ಕೇಪ್‌ಟೌನ್: ಮೊದಲ ವನಿತಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಪಂದ್ಯಾವಳಿಗಾಗಿ ಹರಾಜು ಪ್ರಕ್ರಿಯೆ ಸಮೀಪಿ ಸುತ್ತಿದೆಯಾದರೂ ಮೊದಲು ನಮ್ಮ ಗಮನ ಪಾಕಿಸ್ಥಾನದೆದುರಿನ ವಿಶ್ವಕಪ್ ಪಂದ್ಯದತ್ತ ಎಂಬುದಾಗಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ಫೆ. 10ರಂದು ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಲಿದೆ. ಭಾರತ ಫೆ. 12ರಂದು ಪಾಕಿ ಸ್ಥಾನ ವಿರುದ್ಧ ಮೊದಲ ಪಂದ್ಯವಾಡಲಿದೆ. ಇದರ ಮರುದಿನವೇ ಮುಂಬಯಿಯಲ್ಲಿ ಡಬ್ಲ್ಯುಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ.
“ನಮ್ಮ ಮೊದಲ ಆದ್ಯತೆ ವಿಶ್ವಕಪ್ ಪಂದ್ಯಾವಳಿ. ವಿಶ್ವಕಪ್‌ಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಐಸಿಸಿ ಟ್ರೋಫಿಯ ಮೇಲೆ ನಮ್ಮೆಲ್ಲರ ಕಣ್ಣು ನೆಟ್ಟಿದೆ. ಇಲ್ಲಿ ಆರಂಭಿಕ ಪಂದ್ಯದಲ್ಲೇ ನಾವು ಪಾಕಿಸ್ಥಾನವನ್ನು ಎದುರಿಸಲಿದ್ದೇವೆ. ಈ ಪಂದ್ಯದತ್ತ ಹೆಚ್ಚಿನ ಗಮನ ಹರಿಸಬೇಕಿದೆ’ ಎಂದು ಕೌರ್ ಹೇಳಿದರು.
ಮೊನ್ನೆಯಷ್ಟೇ ಶಫಾಲಿ ವರ್ಮ ನೇತೃತ್ವದ ಅಂಡರ್-19 ತಂಡ ಭಾರತಕ್ಕೆ ಪ್ರಪ್ರಥಮ ವಿಶ್ವಕಪ್ ತಂದಿತ್ತು ಇತಿಹಾಸ ನಿರ್ಮಿಸಿದೆ. ಇದ ರೊಂದಿಗೆ ಇನ್ನೊಂದು ವಿಶ್ವಕಪ್ ಗೆಲ್ಲುವುದೂ ಭಾರತದ ಗುರಿ. ಈ ಕುರಿತು ಪ್ರತಿಕ್ರಿಯಿಸಿದ ಕೌರ್, “ನಮಗೆ ಕಿರಿಯರು ಸ್ಫೂರ್ತಿ ಆಗಿದ್ದಾರೆ. ಉತ್ತಮ ನಿರ್ವಹಣೆ ನೀಡಲು ಅವರೆಲ್ಲ ನಮಗೆ ಪ್ರೇರಣೆ ಆಗಿದ್ದಾರೆ. ಕಿರಿಯರು ಈವರೆಗೆ ಏನು ಸಾಧಿಸಿದ್ದಾರೋ ಅದನ್ನು ನಾವು ಈವರೆಗೆ ಸಾಧಿಸಿಲ್ಲ. ಇಲ್ಲಿನ ಅವಕಾಶವನ್ನು ಭರಪೂರ ಬಳಸಿಕೊಳ್ಳಬೇಕಿದೆ’ ಎಂದರು.
“ಐಪಿಎಲ್ ಮಾದರಿಯ ಚೊಚ್ಚಲ ವನಿತಾ ಪ್ರೀಮಿಯರ್ ಲೀಗ್ ಕೂಡ ಆಸ್ಟ್ರೇಲಿಯದ ಬಿಗ್ ಬಾಶ್ ಲೀಗ್, ಇಂಗ್ಲೆಂಡ್‌ನ ದಿ ಹಂಡ್ರೆಡ್ ಪಂದ್ಯಾವಳಿಯಂತೆ ಭಾರತೀಯ ವನಿತಾ ಕ್ರಿಕೆಟ್‌ನ ಅಭ್ಯುದಯಕ್ಕೆ ಕಾರಣವಾಗಲಿದೆ. ಇಂಥದೊಂದು ಪಂದ್ಯಾವಳಿಗಾಗಿ ನಾವು ಅದೆಷ್ಟೋ ವರ್ಷದಿಂದ ಕಾಯುತ್ತಿದ್ದೆವು.
ಮುಂದಿನ 2-3 ತಿಂಗಳು ಭಾರತದ ವನಿತಾ ಕ್ರಿಕೆಟ್ ಪಾಲಿಗೆ ಬಹಳ ಮುಖ್ಯವಾದುದು’ ಎಂದು ಈಗಾಗಲೇ ವನಿತಾ ಬಿಗ್ ಬಾಶ್, ದಿ ಹಂಡ್ರೆಡ್, ಕಿಯಾ ಸೂಪರ್ ಲೀಗ್‌ನಲ್ಲಿ ಆಡಿರುವ ಹರ್ಮನ್‌ಪ್ರೀತ್ ಕೌರ್ ಅಭಿಪ್ರಾಯಪಟ್ಟರು.