಾಲಾ ಆಡಳಿತ ಮಂಡಳಿಗಳು ಕಟ್ಟುನಿಟ್ಟಾಗಿರಬೇಕು. ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಜತೆಗೆ ಅವರ ಚಲನವಲನ, ಇತರೆ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು.